ಮಹಿಳೆಯರಿಗೆ ಕೌಟುಂಬಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಸಕ್ರಿಯ

ಮಾರ್ಚ್ 8 ಮಹಿಳಾ ದಿನಾಚರಣೆ. ಮಹಿಳೆಯರ ಸಮಸ್ಯೆ ಮತ್ತು ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲು ರೂಪಿತಗೊಂಡಿರುವ ವಿಶೇಷ ದಿನ..
ಮಹಿಳೆಯರಿಗೆ ಕೌಟುಂಬಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಸಕ್ರಿಯ

ಮಾರ್ಚ್ 8 ಮಹಿಳಾ ದಿನಾಚರಣೆ. ಮಹಿಳೆಯರ ಸಮಸ್ಯೆ ಮತ್ತು ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲು ರೂಪಿತಗೊಂಡಿರುವ ವಿಶೇಷ ದಿನ. ಇಂದು ಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ,  ವರದಕ್ಷಿಣೆ ಕಿರುಕುಳ ಹೀಗೆ ಹತ್ತು ಹಲವಾರು ಸಮಸ್ಯೆಗಳು ಮಹಿಳೆಯನ್ನು ಆವರಿಸಿವೆ. ಅಂತಹ ಸಮಸ್ಯೆಗಳನ್ನು ಆಲಿಸಲು ಇಂದು ರಾಜ್ಯದಲ್ಲಿ ಅನೇಕ ಸಂಘ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮಹಿಳಾ ಆಯೋಗವು ಮಹಿಳೆಯರ ಸಮಸ್ಯೆಗಳ ಬಗ್ಗೆ ಗಮನ ಹರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಮಸ್ಯೆಯನ್ನು ಹೊತ್ತು ಆಯೋಗದ ಕದ ತಟ್ಟುತ್ತಿರುವವರಿಗೆ ಸಾಂತ್ವನ ಹೆಳುವ ಮೂಲಕ ನ್ಯಾಯವನ್ನು ಒದಗಿಸುತ್ತಿದೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಆಯೋಗದ ಸಾರಥ್ಯ ವಹಿಸಿರುವ ಮಾನಸ ಮಂಜುಳಾ ಅವರೊಂದಿಗಿನ ಸಂದರ್ಶನ ಇಂತಿದೆ...

1. ಮಹಿಳೆಯರ ನೋವುಗಳಿಗೆ ಸಾಂತ್ವನ ನೀಡುವಲ್ಲಿ ಮಹಿಳಾ ಆಯೋಗದ ಪಾತ್ರವೇನು?

ಸಮಸ್ಯೆಗಳನ್ನು ಹೊತ್ತು ಬರುವ ಮಹಿಳೆಯರಿಗೆ ಆಯೋಗ ಶೇ. 100 ರಷ್ಟು ಸಾಂತ್ವನ ನೀಡುವಲ್ಲಿ ಯಶಸ್ವಿಯಾಗಿದೆ. ಆಯೋಗದ ಬಳಿ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿರುವವರಿಗೆ ತಾಯಿಯ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅತ್ಯಾಚಾರ, ವರದಕ್ಷಿಣೆ ಕಿರುಕುಳ ಮತ್ತಿತರೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮನೆ ರೀತಿಯ ವಾತಾವರಣದಲ್ಲಿ ಸಾಂತ್ವನ ಬೇಕಾಗುತ್ತದೆ. ಅಂತಹ ವಾತಾವರಣವನ್ನು ಕಲ್ಪಿಸಿ ಮಹಿಳೆಯರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.

2. ಮಹಿಳಾ ಆಯೋಗದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಹೆಚ್ಚಿನವು ಯಾವುದಕ್ಕೆ ಸಂಬಂಧಿಸಿದವು?

ಮಹಿಳಾ ಆಯೋಗದಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿವೆ. ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಅಂತಹ ಸಂದರ್ಭದಲ್ಲಿ ಕೆಲವು ಮಹಿಳೆಯರು ಆಯೋಕ್ಕೆ ದೂರುಗಳನ್ನು ನೀಡಲು ಮುಂದೆ ಬರುತ್ತಾರೆ. ಆದರೆ, ಬಹುತೇಕರು ಹಿಂದೇಟು ಹಾಕುತ್ತಾರೆ. ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಐಟಿ ಬಿಟಿ ಕ್ಷೇತ್ರಗಳು ಇದರಿಂದ ಹೊರತಾಗಿಲ್ಲ. ಇಂತಹ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ, ಸಮಾಜ ತಮ್ಮ ಬಗ್ಗೆ ಏನು ತಿಳಿಯುತ್ತದೆಯೋ ಎನ್ನುವ ಬಗ್ಗೆ ಸಂಕೋಚ ಮನೋಭಾವ ಹೊಂದಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಇಂದು ಆಯೋಗದಲ್ಲಿ ದಾಖಲಾಗುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಕಳವು ಮತ್ತು ಮಾರಾಟ ಪ್ರಕರಣಗಳು ಹೆಚ್ಚುತ್ತಿವೆ. ಇದೂಂದು ಆತಂಕಕಾರಿ ಬೆಳವಣಿಗೆ.

3. ಆದರೆ, ಮಹಿಳಾ ಆಯೋಗದಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆಯಲ್ಲ?

ಪ್ರತಿ ಉತ್ತಮ ಕೆಲಸದ ಹಿಂದೆ ವ್ಯತಿರಿಕ್ತವಾಗಿ ಮಾತನಾಡುವವರು ಇರುತ್ತಾರೆ. ನಮ್ಮ ಆಯೋಗ ಮಹಿಳೆಯರ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಶೇ. 100 ರಷ್ಟು ನ್ಯಾಯ ದೊರಕಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಕೆಲವು ಮಹಿಳೆಯರು ಸುಳ್ಳು ದೂರನ್ನು ದಾಖಲಿಸಿರುತ್ತಾರೆ. ಅಂತಹ ಸಮಯದಲ್ಲಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಸತ್ಯ ಅರಿವಿಗೆ ಬರುತ್ತದೆ. ಕೆಲವು ಹಿರಿಯರ ನಾಗರಿಕರ ಮೇಲೆ ನೀಡಿರುವ ದೂರುಗಳನ್ನು ಪರಿಶೀಲಿಸುವಾಗ ಮತ್ತು ಅವರೊಂದಿಗೆ ವಿಚಾರಣೆ ನಡೆಸುವಾಗ ಶೇ. 1 ಅಥವಾ 2 ರಷ್ಟು ವ್ಯತ್ಯಾಸಗಳಾಗಿರುವಂತಹ ಸಾಧ್ಯತೆಗಳಿರುತ್ತವೆ. ಆಯೋಗದ ಬಗ್ಗೆ ಕಾಳಜಿ ಇಲ್ಲದವರು ಮಹಿಳಾ ಆಯೋಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳುವುದು ಸಾಮಾನ್ಯ.

4. ಪ್ರಸ್ತುತ ಇದುವರೆಗೂ ಮಹಿಳಾ ಆಯೋಗದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಎಷ್ಟು?
ನಾನು ಅಧ್ಯಕ್ಷಳಾಗಿ ನೇಮಕಗೊಳ್ಳುವ ಸಂದರ್ಭದಲ್ಲಿ 1,700 ಪ್ರಕರಣಗಳು ದಾಖಲಾಗಿದ್ದವು. ಈಗ 2,500 ಪ್ರಕರಣಗಳು ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ಪರಿಶೀಲನೆ ನಡೆಸಬೇಕಾಗುತ್ತದೆ. ಈ ಎಲ್ಲ ಪ್ರಕರಣಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ನಿರತವಾಗಿದೆ.

5. ಎಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳಾ ಆಯೋಗ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ?

ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಆಯೋಗ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ವರದಿಯನ್ನು ಸಲ್ಲಿಸಬೇಕು ಎಂದು ನಿಯಮವೇನಿಲ್ಲ. ಪ್ರಕರಣಗಳ ಬಗ್ಗೆ ಬೆಳೆಕು ಬೆಳಕು ಚೆಲ್ಲುವ ನಿಟ್ಟಿನಲ್ಲಿ 17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, 17 ಜಿಲ್ಲೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ, ಸ್ಥಳೀಯ ಎನ್‌ಜಿಒ, ಅಧಿಕಾರಿಗಳ ಮೂಲಕ ಹಾಗೂ ಮಾಧ್ಯಮಗಳ ಮೂಲಕ ಮಾಹಿತಿ ಪಡೆದಿದ್ದೇವೆ. ಅಲ್ಲಿನ ಮಹಿಳೆಯರ ಸಮಸ್ಯೆಗಳು ಹಾಗೂ ಪ್ರಾದೇಶಿಕವಾಗಿ ಇರುವ ಸಮಸ್ಯೆಗಳ ಬಗ್ಗೆ ವರದಿ ಸಲ್ಲಿಸಿದ್ದೇವೆ. ಪ್ರತಿ ವರ್ಷದಲ್ಲಿ ವಾರ್ಷಿಕ ವರದಿ ಮಾಡುತ್ತೇವೆ. ಫಾಲೋಆಪ್ ಪ್ರಕರಣ, ತನಿಖೆ ನಡೆಯುತ್ತಿರುವ ಪ್ರಕರಣ, ಸೇರಿದಂತೆ ಪ್ರತ್ಯೇಕ ವಿಭಾಗದಲ್ಲಿ ಪ್ರಕರಣಗಳ ವಾರ್ಷಿಕ ವರದಿ ತಯಾರಿಸಿ ಸರ್ಕಾರಕ್ಕೆ ಸೇರಿದಂತೆ ಮಾಧ್ಯಮಗಳಿಗೆ ವರದಿ ನೀಡಲಾಗುತ್ತಿದೆ.

6. ರಾಜ್ಯದಲ್ಲಿ ಮಹಿಳಾ ಆಯೋಗ ಅಸ್ತಿತ್ವದಲ್ಲಿದ್ದರೂ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಕೌಟುಂಬಿಕ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲವೇಕೆ?


ಮೂಗು ಇರುವವರೆಗೂ ನೆಗಡಿ ತಪ್ಪಿದ್ದಲ್ಲ ಎನ್ನುವ ರೀತಿಯಲ್ಲಿ ಸಮಾಜದಲ್ಲಿ ಇಂತಹ ಸಮಸ್ಯೆಗಳಿಗೆ ಕೊನೆ ಇರುವುದಿಲ್ಲ. ಮಹಿಳೆಯರು ಇಂದು ಪುರುಷನಿಗೆ ಸರಿಸಮನಾಗಿ ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿಯೂ ಇಂತಹ ಸಮಸ್ಯೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿದ್ದವು. ಆದರೆ, ಅವುಗಳನ್ನು ಹೊರ ಹಾಕುವ ಸಾಮರ್ಥ್ಯ ಮತ್ತು ಕಾನೂನುಗಳ ಬಗ್ಗೆ ಮಹಿಳೆಯರಿಗೆ ಅರಿವಿರಲಿಲ್ಲ. ಆದರೆ, ಇಂದು ಮಹಿಳೆ ತನ್ನದೇ ಆದ ಸ್ವಾಸಾಮರ್ಥ್ಯ ಹೊಂದಿದ್ದಾಳೆ. ಕಾನೂನು ಮತ್ತು ಕಟ್ಟಳೆಗಳ ಬಗ್ಗೆ ಮಹಿಳೆ ಸಮರ್ಪಕವಾದ ಅರಿವನ್ನು ಹೊಂದಿದ್ದಾಳೆ. ಅದೇ ರೀತಿ ಮಾಧ್ಯಮಗಳು ಹಿಂದಿಗಿಂತಲೂ ಇಂದು ಸದೃಢವಾಗಿವೆ. ಆದ್ದರಿಂದ ಇಂದು ಮಹಿಳೆಯರ ಮೇಲೆ ಯಾವುದೇ ಪ್ರಕರಣಗಳು ಘಟಿಸಿದರೂ ಅವುಗಳನ್ನು ಧೈರ್ಯದಿಂದ ಪ್ರಶ್ನಿಸುವ ಮನೋಭಾವ ಇಂದು ಮಹಿಳೆಯರಲ್ಲಿ ಹೆಚ್ಚುತ್ತಿದೆ. ಆದ್ದರಿಂದ ಇಂತಹ ಪ್ರಕರಣಗಳು ಹೆಚ್ಚಾಗಿ ಹೊರ ಬರಲು ಕಾರಣವಾಗುತ್ತಿದೆ. ಮಹಿಳಾ ಆಯೋಗ ಇಂತಹ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

7. ಆ್ಯಸಿಡ್ ದಾಳಿ ಪ್ರಕರಣಗಳನ್ನು ತಡೆಗಟ್ಟಲು ಮಹಿಳಾ ಆಯೋಗ ತೆಗೆದುಕೊಂಡಿರುವ ಕ್ರಮಗಳೇನು?

ಆ್ಯಸಿಡ್ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತನ್ನದೇ ಆದ ಮಾರ್ಗದರ್ಶನಗಳನ್ನು ನೀಡಿದೆ. ಮೆಡಿಕಲ್ ಸ್ಟೋರ್ಗಳು ಈ ಸಂಬಂಧ ಕಡ್ಡಾಯವಾಗಿ ಕೆಲವೊಂದು ಮಾರ್ಗದರ್ಶನಗಳನ್ನು ಅನುಸರಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರವೂ ಮೆಡಿಕಲ್ ಸ್ಟೋರ್ಗಳಿಗೆ ಪರವಾನಗಿ ನೀಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನಗಳನ್ನು ಅನುಸರಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತರಬೇಕು. ಅದೇ ರೀತಿ ಆಯೋಗವು ವಿವಿಧ ರೀತಿಯ ಸ್ಥಳಿಯ ಸಂಸ್ಥೆಗಳೊಂದಿಗೆ ಸೇರಿಕೊಂಡು ಇಂತಹ ಪ್ರಕರಣಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ್ಯಸಿಡ್ ದಾಳಿಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಆಯೋಗ ವರದಿಯನ್ನು ನೀಡಿದೆ.

8. ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಕಾಯಕಲ್ಪ ಒದಗಿಸುವಲ್ಲಿ ಮಹಿಳಾ ಆಯೋಗ ಕಂಡುಕೊಂಡಿರುವ ಪರ್ಯಾಯ ಮಾರ್ಗಗಳೇನು?

ಆ್ಯಸಿಡ್ ದಾಳಿಗೆ ಒಳಗಾದವರಿಗೆ ಸಾಂತ್ವನ ನೀಡಲು ಮಹಿಳಾ ಆಯೋಗ ಅನೇಕ ಮಾಗರ್ೋಪಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ್ಯಸಿಡ್ ದಾಳಿಗೆ ಒಳಗಾದವರಿಗೆ ಮಾಸಾಶನ ನೀಡುವ ಸೌಲಭ್ಯ, ಸ್ವ ಉದ್ಯೋಗ ಪ್ರಾರಂಭಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ್ಯಸಿಡ್ ದಾಳಿಯನ್ನು ಗಂಭೀರವಾಗಿ ಪರಿಗಣಿಸುವ ಕಾನೂನುಗಳ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

9. ಮಹಿಳಾ ಆಯೋಗ ಹಲ್ಲಿಲ್ಲದ ಹಾವು ಎನ್ನುವ ಮಾತು ಕೇಳಿ ಬರುತ್ತಿದೆ? ಕಾರಣವೇನು?

ಶಿಕ್ಷೆ ನೀಡುವಂತಹ ಅಧಿಕಾರ ಇಲ್ಲದಿರುವುದರಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ. ಬುಸುಗುಡುವುದು ಇಲ್ಲಿ ಮುಖ್ಯ. ಆದರೂ ಮಹಿಳಾ ಆಯೋಗ ಬುಸುಗುಟ್ಟುತ್ತಾ ಸಮಾಜವನ್ನು ಎಚ್ಚರಿಸುತ್ತಾ ಬಂದಿದೆ. ಇದೊಂದು ಮಾತೃ ಸ್ಥಾನದಲ್ಲಿರುವ ಸಂಸ್ಥೆಯಾಗಿರುವುದರಿಂದ ಕತ್ತಿ ಮತ್ತು ಗುರಾಣಿಗಳ ಆವಶ್ಯಕತೆ ಇಲ್ಲ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕೌಟುಂಭಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಯೋಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಲ್ಲಿಲ್ಲದೇ ಇದ್ದರೂ ಕೂಡ ಮಹಿಳಾ ಆಯೋಗ ತನ್ನ ಮಿತಿಯೊಳಗೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

10. ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯಕ್ಕಿರುವ ಎಲ್ಲ ಅಧಿಕಾರಗಳು ಆಯೋಗಕ್ಕಿದ್ದರೂ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿರುವುದೇಕೆ?

ಮಹಿಳಾ ಆಯೋಗಕ್ಕೆ ಪ್ರಕರಣಗಳು ಬಂದೊಡನೆ ಅವುಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ನಾನು ಆಯೋಗಕ್ಕೆ ಬರುವ ಮೊದಲೇ ಅನೆಕ ಪ್ರಕರಣಗಳು ದಾಖಲಾಗಿದ್ದವು. ಅನೇಕ ಪ್ರಕಾರದ ಪ್ರಕರಣಗಳು ಆಯೋಗದಲ್ಲಿ ದಾಖಲಾಗಿರುತ್ತವೆ. ಪ್ರತಿಯೊಂದು ಪ್ರಕರಣವು ತನ್ನದೇ ಆದ ಸ್ವರೂಪವನ್ನು ಹೊಂದಿರುತ್ತವೆ. ಅವುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರಕರಣಗಳ ಇತ್ಯರ್ಥ ತೀವ್ರಗತಿಯಲ್ಲಿ ಸಾಗುತ್ತಿಲ್ಲ.

11. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಹತ್ತಿಕ್ಕಲು ಮಹಿಳಾ ಆಯೋಗ ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸಿದೆಯೇ?

30 ಜಿಲ್ಲೆಗಳಲ್ಲಿರುವ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಂತಹ ಸಮಸ್ಯೆಗಳಿಗೆ ಕಾರಣವೇನು ಎಂಬುದನ್ನು ತಿಳಿಯಲಾಗುವುದು. ಈ ಸಂಬಂಧ ವಿಶ್ವವಿದ್ಯಾನಿಲಯಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಎನ್ಜಿಓಗಳ ಸಹಕಾರದೊಂದಿಗೆ 30 ಜಿಲ್ಲೆಗಳಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯ ನಡೆಸಲಾಗುತ್ತಿದೆ. ಪ್ರಾದೇಶಿಕವಾರು ಸಂಗ್ರಹಿಸಿದ ಮಾಹಿತಿ ಬಗ್ಗೆ ಚರ್ಚೆ ನಡೆಸಲಾಗುವುದು.
ಸದ್ಯದಲ್ಲಿಯೇ ಮಹಿಳಾ ಆಯೋಗದ ಬಗ್ಗೆ ಜಾಗೃತಿ ಮೂಡಿಸುವ ಬಸ್ ಒಂದನ್ನು ರಾಜ್ಯಾದ್ಯಾಂತ ಅರಿವು ಮೂಡಿಸಲು ಬಳಸಲಾಗುವುದು. ಈ ಬಸ್ ರಾಜ್ಯಾದ್ಯಂತ ಸಂಚರಿಸುವ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾನೂನುಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲಿದೆ. ಈ ಸಂಬಂಧ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮತಿಯನ್ನು ನೀಡಿದೆ. ಇವೆಲ್ಲಕ್ಕೂ ಪೂರಕವಾಗಿ ಆಯೋಗದ ಉದ್ದೇಶ ಹಾಗೂ ಆಶಯಗಳನ್ನು ತಿಳಿಸುತ್ತ ಸಮಾಜವನ್ನು ಎಚ್ಚರಿಸುವ ಸಲುವಾಗಿ 'ಸ್ವಾಭಿಮಾನದ ಸಮರ' ಎಂಬ ಮೂವತ್ತು ನಿಮಿಷಗಳ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ.
ಮಹಿಳಾ ಆಯೋಗದ ಬ್ಯಾನರ್‌ಗಳನ್ನು ತಯಾರಿಸಿ ಮಾಹಿತಿ ನೀಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರತಿ ಎಸ್ಪಿ ಕಚೇರಿಯಲ್ಲಿ ಮಹಿಳಾ ಆಯೋಗದ ಅಧಿಕಾರಿಗಳು ಕೆಲಸ ಮಾಡಲು ಅನುಮತಿ ಕೋರಲು ಆಯೋಗ ಚಿಂತನೆ ನಡೆಸಿದೆ.
ದುಡಿಯುವ ಮಹಿಳೆಯರು ಹೆಚ್ಚಾಗಿದ್ದು, ಕಚೇರಿ ಕರ್ತವ್ಯಕ್ಕೆ ಪ್ರಯಾಣಿಸುವ, ಸಂಜೆ ಕಚೇರಿಯಿಂದ ವಾಪಸ್ಸು ಹಿಂದಿರುಗುವ ಪೀಕ್ ಅವರ್ಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಮಹಿಳಾ ವಿಶೇಷ ಬಸ್ಸುಗಳನ್ನು ಚಾಲನೆಗೊಳಿಸಲು ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೇ.8ರಷ್ಟು ಬದಲಿಗೆ ಶೇ.50ರಷ್ಟು ಆಸನಗಳನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡುವ ವ್ಯವಸ್ಥೆ ಜಾರಿಗೊಳಿಸಿ, ಸೂಕ್ತ ಸರ್ಕಾರಿ ಆದೇಶ ಹೊರಡಿಸಿ ಎಂದು ಕೋರಲಾಗಿದೆ. ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಹಿಳಾ ಸಹಾಯ ವೇದಿಕೆ, ದೈಹಿಕ ಹಿಂಸೆಗೆ ಒಳಗಾದ ಮಹಿಳೆಗೆ ರಕ್ಷಣೆ ಮತ್ತು ನೆರವಿನ ಭರವಸೆ ಸುರಕ್ಷಾ ಯೋಜನೆ ಕುರಿತು ಅರಿವು ಮೂಡಿಸಲಾಗುತ್ತಿದೆ.

12. ಮಹಿಳಾ ಆಯೋಗದ ಅಧ್ಯಕ್ಷರಾಗಿ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯದ ಮಹಿಳೆಯರಿಗೆ ನೀಡುವ ಸಂದೇಶವೇನು?

ಯಾರೋ ಬಂದು ಕಾಪಾಡುತ್ತಾರೇ, ಕಾನೂನಿದೆ ರಕ್ಷಣೆ ನೀಡುತ್ತೆ, ಪೊಲೀಸರಿದ್ದಾರೆ ನೋಡಿಕೊಳ್ಳುತ್ತಾರೆ, ಸರ್ಕಾರ ಏನು ಯೋಜನೆ ಮಾಡುತ್ತೆ? ಎಂದು ಕುಳಿತುಕೊಳ್ಳುವ ಬದಲು, ಇವತ್ತು ಕಾಲ ಬದಲಾಗಿದೆ. ಜಾಗತಿಕ ಮಟ್ಟದಲ್ಲಿ ಅನೇಕ ಬದಲಾವಣೆ ಕಾಣುತ್ತಿರುವ ಭಾರತ ಕೂಡ ಬದಲಾಗುತ್ತಾ ಇದೆ. ಹಾಗಾಗಿ, ನಮ್ಮ ಭಾರತೀಯ ಹೆಣ್ಣುಮಕ್ಕಳು ಕೂಡ ಬದಲಾಗಬೇಕು. ಬದಲಾಗುತ್ತಿರುವ ಸಮಾಜಕ್ಕೆ ತಾವು ಕೂಡ ಬದಲಾಗುವ ಮಟ್ಟದಲ್ಲಿ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಮಹಿಳೆಯರು ಕ್ಷಣಿಕ ಸುಖಕ್ಕಾಗಿ ಬಲಿಯಾಗದೇ, ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಆಮಿಷಗಳಿಗೆ ಬಲಿಯಾಗದೆ, ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು.

- ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com