ರಕ್ಷಣಾ ಆ್ಯಪ್
ರಕ್ಷಣಾ ಆ್ಯಪ್

ಮೊಬೈಲ್ ಆ್ಯಪ್ ಗಳಿಂದ ಮಹಿಳೆಯರ ರಕ್ಷಣೆ ಸಾಧ್ಯ..!

ಕೇವಲ ದೆಹಲಿಯ ನಿರ್ಭಯಾ ಪ್ರಕರಣ ಮಾತ್ರವಲ್ಲದೇ, ಉತ್ತರ ಪ್ರದೇಶದ ರೋಹಟಗಿಯಲ್ಲಿ ನಡೆದ ಅತ್ಯಾಚಾರ, ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸೌಜನ್ಯ ಪ್ರಕರಣ ...

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಯಾರನ್ನು  ಹಿತವರು ಎಂದು ಹೆಣ್ಣುಮಕ್ಕಳು ನಂಬಿರುತ್ತಾರೆಯೇ ಅವರಿಂದಲೇ ಅವರ ಮೇಲೆ  ದೌರ್ಜನ್ಯಗಳು ಸಾಮಾನ್ಯವಾಗುತ್ತಿವೆ. ಸ್ನೇಹಿತನಿಂದ ಹಿಡಿದು ಜನ್ಮಕ್ಕೆ ಕಾರಣನಾದ  ತಂದೆಯವೆರಗೂ ಪ್ರತಿಯೊಬ್ಬ ಪುರುಷನೂ ತನ್ನ ಫಲಾಪೇಕ್ಷೆಗಾಗಿ ಹೆಣ್ಣಿನ ಮೇಲೆ ಒಂದಿಲ್ಲ  ಒಂದು ರೀತಿಯಲ್ಲಿ ದೌರ್ಜನ್ಯವೆಸುಗುತ್ತಿದ್ದಾನೆ. ಲೈಂಗಿಕ ಕಿರುಕುಳ, ವರದಕ್ಷಿಣೆ ಹಿಂಸೆ,  ಅತ್ಯಾಚಾರ, ದೈಹಿಕ ಹಿಂಸೆ, ಮಾನಸಿಕ ಕಿರುಕುಳಗಳು ಇದರ ಕೆಲ ಮುಖಗಳಷ್ಟೇ.. ಇಂದು  ಕೇವಲ ನಮ್ಮ ದೇಶ ವೊಂದರಲ್ಲಿ ಅಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಹೆಣ್ಣು ಜಾತಿಯ ಸುರಕ್ಷಿತತೆ,  ಸ್ವಾತಂತ್ರ್ಯ, ಹಕ್ಕು ಮತ್ತು ಕರ್ತವ್ಯಗಳ ಕುರಿತು ಗಂಭೀರ ಸಮಸ್ಯೆ ಎದ್ದು ನಿಂತಿದೆ.

ಭಾರತದಲ್ಲಿ ಸನಾತನ ಕಾಲದಿಂದಲೂ ಸ್ತ್ರೀ ದೌರ್ಜನ್ಯ ನಡೆಯುತ್ತಾ ಬಂದಿದೆಯಾದರೂ  ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಇಡೀ ದೇಶ ಸ್ತ್ರೀ ದೌರ್ಜನ್ಯದ ವಿರುದ್ಧ  ಒಕ್ಕೋರಲಿನಿಂದ ಪ್ರತಿಭಟಿಸುತ್ತಿದೆ. ದೆಹಲಿ ಜನತೆ ನಡೆಸಿದ ಸಾಮೂಹಿಕ ಪ್ರತಿಭಟನೆ ಇಡೀ  ವಿಶ್ವವೇ ಗಮನಿಸುವಂತೆ ಮಾಡಿತ್ತು. ಕೇವಲ ದೆಹಲಿಯ ನಿರ್ಭಯಾ ಪ್ರಕರಣ  ಮಾತ್ರವಲ್ಲದೇ, ಉತ್ತರ ಪ್ರದೇಶದ ರೋಹಟಗಿಯಲ್ಲಿ ನಡೆದ ಅತ್ಯಾಚಾರ, ಕರ್ನಾಟಕದ  ಮಂಗಳೂರಿನಲ್ಲಿ ನಡೆದ ಸೌಜನ್ಯ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಸಾಮಾಜಿಕ  ಜಾಲತಾಣಗಳಲ್ಲಿ ಇಂತಹ ವಿಚಾರಗಳ ಕುರಿತು ಹೆಚ್ಚಾಗಿ ಚರ್ಚೆಗಳು ನಡೆಯುತ್ತಿದ್ದು. ಸ್ತ್ರೀ  ದೌರ್ಜನ್ಯವನ್ನು ತಡೆಯುವ ಕ್ರಮಗಳ ಕುರಿತು ಸಾಕಷ್ಟು ಮಂದಿ ತಮ್ಮದೇ ರೀತಿಯಲ್ಲಿ  ವ್ಯಾಖ್ಯಾನಗಳನ್ನು ಮಾಡುತ್ತಲೇ ಇದ್ದಾರೆ.

ಇನ್ನು ಪ್ರಸ್ತುತ ತಾಂತ್ರಿಕತೆ ಆತ್ಯಾಧುನಿಕವಾಗಿದ್ದು. ಕೇವಲ ಬೆರಳ ತುದಿಯಲ್ಲೇ ವಿಶ್ವವನ್ನು  ಕಾಣುವ ನಮ್ಮ ಪೂರ್ವಜರ ಪ್ರಯತ್ನಕ್ಕೆ ಇಂದು ಫಲ ದೊರೆತಿದೆ. ಮೊಬೈಲ್ ಎಂಬ  ಮಾಯಾಜಾಲ ಇಂದು ಮಾನವನ ಅತಿ ಮುಖ್ಯ ಭಾಗವಾಗಿ ಹೋಗಿದ್ದು, ಇಂದು ದೇಶದ  ಮನುಷ್ಯರ ಸಂಖ್ಯೆಗಿಂತ ಮೊಬೈಲ್ಗಳ ಸಂಖ್ಯೆಯೇ ದೊಡ್ಡದಾಗಿದೆ ಎಂದರೆ ಮೊಬೈಲ್  ಫೋನ್ ಗಳಿಗಿರುವ ಬೇಡಿಕೆ ಎಂತಹುದು ಎಂದು ತಿಳಿಯುತ್ತದೆ.

ಇನ್ನು ಪ್ರಸ್ತುತ ಮಹಿಳೆಯ  ಮೇಲೆ ಕಳೆದ ಹಲವು ತಿಂಗಳುಗಳಿಂದ ನಡೆದ ಅತ್ಯಾಚಾರ ಪ್ರಕರಣಗಳಿಂದ  ಭೀತಿಗೊಳಗಾಗಿರುವ ಹೆಣ್ಣು ಮಕ್ಕಳು, ತುರ್ತು ಸ್ವಯಂ ರಕ್ಷಣೆಯ ಹಾದಿಗಾಗಿ  ಹುಡುಕಾಡುತ್ತಿದ್ದಾರೆ. ಇಂತಹ ಮಹಿಳೆಯ ನೆರವಿಗೆಂದೇ ವಿಶ್ವದ ಸಾವಿರಾರು ಮಹಿಳಾ  ಸಂಘಟನೆಗಳು ಮತ್ತು ಖಾಸಗಿ ರಕ್ಷಣಾ ಸಂಸ್ಥೆಗಳು ಸಾವಿರಾರು ಮೊಬೈಲ್ ಆ್ಯಪ್ ಗಳನ್ನು  ಆವಿಷ್ಕರಿಸಿವೆ. ಸಂಕಷ್ಜದ ಸಮಯದಲ್ಲಿ ಕೇವಲ ಒಂದು ಬೆರಳನ್ನು ಒತ್ತುವುದರ ಮೂಲಕ  ಸ್ತ್ರೀಯರು ತಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇಂತಹ ಸಾವಿರಾರು ಮೊಬೈಲ್  ಆ್ಯಪ್ ಗಳ ಪೈಕಿ ಕೆಲ ಪ್ರಮುಖ ಆ್ಯಪ್ ಗಳನ್ನು ಆರಿಸಿಕೊಳ್ಳಲಾಗಿದ್ದು, ಅವುಗಳನ್ನು ಇಲ್ಲಿ ಪಟ್ಟಿ  ಮಾಡಲಾಗಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಾಗಿನ್ ಆಗುವ ಮೂಲಕ ಈ ಆ್ಯಪ್ ಅನ್ನು ನಿಮ್ಮ ಮೊಬೈಲ್ ಗೆ  ಡೌನ್ ಮಾಡಿಕೊಳ್ಳಬಹುದು.

ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ಇರುವ ಕೆಲ ಪ್ರಮುಖ ಆ್ಯಪ್ ಗಳೆಂದರೆ:

ಹಿಮ್ಮತ್ (HIMMAT)


ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ತನ್ನದೇ ಆದ  ಮಹಿಳಾ ಸುರಕ್ಷಿತ ಮೊಬೈಲ್ ಆ್ಯಪ್ ಅನ್ನು ಹೊರತಂದಿದ್ದು, ಇದಕ್ಕೆ ಹಿಮ್ಮತ್ ಎಂದು  ಹೆಸರಿಸಲಾಗಿದೆ. ಹಿಮ್ಮತ್ ಎಂದರೆ ಧೈರ್ಯ ಎಂದರ್ಥ. ದೆಹಲಿ ಪೊಲೀಸರು ಈ ಆ್ಯಪ್  ಅನ್ನು ಮೊದಲಬಾರಿಗೆ ದೆಹಲಿಯಲ್ಲಿ ಲಾಂಚ್ ಮಾಡಿದ್ದು, ಇದೀಗ ಬಹುತೇಕ ದೇಶದ ಎಲ್ಲ  ನಗರಗಳಲ್ಲಿಯೂ ಈ ಆ್ಯಪ್ ಲಭ್ಯವಿದೆ. ಗೂಗಲ್ ನ ಪ್ಲೇ ಸ್ಟೋರ್ ನಲ್ಲಿಯೂ ಈ ಆ್ಯಪ್  ಲಭ್ಯವಿದ್ದು, ಕೇವಲ ಈ ಆ್ಯಪ್ ಅನ್ನು ಡೌನ್ ಮಾಡಿಕೊಂಡು ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್  ಮಾಡಿಕೊಳ್ಳಿ. ಬಳಿಕ ನಿಮ್ಮ GMAIL ಖಾತೆಯ ಐಡಿಯನ್ನು ನಮೂದಿಸಿ ಉಚಿತ  ರಿಜಿಸ್ಚರ್ ಮಾಡಿಕೊಳ್ಳಬೇಕು. ಬಳಿಕ ಆ್ಯಪ್ ನಲ್ಲಿರುವ ಸೆಟ್ಟಿಂಗ್ಸ್ ನಲ್ಲಿ ನಿಮ್ಮ ಸ್ನೇಹಿತರನ್ನು  ಪಟ್ಟಿ ಮಾಡಬೇಕು. ಬಳಿಕ ಈ ಆ್ಯಪ್ ನ ರಿಜಿಸ್ಟ್ರೇಷನ್ ಕೀ ನಿಮಗೆ ದೊರೆಯುತ್ತದೆ. ಈ  ಹಿಮ್ಮತ್ ಆ್ಯಪ್ ನಲ್ಲಿ ಕೆಲ ಪ್ರಮುಖ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು, ನೀವೂ  ಯಾವುದಾದರೂ ಅಪಾಯಕಾರಿ ಸಂದರ್ಭದಲ್ಲಿದ್ದಾಗ ಈ ಆ್ಯಪ್ ನಲ್ಲಿರುವ ರೆಡ್ ಬಟನ್  ಅನ್ನು ಒತ್ತಿದರೆ ಸಾಕು. ಕ್ಷಣ ಮಾತ್ರದಲ್ಲಿ ನೀವು ಈ ಹಿಂದೆ ಸೆಟ್ಟಿಂಗ್ ನಲ್ಲಿ ಪಟ್ಟಿ ಮಾಡಿದ್ದ  ಅಷ್ಟೂ ಸ್ನೇಹಿತರಿಗೆ ಏಕಕಾಲದಲ್ಲಿ ತುರ್ತು ಸಂದೇಶ ರವಾನೆಯಾಗುತ್ತದೆ. ಕೇವಲ  ಸಂದೇಶಗಳು ಮಾತ್ರವಲ್ಲದೇ ವಿಡಿಯೋ, ಭಾವಚಿತ್ರ (ಫೋಟೋಗಳು) ಮತ್ತು  ಆಡಿಯೋಗಳನ್ನು ಕೂಡ ಈ ಆ್ಯಪ್ ಮೂಲಕ ರವಾನೆ ಮಾಡಬಹುದಾಗಿದೆ.

ಆ್ಯಪ್ ನಲ್ಲಿರುವ ಅತ್ಯಾಧುನಿಕ ಜಿಪಿಎಸ್ ಸೆಟ್ಟಿಂಗ್ ಗಳು ತುರ್ತು ಸಂದೇಶ ರವಾನಿಸಿದ  ವ್ಯಕ್ತಿಯ ನಿರ್ಧಿಷ್ಟ ಪ್ರದೇಶವನ್ನು ಗುರುತು ಹಿಡಿಯಲು ಸಹಕರಿಸುತ್ತದೆ.

ಎಚ್ಚರಿಕೆ
ಕೇವಲ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಈ ಆ್ಯಪ್ ಅನ್ನು ಬಳಸಬುಹುದಾಗಿದ್ದು,  ತಮಾಷೆಗಾಗಿ ಈ ಆ್ಯಪ್ ನಲ್ಲಿರುವ ರೆಡ್ ಬಟನ್ ಅನ್ನು ಒತ್ತುವ ಹಾಗಿಲ್ಲ. 3 ಬಾರಿ  ತಮಾಷೆಗಾಗಿ ಈ ರೆಡ್ ಬಟನ್ ಒತ್ತಿದರೆ ಈ ಆ್ಯಪ್ ತಾನೇ ತಾನಾಗಿ ತನ್ನ ಕಾರ್ಯವನ್ನು  ಸ್ಥಗಿತಗೊಳಿಸುತ್ತದೆ.

ವಿಜಿಕಾಲ್‌ (Vizzical)


ಇದೊಂದು ಉಚಿತ ಸ್ಮಾರ್ಟ್‌ಫೋನ್‌ ಅಪ್ಲಿಕೇಷನ್‌. ಕರೆಯ ಜೊತೆಗೇ ‘ಸನ್ನಿವೇಶ’ದ  ಚಿತ್ರವನ್ನೂ ಕಳುಹಿಸಬ ಹುದಾದ ವ್ಯವಸ್ಥೆ. ಕ್ಷಿಪ್ರ ಸಂದೇಶ ಅಥವಾ ಸನ್ನಿವೇಶವಾದ  ಕರೆಯನ್ನು ಏಕಕಾಲಕ್ಕೆ ಹೆಚ್ಚುವರಿ ಹಣ ವೆಚ್ಚವಿಲ್ಲದೇ, ಸಮಯವನ್ನೂ ವ್ಯರ್ಥಗೊಳಿಸದೇ  ತುರ್ತು ಸಂದೇಶವನ್ನು ಕಳುಹಿಸಲು ನೆರವಾಗುವಂತಹ ಮೊಬೈಲ್‌ ಆ್ಯಪ್‌. ಸಂದರ್ಭಗಳಿಗೆ  ಅನುಗುಣವಾಗಿ ಅನುಕೂಲವಾಗುವಂತೆ ಮೊಬೈಲ್‌ನ ಬಟನ್‌ ಒತ್ತಿದರೆ ಈ ಅಪ್ಲಿಕೇಷನ್‌  ಸಹಾಯದಿಂದ ಸಂದೇಶವನ್ನು ಕ್ಷಣ ಮಾತ್ರದಲ್ಲಿ ರವಾನಿಸಬಹುದು. ಕೈಯಲ್ಲಿರುವ  ಮೊಬೈಲ್‌ ಸೆಟ್‌ ಅಲುಗಾಡಿಸುವ ಮೂಲಕವೇ ಆ್ಯಪ್ತರಿಗೆ ಕರೆಯ ಜೊತೆಗೆ ಸಂದೇಶ  ಕಳುಹಿಸಬಹುದು!

ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ದೀಪ್ತಿ ದೀಪಕ್‌ ಈ  ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಹುಬ್ಬಳ್ಳಿಯ ಆರ್ಯಭಟ ಟೆಕ್‌ ಪಾರ್ಕ್‌ನಲ್ಲಿರುವ  ಸಾಫ್ಟ್‌ವೇರ್‌ ಸಂಸ್ಥೆ 'ಟ್ರಿನಿಟಿ ಟೆಕ್ನಾಲಜಿ ಅಂಡ್‌ ಸಾಫ್ಟ್‌ವೇರ್‌ ಸಲ್ಯೂಷನ್ಸ್‌' ನ ನೆರವಿನಿಂದ  ಸಿದ್ಧಗೊಂಡಿರುವ ಈ ತಂತ್ರಾಂಶ ಈಗಾಗಲೇ ಮಾರುಕಟ್ಟೆ ಲಭ್ಯವಿದೆ. ಅಂಡ್ರೋಯ್ಡ್‌ ಮತ್ತು  ಐಒಎಸ್‌ ನಿರ್ವಹಣಾ ತಂತ್ರಾಂಶ ಇರುವ ಮೊಬೈಲ್‌ಗಳಲ್ಲಿ ವಿಜಿಕಾಲ್‌ ಆ್ಯಪ್‌  ಅಳವಡಿಸಿಕೊಳ್ಳಬಹುದಾಗಿದೆ.

ಮೊಬೈಲ್‌ನಲ್ಲಿ ವೈ–ಫೈ ಅಥವಾ 3ಜಿ ಇಂಟರ್‌ನೆಟ್‌  ಸೌಲಭ್ಯ ಇರುವವರು ಕರೆ ಮಾಡಬಹುದು. ಇದರಲ್ಲಿ ತುರ್ತು ಸಂದೇಶಗಳು ರವಾನೆ  ಯಾಗಬೇಕಾದ ಸಂಖ್ಯೆಗಳನ್ನು ಗ್ರೂಪ್‌ ಮಾಡಿ ಸೇರಿಸುವ ಅವಕಾಶವಿದ್ದು, ಬಟನ್‌  ಅಂಡ್ರೋಯ್ಡಿ ವರ್ಸನ್‌ ಇರುವ ಮೊಬೈಲ್‌ಗಳಲ್ಲಿ ಪವರ್‌ ಬಟನನ್ನು ಮೂರು ಬಾರಿ ಒತ್ತಿದರೆ  ಈ ಎಲ್ಲ ಸಂಖ್ಯೆಗಳಿಗೆ ತುರ್ತು ಸಂದೇಶ ರವಾನಿಸಬಹುದಾಗಿದೆ. ಹಾಗೆಂದು ಸಂದೇಶವನ್ನು  ಇನ್‌ ಬಾಕ್ಸ್‌ಗೆ ಹೋಗಿ ಟೈಪಿಸುವ ಅಗತ್ಯ ಇಲ್ಲ. ಇದಲ್ಲದೆ ಉಚಿತ ಕರೆ ಮತ್ತು ಎಸ್‌ಎಂಎಸ್‌  ಸೌಲಭ್ಯವನ್ನೂ ಈ ತಂತ್ರಾಂಶ ಒಳಗೊಂಡಿದೆ.

ಅಪಾಯದಲ್ಲಿ ಸಿಲುಕಿದ ಮಹಿಳೆ ಈ ಆ್ಯಪ್‌ನ  ಮೂಲಕ ಚಿತ್ರಗಳನ್ನು ಸೆರೆಹಿಡಿಯುವ ಮೂಲಕವೇ ಸುಲಭದಲ್ಲಿ ತುರ್ತು ಕರೆ ಮತ್ತು  ಸನ್ನಿವೇಶದ ದೃಶ್ಯವನ್ನು ರವಾನಿಸಬಹುದು. ಅಪ್ಲಿಕೇಷನ್‌ನಲ್ಲಿ ತುರ್ತು ಹಾಟ್‌ ಲೈನ್‌  ಗುಂಪನ್ನೂ ಸೃಷ್ಟಿಸಿಕೊಳ್ಳಬಹುದು. ಸ್ಮಾರ್ಟ್‌ ಫೋನ್‌ ಕೈಯಲ್ಲಿರುವ ಮಹಿಳೆ  ತರ್ತುಸಂದೇಶವನ್ನು ಚಿತ್ರದ ಮೂಲಕ ತುರ್ತು ಗುಂಪಿಗೆ ಕಳುಹಿಸಬಹುದು. ಅದೇ  ಸಮಯಕ್ಕೆ ಆ ಗುಂಪಿನಲ್ಲಿರುವ ಮೊದಲ ಸಂಪರ್ಕ ಸಂಖ್ಯೆಗೆ ಕರೆಯೂ ಹೋಗುತ್ತದೆ.

ನಿರ್ಭಯಾ (Nirbhaya)


ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆಗಾಗಿ ನಿರ್ಮಾಣಗೊಂಡ ಆ್ಯಪ್  ಇದು. ಇದಕ್ಕೆ ನಿರ್ಭಯಾ ಎಂದೇ ನಾಮಕರಣ ಮಾಡಲಾಗಿದ್ದು, ಸ್ಮಾರ್ಟ್ ಕ್ಲೌಡ್ ಸಂಸ್ಥೆ  ಇದನ್ನು ಆವಿಷ್ಕರಿಸಿದೆ. ಸಾಮಾನ್ಯವಾಗಿ ಎಲ್ಲ ಮಹಿಳಾ ಸುರಕ್ಷಣೆಯ ಆ್ಯಪ್  ಗಳಲ್ಲಿರುವಂತಹ ರಕ್ಷಣಾ ವೈಶಿಷ್ಟ್ಯಗಳನ್ನು ಇಲ್ಲಿಯೂ ನೀಡಲಾಗಿದ್ದು, ಕೇವಲ ಮೊಬೈಲ್  ಅನ್ನು ಶೇಕ್ ಮಾಡುವ ಮೂಲಕವೇ ತುರ್ತು ಸಂದೇಶ ರವಾನಿಸಬಹುದಾಗಿದೆ. ಅಲ್ಲದೆ ಕರೆ  ಮಾಡುವ ಅವಕಾಶ ಕೂಡ ಇದ್ದು, ತುರ್ತು ಸಂದೇಶಗಳನ್ನು ಕರೆ ಮೂಲಕ  ರವಾನಿಸಬಹುದಾಗಿದೆ. ಇನ್ನು ಈ ಆ್ಯಪ್ ನಲ್ಲಿ ನೀಡಲಾಗಿರುವ ಮ್ಯಾಪ್ ಅನ್ನು ಬಳಕೆ  ಮಾಡಿಕೊಂಡು ಸುರಕ್ಷಿತ ಮತ್ತು ಅಸುರಕ್ಷಿತ ಪ್ರದೇಶಗಳನ್ನು ಪಿನ್ ಮಾಡಬಹುದಾಗಿದೆ.  ಹೀಗೆ ಪಿನ್ ಮಾಡಿದ ಮ್ಯಾಪ್ ಅನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುವ  ಅವಕಾಶ ನೀಡಲಾಗಿದೆ.

ರೈಡ್ ಸೇಫ್ (Ride Safe)


ಹೆಚ್ಚಾಗಿ ಪ್ರಯಾಣ ಮಾಡುವ ಮಹಿಳೆಯರು ಬಳಸಬಹುದಾದ ಆ್ಯಪ್ ಇದು. ಇದೊಂದು  ಮ್ಯಾಪ್ ಆಧಾರಿತ ಆ್ಯಪ್ ಆಗಿದ್ದು, ಈ ಆ್ಯಪ್ ನ ವೈಶಿಷ್ಟ್ಯಗಳೆಂದರೆ ಪ್ರಯಾಣದ ವೇಳೆ  ನಾವು ದಾರಿ ತಪ್ಪಿದರೆ ಈ ಆ್ಯಪ್ ನ ಮೂಲಕ ನಾವು ಸೇರಬೇಕಾದ ಪ್ರದೇಶವನ್ನು  ಸೇರಬಹುದಾಗಿದೆ. ಅಥವಾ ನಾವು ಖಾಸಗಿ ಕ್ಯಾಬ್ ನಲ್ಲಿ ಪ್ರಯಾಣ ಮಾಡುವಾಗ ಚಾಲಕ  ದಾರಿ ತಪ್ಪುತ್ತಿದ್ದಾನೆ ಎಂದೆನಿಸಿದಾಗ ಈ ಆ್ಯಪ್ ನಲ್ಲಿ ನೀವು ಸೇರಬೇಕೆಂದಿರುವ  ಪ್ರದೇಶವನ್ನು ನಮೂದಿಸಿ. ಆಗ ಈ ಆ್ಯಪ್ ಮೊಬೈಲ್ ಜಿಪಿಎಸ್ ತಂತ್ರಜ್ಞಾನದ  ಸಹಾಯದಿಂದ ನೀವು ತೆರಳುತ್ತಿರುವ ಮಾರ್ಗ ಮತ್ತು ಸೇರಬೇಕೆಂದಿರುವ ಪ್ರದೇಶವನ್ನು  ಸರ್ಚ್ ಮಾಡುತ್ತದೆ. ಒಂದು ವೇಳೆ ಚಾಲಕನ ಮಾರ್ಗ ತಪ್ಪಿದ್ದರೆ ಅದನ್ನು ಮೊದಲು ನಿಮಗೆ  ತಿಳಿಸುತ್ತದೆ. ಬಳಿಕ ಆ್ಯಪ್ ನಲ್ಲಿರುವ ಸಾಸ್ (SOS) ಬಟನ್ ಒತ್ತಿದರೆ ನಿಮ್ಮ ಸ್ನೇಹಿತ  ಗುಂಪಿನಲ್ಲಿರುವ ಅಷ್ಟೂ ಮಂದಿಗೆ ಮತ್ತು ಆ್ಯಪ್ ನ ತಾಂತ್ರಿಕವರ್ಗಕ್ಕೆ ಇದು ತುರ್ತು ಸಂದೇಶ  ರವಾನೆ ಮಾಡಿ ನಿಮ್ಮ ಪ್ರಸ್ತುತ ಲೊಕೇಶನ್ ಅನ್ನು ತಿಳಿಸುತ್ತದೆ.

ಸಾಸ್ ಸ್ಟೇ ಸೇಫ್ (SOS-STAY SAFE)


ತುರ್ತು ಸಂದರ್ಭದಲ್ಲಿ ನೆರವಾಗಬಲ್ಲ ಮತ್ತೊಂದು ಆ್ಯಪ್ ಎಂದರೆ ಸಾಸ್- ಸ್ಟೇ ಸೇಫ್.  ರಕ್ಷಣಾ ಆ್ಯಪ್ ಗಳು ಹೊಂದಿರುವಂತಹ ಎಲ್ಲ ವೈಶಿಷ್ಟ್ಯಗಳನ್ನು ಈ ಆ್ಯಪ್ ಹೊಂದಿದ್ದು, ಇದರ  ಮತ್ತೆರಡು ವಿಶೇಷತೆಗಳೆಂದರೆ ಮೇಲ್ಕಂಡ ಆ್ಯಪ್ ಗಳಲ್ಲಿ ನೀವು ತುರ್ತು ಪರಿಸ್ಥಿತಿಯಲ್ಲಿದ್ದಾಗ  ಬಟನ್ ಒತ್ತಿದರೆ ಅವು ತುರ್ತು ಸಂದೇಶ ರವಾನೆ ಮಾಡುವ ಅವಕಾಶ ನೀಡಲಾಗಿತ್ತು. ಆದರೆ  ಈ ಆ್ಯಪ್ ನಲ್ಲಿ ನೀವು ಕೇವಲ ಮೊಬೈಲ್ ಅನ್ನು ಶೇಕ್ ಮಾಡಿದರೆ ಸಾಕು ಈ ಆ್ಯಪ್ ತಾನೇ  ತಾನಾಗಿ ಚಲಾವಣೆಗೊಂಡು ನಿಮ್ಮ ತುರ್ತು ಸಂದರ್ಭದಲ್ಲಿ ನೆರವಾಗಬಲ್ಲ ಸ್ನೇಹಿತರಿಗೆ  ಸಂದೇಶ ರವಾನಿಸುತ್ತದೆ. ಇನ್ನು ನಿಮ್ಮನ್ನು ಯಾರಾದರೂ ಅಪಹರಿಸಿದ್ದರೆ, ನೀವು ಈ ಆ್ಯಪ್  ನಲ್ಲಿ ಕಿಡ್ನಾಪ್ ಎಂದು ಟೈಪ್ ಮಾಡಿ ಸಂದೇಶ ರವಾನೆ ಮಾಡಿದರೆ ಸಾಕು, ನೀವು ಸಂದೇಶ  ರವಾನೆ ಮಾಡಿದ ಸಮಯದಿಂದಲೇ ಈ ಆ್ಯಪ್ ನಿಮ್ಮ ಲೊಕೇಶನ್ ಅನ್ನು ಸತತವಾಗಿ  ಹಿಂಬಾಲಿಸುತ್ತದೆ. ಕೇವಲ ಹಿಂಬಾಲಿಸುವುದಷ್ಟೇ ಅಲ್ಲದೇ ಕ್ಷಣ ಕ್ಷಣದ ಲೊಕೇಶನ್ ಅಪ್  ಡೇಟ್ ಅನ್ನು ನಿಮ್ಮ ಸ್ನೇಹಿತರಿಗೆ ರವಾನಿಸುತ್ತಿರುತ್ತದೆ. ಇನ್ನು ತುರ್ತು ಸಂದರ್ಭದಲ್ಲಿ ನೀವು  ಆ್ಯಪ್ ಬಳಕೆ ಮಾಡಿಕೊಂಡು ಒಂದು ನಿಮಿಷದ ವರೆಗೆ ರೆಕಾರ್ಡ್ ಮಾಡಬಹುದು ಮತ್ತು  ಅದನ್ನು ಈ ಮೇಲ್ ಮೂಲಕ ನಿಮ್ಮ ಸ್ನೇಹಿತರಿಗೆ ರವಾನಿಸಬಹುದು. ನೀವು ತುರ್ತು  ಪರಿಸ್ಥಿತಿಯಲ್ಲಿದ್ದಾಗ ಇದು ನಿಮ್ಮ ಸ್ನೇಹಿತರಿಗೆ ನಿಮ್ಮ ತುರ್ತು ಸಂದೇಶ, ಸಮಯ,  ಲೊಕೇಶನ್ ಮತ್ತು ನಿಮ್ಮ ಮೊಬೈಲ್ ಬ್ಯಾಟರಿ ಲೆವೆಲ್ ಕುರಿತು ಅಪ್ ಡೇಟ್ಸ್ ಗಳನ್ನು  ಸತತವಾಗಿ ರವಾನಿಸುತ್ತಿರುತ್ತದೆ.

ವಿತ್ ಯೂ ಆ್ಯಪ್ (VithU App)


ನಾವು ತುರ್ತು ಪರಿಸ್ಥಿತಿಯಲ್ಲಿದ್ದಾಗ ಓರ್ವ ನಿರ್ಧಿಷ್ಟ ವ್ಯಕ್ತಿಗೆ ಕರೆ ಮಾಡುವ ಅಥವಾ ಸಂದೇಶ  ರವಾನಿಸುವ ಸಮಯವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮ ಮೊಬೈಲ್ ಆ್ಯಪ್ ಗಳು  ನಮ್ಮ ನೆರವಿಗೆ ಬರುತ್ತವೆ. ನೀವು ಈ ಆ್ಯಪ್ ಅನ್ನು ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿದ  ಬಳಿಕ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಮೊಬೈಲ್ ಪವರ್ ಬಟನ್ ಅನ್ನು 2 ಬಾರಿ ಒತ್ತಿದರೆ  ಸಾಕು. ಈ ಆ್ಯಪ್ ತಾನೇ ತಾನಾಗಿ ಚಾಲನೆಗೊಳ್ಳುತ್ತದೆ. ಅಲ್ಲದೆ ನಿಮ್ಮ ಸ್ನೇಹಿತರಿಗೆ  ತುರ್ತು ಸಂದೇಶ ರವಾನಿಸುತ್ತದೆ. ಪ್ರತಿ 2 ನಿಮಿಷಗಳಿಗೊಮ್ಮೆ ಈ ಆ್ಯಪ್ ಸಂದೇಶ  ರವಾನಿಸುವುದಷ್ಟೇ ಅಲ್ಲದೇ ನಿಮ್ಮ ಲೊಕೇಶನ್ ಅನ್ನು ಕೂಡ ತಿಳಿಸುತ್ತಿರುತ್ತದೆ.

ಲೈಫ್ 360 ಫ್ಯಾಮಿಲಿ ಲೊಕೇಟರ್ ಆ್ಯಪ್ (Life360 Family Locator App)


ಬಹುಶಃ ಈ ಲೈಫ್ 360 ಆ್ಯಪ್ ಅನ್ನು ಪೋಷಕರ ಆ್ಯಪ್ ಎಂದರೆ ತಪ್ಪಿಲ್ಲ. ಮಕ್ಕಳು ಎಲ್ಲಿಗೆ  ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಎಲ್ಲ ಪೋಷಕರ ಮನದಾಳದ ಪ್ರಶ್ನೆಗಳೇ  ಆಗಿರುತ್ತದೆ. ಕೆಲವೊಮ್ಮೆ ಮಕ್ಕಳು ಅಪಾಯಕ್ಕೆ ಸಿಲುಕಿದ್ದಾಗ ಬಹುತೇಕ ಪೋಷಕರಿಗೆ  ಅದರ ಮಾಹಿತಿಯೇ ದೊರೆತಿರುವುದಿಲ್ಲ. ಅಪಾಯ ಸಂಭವಿಸಿದ ಬಳಿಕವೇ ಪೋಷಕರಿಗೆ  ದುರಂತದ ಕುರಿತು ಮಾಹಿತಿ ಲಭ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಈ ಲೈಫ್ 360  ಆ್ಯಪ್ ನೆರವಿಗೆ ಬರುತ್ತದೆ. ಪೋಷಕರು ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು,  ತಮ್ಮದೇ ಕೌಟುಂಬಿಕ ಸರ್ಕಲ್ ನಿರ್ಮಿಸಿಕೊಂಡರೆ ಈ ಆ್ಯಪ್ ಆ ಸರ್ಕಲ್ ನಲ್ಲಿರುವ  ವ್ಯಕ್ತಿಗಳ ಕುರಿತ ಮಾಹಿತಿಯನ್ನು ರವಾನಿಸುತ್ತಿರುತ್ತದೆ. ಈ ಆ್ಯಪ್ ನ ಮತ್ತೊಂದು  ವಿಶೇಷವೆಂದರೆ ಈ ಆ್ಯಪ್ ನ ಮೂಲಕ ನೀವು ಕಳೆದುಹೋದ ನಿಮ್ಮ ಮೊಬೈಲ್ ಫೋನ್  ಅನ್ನು ಕೂಡ ಕಂಡುಹಿಡಿಯಬಹುದಾಗಿದೆ.

ಸ್ಮಾರ್ಟ್ ಶೆಹರ್ (SmartShehar)


2014ರಲ್ಲಿ ಈ ಸ್ಮಾರ್ಟ್ ಶೆಹರ್ ಬಿಡುಗಡೆಯಾಗಿದ್ದು, ಚಿತ್ರ ಸಹಿತ ತುರ್ತು ಸಂದೇಶ  ರವಾನೆಗೆ ಇದು ಅನುವು ಮಾಡಿಕೊಡುತ್ತದೆ. ನೀವು ಎಮರ್ಜೆನ್ಸಿ ಬಟನ್ ಒತ್ತಿದ ತಕ್ಷಣವೇ ಈ  ಆ್ಯಪ್ ನಿಮ್ಮ ಪೂರ್ವ ನಿರ್ಧಾರಿತ ಸಂದೇಶವನ್ನು ಚಿತ್ರದೊಡನೆ ನಿಮ್ಮ ಸ್ನೇಹಿತ ವರ್ಗಕ್ಕೆ  ರವಾನಿಸುತ್ತದೆ. ಒಂದು ವೇಳೆ ನೀವು ಎಮರ್ಜೆನ್ಸಿ ಬಟನ್ ಒತ್ತುವ ಮೊದಲೇ ನಿಮ್ಮ  ಮೊಬೈಲ್ ನಾಪತ್ತೆಯಾದರೆ..! ಆ ಬಗ್ಗೆಯೂ ಚಿಂತೆ ಬೇಡ ಈ ಆ್ಯಪ್ ತನಗೆ ನಿಗದಿ ಪಡಿಸಿದ  ಸಮಯದ ಬಳಿಕ ತಾನೇ ತಾನಾಗಿ ಚಾಲನೆಗೊಂಡು ತುರ್ತು ಸಂದೇಶ ರವಾನಿಸುತ್ತದೆ. ಈ  ಆ್ಯಪ್ ನಲ್ಲಿರುವ ವಾಕ್ ವಿತ್ ಮಿ ಸೆಟ್ಟಿಂಗ್ ನಿಂದಾಗಿ ನಿಮ್ಮ ಸ್ನೇಹಿತ ವರ್ಗವು ನಿಮ್ಮ  ಲೊಕೇಶನ್ ಟ್ರ್ಯಾಕ್ ಮಾಡಬಹುದಾಗಿದೆ.

ಪುಕಾರ್ (Pukar)


ಜಿಪಿಎಸ್ ತಂತ್ರಜ್ಞಾನ ಆಧಾರಿತ ಮಹಿಳಾ ಸುರಕ್ಷತೆಯ ಆ್ಯಪ್ ಇದು. ಈ ಆ್ಯಪ್  ವೈಶಿಷ್ಟ್ಯವೆಂದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೀವು ಈ ಆ್ಯಪ್ ನಲ್ಲಿರುವ ರೆಡ್ ಬಟನ್  ಒತ್ತಿದರೆ ಈ ಆ್ಯಪ್ ಮೊಬೈಲ್ ಅನ್ನು ತಾನೇ ತಾನಾಗಿ ಸೈಲೆಂಟ್ ಮೋಡ್ ಗೆ ಹಾಕುತ್ತದೆ  ಮತ್ತು ಮೊಬೈಲ್ ಸ್ಕ್ರೀನ್ ಅನ್ನು ಡಿಮ್ ಮಾಡುತ್ತದೆ. ಅಲ್ಲದೆ ನಿಮ್ಮ ಸ್ನೇಹಿತ ವರ್ಗಕ್ಕೆ  ಸತತವಾಗಿ ಸಂದೇಶ ರವಾನಿಸುತ್ತಿರುತ್ತದೆ.

ರಕ್ಷಾ (RAKSHA)


ತುರ್ತು ಸಂದರ್ಭದಲ್ಲಿ ನೀವು ಈ ಆ್ಯಪ್ ಅನ್ನು ತೆರೆಯುವ ಅವಶ್ಯಕತೆಯೇ ಇರುವುದಿಲ್ಲ.  ಕೇವಲ ನಿಮ್ಮ ಮೊಬೈಲ್ ನಲ್ಲಿರುವ ವಾಲ್ಯೂಮ್ ಬಟನ್ ಅನ್ನು ಸತತವಾಗಿ ಒತ್ತುತ್ತಿದ್ದರೆ, ಈ  ಆ್ಯಪ್ ತಾನೇ ತಾನೇ ಚಾಲ್ತಿಗೊಳ್ಳುತ್ತದೆ. ಅಲ್ಲದೆ ತಾನೇ ತಾನಾಗಿ 100 (ಪೊಲೀಸ್  ಕಂಟ್ರೋಲ್ ರೂಂ)ಕ್ಕೆ ಕರೆ ಮಾಡಿ ಪೂರ್ವ ನಿರ್ಧಾರಿತ ಸಂದೇಶವನ್ನು ರವಾನಿಸುತ್ತದೆ.  ಅಲ್ಲದೆ ಅದೇ ಸಮಯದಲ್ಲಿ ನಿಮ್ಮ ಸ್ನೇಹಿತರಿಗೆ ಎಸ್ ಎಂಎಸ್ ಮೂಲಕ ತುರ್ತು ಸಂದೇಶ  ರವಾನಿಸುತ್ತದೆ.

- ಶ್ರೀನಿವಾಸ ಮೂರ್ತಿ ವಿಎನ್

Related Stories

No stories found.

Advertisement

X
Kannada Prabha
www.kannadaprabha.com