ಕಮರ್ಷಿಯಲ್ ಬ್ರೇಕ್

ಟೀವಿ ಪ್ರೋಗ್ರಾಂ ನೋಡುತ್ತಿದ್ದ ವೇಳೆ ಜಾಹೀರಾತುಗಳು ಬಂದರೆ ಸಾಕು ಚಾನೆಲ್ ಚೇಂಜ್ ಮಾಡುವ ಮಂದಿ ನಾವು....
ಜಾಹೀರಾತು
ಜಾಹೀರಾತು

ಟೀವಿ ಪ್ರೋಗ್ರಾಂ ನೋಡುತ್ತಿದ್ದ ವೇಳೆ ಜಾಹೀರಾತುಗಳು ಬಂದರೆ ಸಾಕು ಚಾನೆಲ್ ಚೇಂಜ್ ಮಾಡುವ ಮಂದಿ ನಾವು. ಕೆಲವೊಂದು ಜಾಹೀರಾತುಗಳು ಕಿರಿಕಿರಿ ಎಂದೆನಿಸಿದರೆ ಬೆರಳೆಣಿಕೆಯ ಕೆಲವು ಜಾಹೀರಾತುಗಳು ನಮ್ಮನ್ನು ಆಕರ್ಷಿಸಿ ಬಿಡುತ್ತವೆ. 90ರ ದಶಕದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ಜಾಹೀರಾತುಗಳನ್ನೊಮ್ಮೆ ನೆನಪಿಸಿಕೊಳ್ಳಿ. ಅವು ಎಷ್ಟೊಂದು ಚೆನ್ನಾಗಿರುತ್ತಿದ್ದವು ಅಲ್ವಾ? ಇತ್ತೀಚಿಗಿನ ಜಾಹೀರಾತು ನೋಡಿದರೆ ಪ್ರಾಡೆಕ್ಟ್ ಗೂ ಜಾಹೀರಾತಿಗೂ ಏನೇನೂ ಸಂಬಂಧವಿಲ್ಲ ಎಂಬಂತಿರುತ್ತದೆ. ಏನೇ ಆಗಲಿ, ಜಾಹೀರಾತುಗಳಲ್ಲಿ ಮಹಿಳೆಯೊಬ್ಬಳು ಇರಲೇ ಬೇಕು. ಅದೇ ವೇಳೆ ಜಾಹೀರಾತುಗಳಲ್ಲಿ ಮಹಿಳೆಯನ್ನು ಮಾರಾಟ ವಸ್ತು ತರ ಬಿಂಬಿಸಲಾಗುತ್ತದೆ ಇಲ್ಲವೇ ಆಕೆಯ ದೇಹ ಸೌಂದರ್ಯವನ್ನು ತೋರಿಸಿ ಆಕರ್ಷಿಸಲಾಗುತ್ತದೆ. ಹೀಗಿರುವಾಗ ಜಾಹೀರಾತಿನಲ್ಲಿ ಮಹಿಳೆಯರ ಪಾತ್ರದ ಬಗ್ಗೆಯೂ ಹಲವಾರು ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಬಂದಿವೆ. ಈ ಚರ್ಚೆಗಳನ್ನು ಸದ್ಯ ಪಕ್ಕಕ್ಕಿಟ್ಟು, ಮಹಿಳೆಯರಲ್ಲಿಯೇ ಜಾಗೃತಿ ಮೂಡಿಸಿದ ಕೆಲವು ಜಾಹೀರಾತುಗಳ ಬಗ್ಗೆ ಕಣ್ಣಾಡಿಸೋಣ.


ಸೌಂದರ್ಯ ನೋಡುವವರ ಕಣ್ಣಲ್ಲಿ...
ಆಕೆಯ ಕೈಯಲ್ಲಿ ಆ ದಿನಗಳ ಫೋಟೋ. ಗಂಡನೊಡನೆ ನಗು ನಗುತ್ತಾ ಇರುವ ಫೋಟೋದಲ್ಲಿ ದಟ್ಟ ಕೂದಲು. ಬೆಳಗ್ಗೆ ಮಗಳನ್ನು ಎಬ್ಬಿಸಿ, ಕೈ ತುತ್ತು ತಿನಿಸಿ ಮುದ್ದಿಸಿ ಶಾಲೆಗೆ ಕಳುಹಿಸಿದಾಗ ಕೂದಲಿಲ್ಲದ ತನ್ನ ಬೋಳು ತಲೆಯನ್ನು ಯಾರಾದರೂ ನೋಡಿದರೆ? ಎಂಬ ಭಯದಿಂದ ಬೇಗನೆ ಬಾಗಿಲು ಹಾಕಿಕೊಳ್ಳುತ್ತಾಳೆ. ಮನೆ ಕೆಲಸದ ನಡುವೆ ತುರುಬು ಕಟ್ಟಿಕೊಳ್ಳಲು ಕೈ ಮೇಲೆತ್ತಿದ್ದಾಗ ನನ್ನ ತಲೆಯಲ್ಲಿ ಕೂದಲೇ ಇಲ್ಲ!. ಇನ್ನು ಆಫೀಸಿಗೆ ಹೊರಡಬೇಕು. ಯಾವ ಡ್ರೆಸ್ ಹಾಕಿಕೊಳ್ಳಲಿ? ಒಂದೊಂದನ್ನು ಹಾಕಿ ನೋಡಿ ಕನ್ನಡಿಯ ಮುಂದೆ ನಿಂತಾಯಿತು. ಬೋಳು ತಲೆಯನ್ನು ಸ್ಕಾರ್ಫ್‌ನಿಂದ ಕವರ್ ಮಾಡಿ ನೋಡಿಯೂ ಆಯಿತು. ಕೊನೆಗೆ ಸಾರಿಯುಟ್ಟುಕೊಂಡು ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ನೀರು, ಮನದೊಳಗೆ ದುಗುಡ. ಹಣೆಗೆ ಬಿಂದಿ ಇಡಬೇಕೋ ಬೇಡವೋ ಎಂಬ ದ್ವಂದ್ವ. ಪಕ್ಕಕ್ಕೆ ಬಂದ ಪತಿ ಆ ಬಿಂದಿಯನ್ನು ತೆಗೆದು ಆಕೆಯ ತಲೆಯ ಬದಿಗೆ ಅಂಟಿಸುತ್ತಾನೆ. ಹುಬ್ಬುಗಳ ಪಕ್ಕದಲ್ಲಿ ಬೋಳು ತಲೆಗೆ ದೃಷ್ಟಿ ಬೊಟ್ಟಿನಂತೆ. ಕಚೇರಿಗೆ ಹೋಗಬೇಕಾದರೆ ಮನಸ್ಸಲ್ಲಿ ಪುಕುಪುಕು. ಗಂಡ ಧೈರ್ಯ ತುಂಬುತ್ತಾನೆ. ತಲೆಯಲ್ಲಿ ಒಂದೇ ಒಂದು ಕೂದಲು ಇಲ್ಲದ ಸಾರಿಯುಟ್ಟ ಆ ಹೆಣ್ಣು ಕಚೇರಿಗೆ ಕಾಲಿಡುತ್ತಾಳೆ. ಅಲ್ಲಿನ ಆಕೆ ಗೆಳತಿಯರು ಬಂದು ಬಾಚಿ ತಬ್ಬಿ ಮಾತಾಡಿಸುತ್ತಾರೆ. ಪಕ್ಕ ಬಂದ ಗೆಳತಿ ದೃಷ್ಟಿ ಬೊಟ್ಟಿನಂತರುವ ಬಿಂದಿಯನ್ನು ನೋಡುತ್ತಾಳೆ. ಮತ್ತದೇ ಕಸಿವಿಸಿ ಇವಳ ಮನಸ್ಸಲ್ಲಿ. ಗೆಳತಿ ತನ್ನ ಬಿಂದಿಯನ್ನೂ ತೆಗೆದು ಈಕೆಯ ತಲೆಗೆ ಅಂಟಿಸುತ್ತಾಳೆ. ಇನ್ನೊಬ್ಬಳು ಕಣ್ಣಿನಿಂದ ಕಾಡಿಗೆ ತೆಗೆದು ದೃಷ್ಟಿ ಬೊಟ್ಟು ಇಡುತ್ತಾಳೆ. ಗೆಳತಿಯರ ಈ ಪ್ರೀತಿ ಆಕೆಯಲ್ಲಿ ತನಗೆ ಕೂದಲಿಲ್ಲ, ಕೂದಲಿಲ್ಲದಿದ್ದರೆ ಚೆನ್ನಾಗಿ ಕಾಣಿಸಲ್ಲ ಎನ್ನುವ ಸಂಕೋಚವನ್ನು ದೂರ ಮಾಡುತ್ತದೆ.

ದೇಶದಲ್ಲಿ ಅದೆಷ್ಟೋ ಮಹಿಳೆಯರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ. ಕಿಮೋಥೆರಪಿಗೆ ಒಳಗಾದಾಗ ಕೂದಲು ಕಳೆದುಕೊಂಡು ಸಮಾಜವನ್ನು ಎದುರಿಸಲು ಹಿಂಜರಿಯುವ ಮಹಿಳೆಯರಿಗೆ ಧೈರ್ಯ ತುಂಬುವ ಸಲುವಾಗಿ ಡಾಬರ್ ವಾಟಿಕಾ ಹೇರ್ ಆಯಿಲ್ ತಮ್ಮ ಜಾಹೀರಾತಿನಲ್ಲಿ ಬೋಲ್ಡ್ ಆ್ಯಂಡ್ ಬ್ಯೂಟಿಫಲ್ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಸುಂದರಿಯಾಗಿ ಕಾಣಲು ಕೂದಲಿನ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಕ್ಯಾನ್ಸರ್ ಗೆದ್ದ ಮಹಿಳೆಯರ ಆತ್ಮಸ್ಥೈರ್ಯವನ್ನು ಅಭಿನಂದಿಸುವುದು ಈ ಜಾಹೀರಾತಿನ ಉದ್ದೇಶ.


ಐ ಟಚ್‌ದ ಪಿಕಲ್



ಭಾರತೀಯ ಸಂಸ್ಕೃತಿಯಲ್ಲಿ ಮೂಢನಂಬಿಕೆಗಳು ಹಲವಾರು ಇವೆ. ರಜಸ್ವಲೆಯಾದ ಹೆಣ್ಣು ಉಪ್ಪಿನಕಾಯಿಯನ್ನು ಮುಟ್ಟಿದರೆ ಉಪ್ಪಿನಕಾಯಿ ಹಾಳಾಗುತ್ತದೆ ಎಂಬುದು ಕೂಡಾ ಇದರಲ್ಲಿ ಒಂದು. ಇಂಥಾ ಮೂಢನಂಬಿಕೆಗಳನ್ನು ಹೊಡೆದೋಡಿಸುವ ಸಲುವಾಗಿ ಸ್ಯಾನಿಟರಿ ನ್ಯಾಪ್ಕಿನ್ ಕಂಪನಿಯಾದ ವಿಸ್ಪರ್ ಐ ಟಚ್ ದ ಪಿಕಲ್ ಅಭಿಯಾನವನ್ನು ಆರಂಭಿಸಿತ್ತು. ರಜಸ್ವಲೆಯಾದ ಹುಡುಗಿ ಉಪ್ಪಿನಕಾಯಿ ಭರಣಿಯನ್ನು ಮುಟ್ಟಿ ಐ ಟಚ್ ದ ಪಿಕಲ್ ಎಂದು ಹೇಳುವುದು ಮತ್ತು ಆ ದಿನಗಳಲ್ಲಿ  ಬಿಳಿ ಉಡುಪು ಧರಿಸಿ ದೈನಂದಿನ ಕಾರ್ಯದಲ್ಲಿ ತೊಡಗುವ ದೃಶ್ಯದ ಮೂಲಕ ಈ ಜಾಹೀರಾತು ಪೀರಿಯಡ್ಸ್ ಬಗ್ಗೆ ಇರುವ ಮಿಥ್ಯಾಧೋರಣೆಗಳನ್ನು ದೂರ ಮಾಡಲು ಪ್ರಯತ್ನ ನಡೆಸಿತ್ತು.

ಎರಡನೇ ಮದುವೆ




ಶ್ಯಾಮವರ್ಣದ ಮಹಿಳೆ ತನ್ನ ಮದುವೆಯ ಶೃಂಗಾರದಲ್ಲಿ ತೊಡಗಿದ್ದಾಳೆ. ಅವಳನ್ನು ಶೃಂಗಾರ ಮಾಡುತ್ತಿರುವ ವೇಳೆ ಆಕೆಯ ಪುಟ್ಟ ಮಗಳು ಓಡಿಕೊಂಡು ಬರುತ್ತಾಳೆ. ಮದುವೆ ಮಂಟಪಕ್ಕೆ ಮಗಳನ್ನು ಕೈ ಹಿಡಿದುಕೊಂಡೇ ಆಕೆ ಬರುತ್ತಾಳೆ. ಇದು ಆಕೆಯ ಎರಡನೇ ಮದುವೆ. ಪತಿಯ ಜೊತೆ ಸಪ್ತ ಪದಿ ತುಳಿಯುವ ಹೊತ್ತು ಅಜ್ಜ ಅಜ್ಜಿಯ ನಡುವೆ ಕುಳಿತ ಪುಟ್ಟ ಹುಡುಗಿ ನನಗೂ ಹಾಗೇ ರೌಂಡ್ ರೌಂಡ್ ಹೋಗ್ಬೇಕು ಅಂತಾಳೆ. ಸಪ್ತಪದಿ ತುಳಿಯುತ್ತಿದ್ದ ಆಕೆಯ ಅಮ್ಮ, ಮಗಳಲ್ಲಿ ಸುಮ್ಮನಿರುವಂತೆ ಸಂಜ್ಞೆ ಮಾಡುತ್ತಾಳೆ. ಮಗಳ ಮುಖದಲ್ಲಿ ನಿರಾಸೆ. ಆವಾಗ ವರ ಆ ಪುಟ್ಟ ಹುಡುಗಿಯನ್ನು ಕರೆದು, ಆಕೆಯನ್ನು ಮುದ್ದಿನಿಂದ ತೋಳಲ್ಲಿ ಎತ್ತಿಕೊಂಡೇ ಸಪ್ತಪದಿ ತುಳಿಯುತ್ತಾನೆ. ಇಂದಿನಿಂದನೇ ನಿಮ್ಮನ್ನು ಅಪ್ಪ ಎಂದು ಕರೆಯಲಾ? ಎಂದು ಹೇಳುವಲ್ಲಿಗೆ ಜಾಹೀರಾತು ಮುಗಿಯುತ್ತದೆ. ನಮ್ಮ ಸಮಾಜದಲ್ಲಿ ಮಕ್ಕಳಿರುವ ಮಹಿಳೆ ಎರಡನೇ ಮದುವೆಯಾಗುವುದು ಕಷ್ಟವಿರುವ ಹೊತ್ತಲ್ಲಿ, ಎರಡನೇ ಮದುವೆಗೆ ಉತ್ತೇಜನ ನೀಡುವ ಸಂದೇಶವಿರುವ ತನಿಷ್ಕ್ ಜ್ಯುವೆಲ್ಲರಿಯ ಜಾಹೀರಾತು ಇದು.

ತಮ್ಮ ವಸ್ತುಗಳ ಪ್ರಚಾರ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜಾಹೀರಾತುಗಳು ಇವು. ಮಹಿಳೆಯರಲ್ಲಿ ಧೈರ್ಯ ತುಂಬುವ, ಮಿಥ್ಯಾ ನಂಬಿಕೆಗಳನ್ನು ದೂರ ಮಾಡುವ ಸಂದೇಶ ಹೊತ್ತ ಜಾಹೀರಾತುಗಳು ಸಿನಿಮಾದಷ್ಟೇ ಪ್ರಭಾವಶಾಲಿಗಳಾಗಿವೆ. ಜಾಹೀರಾತುಗಳಲ್ಲಿ ಏನಿರುತ್ತೆ? ಎಂದು ಕೇಳುವಾಗ ಕೆಲವೊಂದು ಉತ್ತಮ ಸಂದೇಶಗಳೂ ಅದರಲ್ಲಿರುತ್ತವೆ ಎಂದು ಹೇಳಲು ಮೇಲೆ ಉಲ್ಲೇಖಿಸಿದ ಜಾಹೀರಾತುಗಳು ಸಾಕಲ್ಲವೇ?

-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com