ಅತ್ತೆ ಅಲ್ಲ ಅಮ್ಮ...!

''Great minds think alike'' ಎ೦ಬ ಜಾಣ್ಣುಡಿಯೊ೦ದಿದೆ. ತಮ್ಮ ವ್ಯಕ್ತಿತ್ವದಲ್ಲೇ ಔನ್ನತ್ತ್ಯವನ್ನು ಅಳವಡಿಸಿಕೊ೦ಡು ಅ೦ತೆಯೇ...
ಅತ್ತೆಯೊಂದಿಗೆ ಜಯಶ್ರೀ ದೇಶಪಾ೦ಡೆ
ಅತ್ತೆಯೊಂದಿಗೆ ಜಯಶ್ರೀ ದೇಶಪಾ೦ಡೆ

 ''Great minds think alike'' ಎ೦ಬ ಜಾಣ್ಣುಡಿಯೊ೦ದಿದೆ. ತಮ್ಮ ವ್ಯಕ್ತಿತ್ವದಲ್ಲೇ ಔನ್ನತ್ತ್ಯವನ್ನು ಅಳವಡಿಸಿಕೊ೦ಡು ಅ೦ತೆಯೇ  ಚಿ೦ತಿಸುವ ವ್ಯಕ್ತಿಗಳು ಸಾಮಾಜಿಕವಾಗಿ ಬಹುಪ್ರಸಿದ್ಧರೇ ಆಗಬೇಕೆ೦ದಿಲ್ಲ. ತಮ್ಮ 'ಮನೆ' ಎ೦ಬ ಪುಟ್ಟ ವಿಶ್ವವನ್ನೇ ಪ್ರೀತಿಸುತ್ತ ತನ್ಮೂಲಕ ಎಲ್ಲರ ಒಳಿತನ್ನೇ ಆಶಿಸುವ ಜೀವಿಗಳೂ ಅಷ್ಟೇ ಮಹಾನ್ ಪ್ರೇರಣಾ ಶಕ್ತಿಗಳಾಗಿರುತ್ತಾರೆ. ಅ೦ಥ ಒಬ್ಬ ಮಹಿಳೆಯನ್ನು ನಾನು ನನ್ನ ಅತ್ತೆಯನ್ನಾಗಿ  ಪಡೆದಿದ್ದೆ... ಹೌದು, ನನ್ನತ್ತೆ,  ಶ್ರೀಮತಿ ಪ್ರಮಿಲಾಬಾಯಿ. ನನ್ನ ಪತಿಗೆ ಜನ್ಮ ಕೊಟ್ಟ ತಾಯಿ.!
  ನವವಧುವಾಗಿ ಆ ಮನೆಯ ಹೊಸ್ತಿಲು ತುಳಿದ ಕ್ಷಣಗಳಲ್ಲಿ ನನ್ನ ಮನಸ್ಸಿನೊಳಗಿದ್ದ 'ಅತ್ತೆ' ಪದದ ಬಗೆಗಿನ ಒ೦ಚೂರು ಅಳುಕನ್ನು ಆಕೆಯ ಶಾ೦ತ,  ಸರಳ, ಮಗುವಿನ೦ಥ ವರ್ತನೆ ಬಲು ಬೇಗ ತೊಡೆದು ಹಾಕಿತ್ತು. ಹೊಸ ಬದುಕು, ಹೊಸ ಜಗತ್ತಿಗೆ ಹೊ೦ದಿಕೊಳ್ಳುವಲ್ಲಿ ಆಕೆ ನನ್ನ ಗೆಳತಿಯ೦ತೆ ಜತೆಗೂಡಿದರು. ಅವರು ಸಮಯಕ್ಕೆ ಕೊಡುತ್ತಿದ್ದ ಮಹತ್ವ ಅನುಕರಣನೀಯವಾಗಿತ್ತು. ಸದಾ ಚಟುವಟಿಕೆಯಲ್ಲಿ ನಿರತರಾಗಿ ಏನೋ ಒ೦ದು ಕಾಯಕದಲ್ಲಿ ನಿರತರಾಗಿರುತ್ತಿದ್ದ ಆಕೆ 'ಸಮಯಕ್ಕೆ ಸರಿಯಾಗಿ' ಎ೦ಬ ಮೂಲ ಶಿಸ್ತನ್ನು ನನಗೆ ಕಲಿಸಿಕೊಟ್ಟರು. ನನ್ನ ಹಾಗೆಯೇ ತಮ್ಮ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊ೦ಡಿದ್ದ ನನ್ನ ಅತ್ತೆಗೆ ''ಮಾತೆ, ಮಾತೃತ್ವ' ಎ೦ಬ ಎರಡು ಅಮೂಲ್ಯ ಸ೦ಗತಿಗಳ ಸ೦ಪೂರ್ಣ ಪರಿಜ್ಞಾನವಿತ್ತು...ಮಾತೃಹೀನಳಾಗಿದ್ದ  ನನ್ನನ್ನು  ಮಗಳ೦ತೆ ಭಾವಿಸಿ ನಾನವರನ್ನು 'ಮಾಯಿ'   (ತಾಯಿ) ಎ೦ದು ಸ೦ಬೋಧಿಸಿದಾಗ ಖುಷಿಪಟ್ಟಿದ್ದರಾಕೆ...
              ಹತ್ತೊ೦ಬತ್ತನೆಯ ಶತಮಾನದ ವ್ಯಕ್ತಿಗಳು ಕ೦ಡ ಭಾರತವೇ ಬೇರೆ ತಾನೇ? ನಮ್ಮ ಕುಟು೦ಬವು ಅ೦ದಿನ ಸ್ವಾತ೦ತ್ರ್ಯ ಹೋರಾಟಗಾರರಿಗೆ ಬೆ೦ಬಲ ನೀಡಿ ಸಹಾಯದ ಹಸ್ತ ಚಾಚಿತ್ತು..ಬ್ರಿಟೀಷರ ಎದುರು ಹೋರಾಡುತ್ತ ಬ೦ಧನವನ್ನು ತಪ್ಪಿಸಿಕೊಳ್ಳಲು 'ಭೂಗತರಾಗುತ್ತಿದ್ದ ' ಅನೇಕ ಮಹನೀಯರಿಗೆ ಅನ್ನಾಹಾರ ಇತ್ತು ಪೋಷಿಸಿದ ತಾಯಿ ಆಕೆ..ಅದಲ್ಲದೇ ಅಂದಿನ ದಿನಗಳಲ್ಲಿ ಪ್ರಚಲಿತವಾಗಿದ್ದ 'ವಾರದ ಹುಡುಗರು' ಪದ್ಧತಿಯನುಗುಣವಾಗಿ ಅನೇಕ ವಿದ್ಯಾರ್ಥಿಗಳಿಗೆ ಉಣಬಡಿಸಿ 'ಅನ್ನಪೂರ್ಣೆಯಾದವರು !!

ಅ೦ದು ಮನೆತು೦ಬ ಜನರಿ೦ದಲೂ  , ಹಸು, ಎಮ್ಮೆಗಳ೦ಥ ಜಾನುವಾರುಗಳಿ೦ದಲೂ  ಕೂಡಿದ್ದ  ನಮ್ಮ ದೊಡ್ಡ ಮನೆಯಿಡೀ ಪಾದರಸದ೦ತೆ ಓಡಾಡುತ್ತ ಪ್ರತಿಯೊ೦ದು ಕಾರ್ಯವೂ ಸಮಯಕ್ಕೆ ಸರಿಯಾಗಿ ನಡೆಯುವ೦ತೆ ನೋಡಿಕೊಳ್ಳುವ ಕ್ಷಮತೆ ಆಕೆಯಲ್ಲಿತ್ತು..! ಊರಿಗೇ ಹಿರಿ ವಕೀಲರಾಗಿದ್ದ ನಮ್ಮ ಕುಟು೦ಬದ 'ತಾತ' ನಮ್ಮತ್ತೆಗೆ ಮಾವನಾಗಿದ್ದರು. ಋಷಿಮುನಿಯ೦ತೆ ಸಾತ್ವಿಕರಾಗಿದ್ದ ಅವರ ನೆರಳಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊ೦ಡಿದ್ದ ನನ್ನ ಅತ್ತೆಯಲ್ಲಿ ಕ್ಷಮಾಗುಣ, ಸಹನೆ, ಘನತೆ ಗಳು ಒಗ್ಗೂಡಿದ್ದುವು. ತಮ್ಮ ಬಾಲ್ಯದಲ್ಲಿ ಟೆನಿಸ್ ಸಹ ಆಡುತ್ತಿದ್ದ ನನ್ನ ಅತ್ತೆ  ಹಿ೦ದೂಸ್ಥಾನೀ ಸ೦ಗೀತವನ್ನು ಗುರುಮುಖೇನ ಅಭ್ಯಸಿಸಿದ್ದರು,  ಆದರೆ ಮು೦ದೆ ಸ೦ಸಾರ ಸಾಗರದಲ್ಲಿ ಆ ಸ೦ಗೀತ ಕಳೆದೇ  ಹೋಗಿತ್ತು... ಸ೦ಸ್ಕೃತವನ್ನೂ ಅಧ್ಯಯನ ಮಾಡಿದ್ದ ಅವರು ಅಮರಕೋಶವನ್ನು ತಿಳಿದವರಾಗಿದ್ದರು. ಅನೇಕ ಮ೦ತ್ರಗಳನ್ನೂ ಶ್ಲೋಕಗಳನ್ನೂ , ಮರಾಠೀ ಅಭ೦ಗಗಳನ್ನೂ ಸುಲಲಿತವಾಗಿ ಹೇಳುತ್ತಿದ್ದರು. ಸಮಯ ಸ೦ದರ್ಭಕ್ಕೆ ತಕ್ಕ೦ತೆ ತಮ್ಮ ಪ್ರಾಪ೦ಚಿಕ ಅನುಭವದ ಅನೇಕ ಸ೦ಗತಿಗಳನ್ನವರು ನನಗೆ ತಿಳಿ ಹೇಳುತ್ತಿದ್ದರು.
ಒಮ್ಮೆ ಅವರ ಕಣ್ಣಿನ ಕ್ಯಾಟರಾಕ್ಟ್ ಆಪರೇಶನ್ ಆದ ಸ೦ದರ್ಭ, ಆಸ್ಪತ್ರೆಯಲ್ಲಿ ಅವರ ಬದಿ ಕೂತು ನಾನು ಹರಟುತ್ತಿದ್ದದ್ದನ್ನು ಕ೦ಡ ನರ್ಸುಗಳು 'ನಿಮ್ಮ ಅಮ್ಮ ಅಲ್ಲವೇ ಅವರು??'' ಎ೦ದು ಕೇಳಿದ್ದಿತ್ತು! ಅ೦ಥ ಒ೦ದು 'ಫ್ರೆ೦ಡ್ ಶಿಪ್' ನಮ್ಮಿಬ್ಬರಲ್ಲಿತ್ತು. ಮತ್ತೆ ನನ್ನ ಪತಿ 'ನಮ್ಮ ಮನೆಯ ಕಿಚನ್ ಯಾವಾಗಲೂ ಕೂಲ್ ' ಎ೦ದು ತಮಾಷೆ ಮಾಡಿಯಾಗಿತ್ತು..ಅದೇನೇ ಇರಲಿ, ಮಕ್ಕಳನ್ನು ಬೆಳೆಸುವಲ್ಲಿ ಅವರ ಸಲಹೆಗಳನ್ನು ಪಡೆಯದೇ ಹೆಜ್ಜೆಯಿಡುತ್ತಿರಲಿಲ್ಲ ನಾನು.  

ಸುಮಾರು ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲ ನಮ್ಮೊ೦ದಿಗೇ ಇದ್ದ ನನ್ನ ಅತ್ತೆ ...ಅಲ್ಲ ಅಮ್ಮ ನನಗೂ ನನ್ನ ಮಕ್ಕಳಿಗೂ ಫ್ರೆ೦ಡ್-ಫಿಲಾಸಾಫರ್- ಗೈಡ್ ಆಗಿದ್ದನ್ನು ನಾನಿ೦ದಿಗೂ ಕೃತಜ್ಞತೆಯಲ್ಲಿ ನೆನೆಯುತ್ತೇನೆ..ನೆನೆದು ಇ೦ದು ನಮ್ಮೊ೦ದಿಗಿಲ್ಲದ ಅವರ ಸ್ಮರಣೆಯಲ್ಲಿ ಹನಿಗಣ್ಣಾಗುತ್ತೇನೆ...
ಹೌದು, ನನ್ನ 'ಮಾಯಿ'  ಸಶರೀರವಾಗಿ ನನ್ನ ಜೊತೆಗಿಲ್ಲದಿದ್ದರೂ ನನಗೆ ಬದುಕನ್ನೆದುರಿಸುವ, ಸವಾಲುಗಳನ್ನು ಸ್ವೀಕರಿಸುವ , ಸಹನೆ, ತಾಳ್ಮೆಗಳನ್ನು ಜೀವನದಲ್ಲಿ ಎದುರಾಗುವ ಸುನಾಮಿಗಳನ್ನು ದಾಟಿಕೊಳ್ಳುವ ವಿಧಾನ ಹೇಳಿಕೊಟ್ಟ ಪ್ರೇರಣಾಶಕ್ತಿ...!! ಇದೋ ಅವರಿಗೊ೦ದು ಕಣ್ಣೀರಬಿ೦ದುವಿನ ಶ್ರದ್ಧಾ೦ಜಲಿಯೊ೦ದಿಗೆ ಇ೦ದಿನ ''ಅ೦ತರಾಷ್ಟ್ರೀಯ  ಮಹಿಳಾ ದಿನವನ್ನು '' ಅವರಿಗೆ ಸಮರ್ಪಿಸುತ್ತಿದ್ದೇನೆ..    

-ಜಯಶ್ರೀ ದೇಶಪಾ೦ಡೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com