ಅಕ್ಕನಂತಿರುವ ಅಕ್ಕರೆಯ ತಂಗಿ

ನಾವೆಲ್ಲ ಅಮ್ಮನ ಜೊತೆ, "ಮನೆಯೇ ಮಂತ್ರಾಲಯ" ಪಿಕ್ಚರನ್ನ ಕೆಂಪೇಗೌಡ ಟಾಕೀಸ್ನಲ್ಲಿ ನೋಡ್ಕೊಂಡು ಲೀಟರ್ಗಟ್ಲೆ...
ರೂಪ ಸತೀಶ್ ಮತ್ತು ಸಹೋದರಿ
ರೂಪ ಸತೀಶ್ ಮತ್ತು ಸಹೋದರಿ

ನಾವೆಲ್ಲ ಅಮ್ಮನ ಜೊತೆ,  "ಮನೆಯೇ ಮಂತ್ರಾಲಯ" ಪಿಕ್ಚರನ್ನ ಕೆಂಪೇಗೌಡ ಟಾಕೀಸ್ನಲ್ಲಿ ನೋಡ್ಕೊಂಡು ಲೀಟರ್ಗಟ್ಲೆ ಕಣ್ಣೀರ್ ಸುರಿಸ್ಕೊಂಡು ದುಖ ಪಡ್ತಿದ್ರೆ, ನಮ್ಮಗಳ ಮಧ್ಯೆ ಕಾರ್ಟೂನ್ ಪಿಕ್ಚರ್ ನೋಡೋರ್ ತರ ಒಂದೇ ಒಂದು ತೊಟ್ಟು ಕಣ್ಣೀರು ಜಾರಿಸದೆ ಸಿಕ್ಕಾಪಟ್ಟೆ coolಆಗಿ ಇರ್ತಿದ್ದ ನನ್ನ ತಂಗಿ ನನ್ನ ಪಾಲಿಗೆ ವಿಶೇಷವಾಗಿ ಕಾಣ್ತಿದ್ಲು. ಒಂದಷ್ಟು ವರ್ಷ ಕಳೆದು "ಕಭೀ ಅಲ್ವಿದಾ ನಾ ಕೆಹನಾ" ಮೂವಿಯ, ರಾಣಿ ಮುಖರ್ಜಿ ಪಾತ್ರ ನಂಗೆ ತುಂಬಾ ಇಷ್ಟವಾಯ್ತು ಅಂತ ಹೇಳೋವಾಗ, ಈ ಪಾತ್ರ ಇಷ್ಟ ಆಗೋಕೆ ಏನ್ ಕಾರಣ ಇರಬಹುದು ಅಂತ ಯೋಚಿಸೋ ಹಾಗೆ ಮಾಡಿದ್ಲು.

ಮೂವರು ಹೆಣ್ಣು ಮಕ್ಕಳಲ್ಲಿ ಮಧ್ಯದವಳು, ಅಂದ್ರೆ ದ್ವಿತೀಯಳು, ಅದ್ವಿತೀಯಳು. ವಯಸ್ಸಿನಲ್ಲಿ...hmmm ಎತ್ತರದಲ್ಲೂ ನನಗಿಂತ ಚಿಕ್ಕವಳಾದ್ರು ಇವಳೇ ನನಗೆ ಅಕ್ಕ. ಇವಳು ಅಳ್ತಿದಾಳೆ ಅಂದ್ರೆ ಅದು ಅಂತಿಂತ ಸಾಮಾನ್ಯ ವಿಷಯ ಆಗೋಕೆ ಸಾಧ್ಯನೇ ಇಲ್ಲ. ಯಾಕಂದ್ರೆ She just does not believe in tears!  ಎಲ್ಲರ ಮನೆಯಲ್ಲೂ ಇಂಥ ಒಂದೊಂದು emotionally strong personality ಇರ್ತಾರೆ. ಏನೇ ಬಂದರು ಎದುರಿಸಬಲ್ಲ ಮನಸ್ಥಿತಿ ಹಾಗು ಸಮಯ ಸ್ಪೂರ್ತಿಯುಳ್ಳವರು. ಎಲ್ಲವನ್ನೂ ನಿಭಾಯಿಸಬಲ್ಲವರು. Say, they can take control of any situation.

ಇವಳೂ ಸಹ ಹಾಗೆ ...  ಎಲ್ಲರಿಗಿಂತ ಚೂಟಿ - ಎಲ್ಲರಿಗಿಂತ ಘಾಟಿ! ಮನೆ, ಸಂಸಾರ, ಮಕ್ಕಳು,  ಪತಿರಾಯ, ಅಡುಗೆ, ನೆಂಟರು, ಹೆತ್ತವರು ಎಲ್ಲರಲ್ಲೂ - ಎಲ್ಲದರಲ್ಲೂ ವಿಶೇಷವಾಗಿ ಕಾಳಜಿ ಪ್ರೀತಿ ತೋರಿಸುತ್ತ, ತನ್ನ ಆಲೋಚನೆಗಳನ್ನ ತೀರ ಪ್ರಾಮಾಣಿಕವಾಗಿ ಮಂಡಿಸುವ ಸರಳ ವ್ಯಕ್ತಿತ್ವ. ಎಂತಾ intellectual ವಿಷಯಗಳಲ್ಲೂ ಸಹ ಆರಾಮಾಗಿ ತನ್ನದೇ ರೀತಿಯಲ್ಲಿ ಪಾಲ್ಗೊಳ್ಳುವ ಜಾಣೆ. ಹೃದಯ ಕಲ್ಲಿಗೆ ತಾಕಿದ್ರೂ - ಕಲ್ಲು ಹೃದಯಕ್ಕೆ ತಾಕಿದ್ರೂ ಗಾಯ ಆಗೋದು ಮನಸಿಗೇನೆ. ಈ ಮನಸಿನ ಗಾಯಗಳಿಗೆ ಮುಲಾಮು ಹಚ್ಚಿ pamper ಮಾಡುವ ಈಕೆ ನನ್ನ ಎರಡನೇ ತವರೂ ಸಹ ಹೌದು.  ನನ್ನ ಪುಟ್ಟ ಪುಟ್ಟ ಮೈಲಿಗಲ್ಲಿಗೂ ವಿಜೃ೦ಬಿಸಿ, ಸಂಭ್ರಮಿಸುವ ನನ್ನ ತಂದೆಯೂ ಇವಳೇ .  ಎಡವಲು ಬಿಡದೆ ಎಚ್ಚರದ ಮಾತಾಡಿ, ಕಿವಿ ಹಿಂಡುವುದು ಅಣ್ಣನ೦ತೆ. ನನ್ನೆಲ್ಲ ತರಲೆ - ಜಿರಳೆ - ಕಡ್ಡಿ - ಕಸದ ವಿಷಯಗಳನ್ನೂ ತಾಳ್ಮೆಯಿಂದ ಕಿವಿಗೊಟ್ಟು ಆಲಿಸೊ ಸ್ನೇಹಿತೆ.  "ಸಧ್ಯಕ್ಕೆ ಈ ವಿಷಯಗಳನ್ನೆಲ್ಲಾ ಬಿಡು, ನಿನ್ನ ಗುರಿ ಏನಿದೆ ಅದರ ಬಗ್ಗೆ ಯೋಚಿಸು. ಮುಂದೇನು ಮಾಡಬೇಕು ಅದರ ಬಗ್ಗೆ ಗಮನ ಕೊಡು", ಅಂತ ನನ್ನ focus ಆಚೀಚೆ ಆಗದಂತೆ ಕಾಯಬಲ್ಲ ಗುರುವೂ ಇವಳೇ. ಎಲ್ಲಾ  ಸಮಯದಲ್ಲೂ ನನ್ನೆಲ್ಲ ಹುಚ್ಚಾಟಗಳನ್ನೂ ಅಪ್ಪಿಕೊಳ್ಳುವ ನನ್ನ ತಂಗಿ "ಶೋಭ"!  ನಾನು ಅತ್ಯಂತ ಇಷ್ಟಪಡುವ ಗೌರವಿಸುವ ವ್ಯಕ್ತಿಗಳಲ್ಲಿ ಇವಳು ಅಗ್ರಜೆ.  ನನ್ನ ಪಾಲಿನ ಪ್ರೇರಣೆ, ನನ್ನ ಪಾಲಿಗೆ ಪರಿಪೂರ್ಣತೆ ಅಂದ್ರೆ ಇವಳೇ.

ಅಷ್ಟಕ್ಕೂ "ಸಾಧನೆ" ಅಂದಾಕ್ಷಣ ನಾವು ಯೋಚಿಸೋದು ದೊಡ್ಡ ದೊಡ್ಡ ವಿಷಯಗಳ ಕುರಿತು. ಆದರೆ ನಮ್ಮ ನಡುವೆಯೇ ಇದ್ದು, ನಮ್ಮ ಮನೋಭಲವನ್ನು ಕುಗ್ಗದಂತೆ ಕಾಪಾಡುವ ಈ ದೊಡ್ಡ ಮಹಿಳಾ ಸಾಧಕರನ್ನು ಹೇಗೆ ಮರೆಯೋಕೆ ಸಾಧ್ಯ? ಇವರುಗಳೇ ಅಲ್ವೇ ನಮ್ಮ Emotional Doctors! ಯಾವ ಡಿಗ್ರಿಯ ಹಂಗಿಲ್ಲದೆ, ವಯಸ್ಸಿನ ಇತಿ-ಮಿತಿಗಳಿಲ್ಲದೆ ಡಾಕ್ಟರ್ ಹುದ್ದೆ ಪಡೆದುಕೊಂಡವರು. ಇವರ ಬಳಿ ಸುಮ್ಮನೆ ಮಾತ್ನಾಡಿದ್ರೂ ಸಹ ಸಾಕು 80% ತೊಂದರೆಗಳು ಔಷಧಿಗಳಿಲ್ಲದೆ ನಿವಾರಣೆ ಆಗೋದು ಖಚಿತ.  ಹಾಗಾಗಿ ನಮಗೆಂದೇ ಮಿಡಿಯುವ - ಕಾಯುವ ಈ ಸಂತತಿಗೆ ಅನಂತಾನಂತ ವಂದನೆಗಳು ಹಾಗು ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರೀತಿಪೂರ್ವಕ ಅಭಿನಂದನೆಗಳು.

-ರೂಪ ಸತೀಶ್
 ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com