ವಿಶಿಷ್ಟ ಮಹಿಳೆ..ಡಾ|| ಶಾಲಿನಿ ರಜನೀಶ್

ನಮ್ಮ ಬಾಳ ಪಯಣದ ವಿವಿಧ ಮಜಲುಗಳಲ್ಲಿ ನಾವು ಕೆಲವು ವಿಶಿಷ್ಟ ವ್ಯಕ್ತಿಗಳನ್ನು ಭೇಟಿಯಾಗುವಂತಹ ಸಂದರ್ಭಗಳನ್ನು...
ಶಾಲಿನಿ ರಜನೀಶ್ -ರಜನಿ ಎಸ್ ಆಚಾರ್ಯ
ಶಾಲಿನಿ ರಜನೀಶ್ -ರಜನಿ ಎಸ್ ಆಚಾರ್ಯ

ನಮ್ಮ ಬಾಳ ಪಯಣದ ವಿವಿಧ ಮಜಲುಗಳಲ್ಲಿ ನಾವು ಕೆಲವು ವಿಶಿಷ್ಟ ವ್ಯಕ್ತಿಗಳನ್ನು ಭೇಟಿಯಾಗುವಂತಹ ಸಂದರ್ಭಗಳನ್ನು ವಿಧಿಯೆಂದು ಕರೆಯಬಹುದಾದ ಯಾವುದೋ ಒಂದು ಅಗೋಚರ ಶಕ್ತಿಯೇ ನಿರ್ಧರಿಸುತ್ತದೆಯೆಂಬುದು ನನ್ನ ಗಟ್ಟಿ ಅನಿಸಿಕೆ.  ಅಂತಹ ಸ್ಪೆಷಲ್ ವ್ಯಕ್ತಿತ್ವಗಳಿಂದ ನಾವು ಬಹು ಪ್ರಭಾವಿತರಾಗಿ ಅವರ ಪ್ರೇರಣೆಯಿಂದ ಏಕತಾನತೆಯಲ್ಲಿ ಹುದುಗಿರುವ  ನಮ್ಮ ಬದುಕಿನಲ್ಲೊಂದು ಆಕರ್ಷಕ ತಿರುವನ್ನು ಪಡೆದುಕೊಂಡಿರುವುದನ್ನು ನಂತರ ಯೋಚಿಸಿ ಬಲು ಸೋಜಿಗಗೊಂಡು ರೋಮಾಂಚಿತರಾಗುತ್ತೇವೆ.  ಹೀಗೇ ನನ್ನ ಬದುಕಿನ ಹತ್ತು ಹಲವು ಮಜಲುಗಳಲ್ಲೂ ಇಂತಹ ವಿಶೇಷ ವ್ಯಕ್ತಿಗಳ ಒಡನಾಟ ಸಿಕ್ಕು ನನ್ನನ್ನು ನಾನು ಉತ್ತಮಗೊಳಿಸಿಕೊಳ್ಳುವಂತಹ ಅದೃಷ್ಟ ನನ್ನದಾಗಿದೆ.  ಮದುವೆಯಾದ ನಂತರದ ವರುಷಗಳಲ್ಲಿ ನಾನು ಕಾನೂನು ಪದವಿ ಪಡೆದವಳು ಎನ್ನುವುದನ್ನು ನನ್ನ ಸಂಸಾರ,ದಾಂಪತ್ಯ ಮತ್ತು ತಾಯ್ತನ ಮರೆಸಿಯೇಬಿಟ್ಟಂತಾಗಿತ್ತು.   ಮದುವೆಯಾದ ನಂತರ ಎಂಟು ವರುಷಗಳು  ನಾನು ಸಂಸಾರವನ್ನು ನಿರ್ವಹಿಸುತ್ತಾ ಈ ಗೃಹಿಣಿ, ಪತ್ನಿ, ಸೊಸೆ, ಅತ್ತಿಗೆ, ತಾಯಿ ಈ ಎಲ್ಲಾ ಪಾತ್ರಗಳ ಹೊರತಾಗಿಯೂ ನನ್ನದೇ ಒಂದು ವ್ಯಕ್ತಿತ್ವವಿದೆ ಎಂಬುದು ನಾನು ಉದ್ದೇಶಪೂರ್ವಕವಾಗಿಯೋ ಕರ್ತವ್ಯನಿರತಳಾಗಿಯೋ ಮರೆತೇಬಿಟ್ಟಿದ್ದೆ.  ಈ ಎಲ್ಲಾ ಪಾತ್ರಗಳೂ ನಾನು ಯಶಸ್ವಿಯಾಗಿ ನಿರ್ವಹಿಸಿದ ಸವಾಲುಗಳೇ ಆಗಿದ್ದವಾದರೂ ಕಾಡುತ್ತಲೇ ಇದ್ದ ಒಂದು ವಿಧದ ಐಡೆಂಟಿಟಿ ಕ್ರೈಸಿಸ್ ನ ಕಸಿವಿಸಿಯನ್ನು ಹೇಳಿಕೊಳ್ಳುವುದಾದರೂ ಯಾರೊಂದಿಗೆ..?  ಸಂಸಾರದಲ್ಲಿ ಮುಳುಗಿ ಏಳುವಷ್ಟರಲ್ಲಿ ಸ್ನೇಹಿತೆಯರು ಕಳೆದೇಹೋಗಿದ್ದರು.  ಸುಭದ್ರ ಸಂಸಾರವಿದ್ದರೂ ಪ್ರತಿ ಹೆಣ್ಣಿನ ಏನೋ ಒಂದು ಹುಡುಕಾಟದ ಅಭದ್ರತೆಯ  ಕೀಳರಿಮೆಯನ್ನು ಬೆಳೆಸುವಂತಹ ಬದುಕಿನ ಕ್ರಾಸ್ ರೋಡಿನಲ್ಲಿ ನಿಂತು ಕನ್ಫ್ಯೂಸ್ ಆಗಿದ್ದ ನನಗೆ ನಾ ನಡೆಯಬೇಕಾಗಿದ್ದ ದಾರಿಯೆಡೆ ಪ್ರೇರಣೆಯನ್ನು ಮತ್ತು ಬೆಳಕನ್ನು ತೋರಿದ ದಿಟ್ಟ ಧೀರ ಮಹಿಳೆ ಡಾ| ಶಾಲಿನಿ ರಜನೀಶ್.  ಅವರೊಂದಿಗೆ ಕಳೆದ ಒಂದೂವರೆ ವರುಷದ ವಾಕಿಂಗ್ ಒಡನಾಟ  'ಹೊಸತನ ತುಂಬಿದ ನನ್ನನ್ನು' ನನಗೇ ಪರಿಚಯಿಸಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು.  ಪತಿಯವರು ಉದ್ಯೋಗನಿಮಿತ್ತ ಗುಲ್ಬರ್ಗಕ್ಕೆ ತೆರಳಬೇಕಾದಾಗ ಈ ಬೆಂಗಳೂರೆಂಬ ಮಾಯಾನಗರವನ್ನು ಬಿಟ್ಟು ಅವರೊಡನೇ ತೆರಳಲು ನಾನು ಮಕ್ಕಳೊಡನೆ ಬಲು ಉತ್ಸುಕಳಾಗಿಯೇ ಹೊರಟಿದ್ದು, ಬೆಂಗಳೂರೇ ಮಕ್ಕಳ ವಿದ್ಯಾಭ್ಯಾಸಕ್ಕೆ ಅಲ್ಟೀಮೇಟ್ ಎನ್ನುವ ನಮ್ಮ ಸಂಬಂಧಿಕರಿಗೆ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಆ ನಿರ್ಣಯ ನಾನು ಬದುಕನ್ನು ನೋಡುವ ರೀತಿಯನ್ನೇ ಬದಲಿಸಿದ್ದು ಸುಳ್ಳಲ್ಲ. ತಂಪುನಾಡಿನಿಂದ ಬೆಂಗಾಡಿಗೆ ಹೋದ ನಾವು ಕೊಂಚ ವಿಚಲಿತರಾಗಿದ್ದೆವು.  ಏನೂ ಮಾಡಲು ತೋಚದೇ ಈ ಜಡ ಜೀವನದ ಯಾಂತ್ರಿಕತೆ ಬಾಧಿಸಲಾರಂಭಿಸಿತ್ತು.  ಜೀವನವೆಂದರೆ ಇಷ್ಟೇ ಎಂಬುದನ್ನು ಒಪ್ಪಿಕೊಂಡ ಮನಸ್ಸು ಜಡ್ಡುಹಿಡಿದಿತ್ತು.  ಯಾರನ್ನು ಮಾತಾಡಿಸುವ ಮನಸ್ಸಿರದ ವಿಚಿತ್ರ ಮನಸ್ಥಿತಿ ಆಗ ನನ್ನದು.  ಆದರೆ ಅಲ್ಲೇ ನಮ್ಮ ಕ್ವಾರ್ಟರ್ಸ್ನ ಅನತಿ ದೂರದಲ್ಲೇ ಇದ್ದದ್ದು ಶಾಲಿನಿ ಮೇಡಮ್ ಅವರ ಕ್ವಾರ್ಟರ್ಸ್.  ಅದಾಗಲೇ ಬೆಂಗಳೂರಿನಿಂದ ವರ್ಗವಾಗಿ ಗುಲ್ಬರ್ಗಾಕ್ಕೆ ಬಂದು ಒಂದು ವರುಷದ ಮೇಲಾಗಿದ್ದ  ಶಾಲಿನಿ ಮತ್ತು ರಜನೀಶ್  ದಂಪತಿಗಳು ದಕ್ಷ IAS ಆಫೀಸರ್ಸ್ ಎಂದು ಗುಲ್ಬರ್ಗಾದಲ್ಲೆಲ್ಲಾ ಹೆಸರು ಪಡೆದಿದ್ದರು.  HKDB ಸೆಕ್ರೆಟರಿಯಾಗಿದ್ದ ಶಾಲಿನಿ ಮತ್ತು ರೀಜನಲ್ ಕಮಿಷನರ್ ಆಗಿದ್ದ ರಜನೀಶ್ ಸರ್ ಆಗಲೇ ತಮ್ಮ ದೂರದೃಷ್ಟಿಯುಳ್ಳ ಜನಪರ ಯೋಜನೆಗಳಿಂದ ಗುಲ್ಬರ್ಗಾದಲ್ಲಿ ಜನಪ್ರಿಯರಾಗಿದ್ದರು. ಇಷ್ಟು ಸಾಧನೆಗೆ ಅಷ್ಟು ಬೀಗುವ ನಾವು ಅವರೂ ಹಾಗೆಯೇ ಎಂದುಕೊಂಡು ನಮ್ಮ ಅಹಂನ ಕೋಟೆಯೊಳಗೇ ಅವರಿಂದ ತುಸು ದೂರವೇ ಇದ್ದೆವೇನೋ. ಆದರೆ ಅವರಿಬ್ಬರ  ಸರಳತೆ ಮತ್ತು ವಿನಯವಂತಿಕೆಯನ್ನು ಅವರೊಡನೇ ಒಡನಾಡಿಯೇ ಅರಿಯಬೇಕು.  ಒಂದೇ ಕಾಂಪೌಂಡಿನಲ್ಲಿದ್ದ ನಾವು ನಿಧಾನವಾಗಿ ಪರಿಚಿತರಾದೆವು.  ಆದರೆ ಅವರ ಅಗಾಧ ವ್ಯಕ್ತಿತ್ವ ಮತ್ತು ಅಪಾರ ಯಶಸ್ಸಿನ ಬಗ್ಗೆ ಓದಿಕೇಳಿ ತಿಳಿದಿದ್ದ ನನಗೇ ಸಲುಗೆಯಿಂದ ಮಾತನಾಡಲು ಏನೋ ಒಂದು ತರಹದ ಮುಜುಗರ.  ಆದರೆ ಅವರು ಎರಡು ಭೇಟಿಗಳಲ್ಲಿಯೇ ನನ್ನ ಎಲ್ಲಾ ಸಂಶಯಗಳನ್ನು ಸರಿಸಿ ನನ್ನನ್ನು ತಮ್ಮ ಆಪ್ತವಲಯಕ್ಕೆ ಸೇರಿಸಿಕೊಂಡುಬಿಟ್ಟರು.  ದಿನನಿತ್ಯ ಬೆಳಗ್ಗೆ ಸಂಜೆ ಅವರೊಡನೇ ವಾಕಿಂಗಿನಲ್ಲಿ ಅವರೊಡನೇ ನಾ ಮಾಡಿಕೊಂಡ ನೂರಾರು ಜ್ಞಾನಪ್ರಚೋದಕ ವಿಷಯವಿನಿಮಯಗಳು ಕೂಪಮಂಡೂಕದಂತಿದ್ದ ನನ್ನ ಮನವನ್ನು ಜ್ಞಾನ ಸಾಗರಕ್ಕೆ ಬಿಟ್ಟಂತಾಯಿತು.  ಅವರ ಅದಮ್ಯ ಜೀವನ ಪ್ರೀತಿ ನನಗೂ ನಿಧಾನವಾಗಿ ಆವರಿಸಿಕೊಳ್ಳತೊಡಗಿತು. ಕನ್ನಡದೆಡೆಯ ಅವರ ಒಲವು, ಅವರ ಬ್ಯುಸಿ ಶೆಡ್ಯೂಲಿನಲ್ಲಿಯೂ ಅವರು ಮಾಡುತ್ತಿದ್ದ ಸಾಹಿತ್ಯ ಸೇವೆ, ಬರೆದ ಪುಸ್ತಕಗಳು, ಸರ್ಕಾರಿ ಅಧಿಕಾರಿಯಾಗಿ ಜನಪರ ಕಾರ್ಯಕ್ರಮಗಳ ಬಗೆಗಿನ ಅವರ ಅಸೀಮ ಉತ್ಸಾಹ, ಲಲಿತಕಲೆಗಳೆಡೆಯ ಕುತೂಹಲ ಇವೆಲ್ಲಾ ನನಗೂ ಅವರ ರೀತಿ ಸದಾ ಕಾರ್ಯತತ್ಪರವಾಗಿರುವಂತೆ ಉದ್ದೀಪಿಸಿತು.  ಜೀವನವೆಂದರೆ ಮನೆ ಸಂಸಾರ ಮಕ್ಕಳಷ್ಟೇ ಅಲ್ಲದೇ ಸಾಧಿಸಿ ತೋರಿಸಲು ನನಗೂ ಬಹಳಷ್ಟು ಇದೆ ಎಂಬುದು ನನಗೆ ತಿಳಿಸಿ ಹೇಳಿದ ಅವರು ಏನಾದರೂ ಬರೆಯುತ್ತಿರು ಎಂದು ಪ್ರೋತ್ಸಾಹಿಸಿ ನನ್ನ ಜಡಚೇತನಕ್ಕೆ ಹೊಸ ಜೀವ ತುಂಬಿದರು.  ಬಿಡುವಿಲ್ಲದ ಅವರ ಕಾರ್ಯಕ್ರಮಗಳ ಬಗ್ಗೆ ವಿವರಿಸುತ್ತಾ ನನ್ನೊಡನೇ ಚರ್ಚೆ ನಡೆಸುತ್ತಿದ್ದ ಶಾಲಿನಿಯವರು ನನಗೆಂದು ಪ್ರೇರಣಾ ಶಕ್ತಿ ಮತ್ತು ಸ್ಫೂರ್ತಿಯ ಚಿಲುಮೆಯಂತೆ.   ತಮ್ಮ ಯೋಜನೆಗಳನ್ನು ಅವರು ನಮ್ಮ ಕಣ್ಮುಂದೆಯೇ ಸಾಕಾರ ಮಾಡಿದ್ದನ್ನು ನೋಡಿದ ಭಾಗ್ಯ ನಮ್ಮದು.  ಗುಲ್ಬರ್ಗಾದ ಅಪ್ಪನ ಕೆರೆಯ ಹೂಳೆತ್ತಿಸಿ ಕೊಟ್ಟ ಹೊಸ ರೂಪ, ಕೋಟೆಯ ಜೀರ್ಣೋದ್ಧಾರ, ಐವಾನ್ ಎ ಶಾಹಿ ಗೆಸ್ಟ್ ಹೌಸಿನಲ್ಲಿ ಸುಂದರ ಉದ್ಯಾನವನ ಇವೆಲ್ಲಾ ಅವರ ಸಾಧನೆಯ ಕಿರೀಟದ ಕೆಲವು ಗರಿಗಳಷ್ಟೇ. ಪಂಜಾಬಿನವರಾದ ಶಾಲಿನಿಯವರ 'ನಿಮ್ಮ ಗೆಲುವು ನಿಮ್ಮ ಕೈಯಲ್ಲಿದೆ' ಎಂಬ ಸ್ಫೂರ್ತಿದಾಯಕ ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ.  ಆಕೆಯ ಧೀಶಕ್ತಿಗೆ ಮಾರುಹೋದ ನಾನು ಅವರಿಂದ ಕಲಿತದ್ದು ಆತ್ಮಸ್ಥೈರ್ಯ, ಕಾರ್ಯತತ್ಪರತೆ, ನಿಚ್ಚಳ ನಿಲುವು, ಸ್ಪಷ್ಟ ಗುರಿಯೆಡೆಯ ಪಯಣ ಮತ್ತು ಜೀವನವನ್ನು ಇಡಿಇಡಿಯಾಗಿ ಅನುಭವಿಸುವುದರ ರೋಚಕತೆ.  ಹೋಲಿಯಲ್ಲಿ ನಮ್ಮೊಡನೇ ಮನದುಂಬಿ ನರ್ತಿಸುವ, ನವರಾತ್ರಿಯಲಿ ಡಾಂಡಿಯಾ ಆಡುವ ಉತ್ಕಟತೆಯೇ ಶಾಲಿನಿಯವರ ಸಾರ್ವಜನಿಕ ಕೆಲಸದೆಡೆಯ ಬದ್ಧತೆಯಲ್ಲೂ ಇದ್ದದ್ದು ನಮಗೆ ಜೀವನವನ್ನು ಹೇಗೆ ಉತ್ಕಟವಾಗಿ ಬದುಕಬೇಕೆಂದು ತಿಳಿಸಿಕೊಟ್ಟಿದೆ.   ಜೀವನದಲ್ಲಿ ನೆವರ್ ಸೇ ಡೈ ಎಂದು ಹೇಳುವುದನ್ನೂ ಅವರಿಂದಲೇ ನಾನು ಕಲಿತೆ.  ಮನೆಯನ್ನೂ ಸಮರ್ಥವಾಗಿ ನಡೆಸುತ್ತಾ  ರಂಗಭೂಮಿ, ಸಂಗೀತ, ಬರವಣಿಗೆ, ಯೋಗ, ಸುಗಮ ಸಂಗೀತ, ಕಾನೂನು ಅಧ್ಯಯನ ಹೀಗೇ ನಾನು ಇಷ್ಟಪಡುವಂತಹ ಈ ಎಲ್ಲಾ ಕ್ಷೇತ್ರಗಳಲ್ಲಿ ನಾನು ಈಗ ಸಕ್ರಿಯಳಾಗಿದ್ದೇನೆ ಅಂದರೆ ಅದಕ್ಕೆ ಶಾಲಿನಿಯವರೊಡನೇ ಕಳೆದ ಅಮೂಲ್ಯ ಕ್ಷಣಗಳೇ ಕಾರಣ. ನನ್ನನ್ನು ಅತ್ಯಂತ ಪ್ರಭಾವಿಸಿ ಪ್ರೇರೇಪಿಸಿದ ಮಹಿಳೆಯರಲ್ಲಿ ಅವರದು ಮುಖ್ಯಪಾತ್ರವಿದೆ. ಈ ಮಹಿಳಾ ದಿನಾಚರಣೆಗೆ ಈ ಲೇಖನ ಅವರಿಗೇ ಅರ್ಪಣೆ...

-ರಜನಿ ಎಸ್ ಆಚಾರ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com