
ನೈರೋಬಿ: ಮದುವೆಯಾಗುವ ಗಂಡಿಗೆ ಅದೇ ಇಲ್ಲ ಎಂಬ ಕನ್ನಡದ ತುಸುತುಂಟ ಗಾದೆ. ಆದರೆ ಕೀನ್ಯಾದ ವಿವಾಹಿತ ಪುರುಷರ ವಿಷಯದಲ್ಲಿ ಈ ಗಾದೆ ನಿಜವಾಗುವ ಅಪಾಯ ಎದುರಾಗಿದೆ. ಈ ಭಯದಿಂದಾಗಿ ಪುರುಷರು ತಮ್ಮ ದೇಹದ ಸೆಕೆಂಡ್ ಹಾಫ್ಗೆ ಸೇಫ್ ಡಿಪಾಸಿಟ್ ಲಾಕರ್ ಮಾಡಿಸಲು ಮುಂದಾಗಿದ್ದಾರೆ.
ನಿಜ ಕಣ್ರೀ..! ಕೀನ್ಯಾದಲ್ಲಿ ತಮ್ಮ ಲಗೇಜಿಗೆ ತಾವೇ ಜವಾಬ್ದಾರರು ಎಂಬ ಎಚ್ಚರಿಕೆ ತೆಗೆದುಕೊಂಡಿರುವ ಪುರುಷರು ವಸ್ತ್ರ ವಿನ್ಯಾಸಕರ ಮೊರೆ ಹೋಗಿದ್ದು, ಇದೀಗ ಅವರಿಗಾಗಿ ಸ್ಪೆಷಲ್ ಕೆಳ ಉಡುಪುಗಳನ್ನು ಸಿದ್ಧಪಡಿಸಲಾಗಿದೆ. ಸ್ಪೆಷಲ್ ಅಂದ್ರೆ.. ಗಟ್ಟಿಲೋಹದಿಂದ ತಯಾರಿಸಿದ ಈ ಬರ್ಮುಡಾ ತ್ರಿಕೋಣವಸ್ತ್ರ! ಇದಕ್ಕೆ ಬೀಗ ಹಾಕುವ ವ್ಯವಸ್ಥೆಯನ್ನೂ ನೀಡಲಾಗಿದೆ. ಪುರುಷರು ಪ್ಯಾಂಟ್ ಹಾಕುವ ಮೊದಲು ಈ ಲೋಹವಸ್ತ್ರ ಧರಿಸಿ ಬೀಗ ಹಾಕಿಕೊಂಡು ಕೀ ಎತ್ತಿಟ್ಟುಕೊಂಡರೆ ಸೇಫ್! ರಾತ್ರಿ ಮಲಗುವಾಗಲೂ ಇದೇ ಎಚ್ಚರಿಕೆ ಪಾಲಿಸಲು ಅಲ್ಲಿನ ಪುರುಷರು ನಿರ್ಧರಿಸುತ್ತಿದ್ದಾರೆ.
ಯಾಕೀ ರಕ್ಷಾಕವಚ?
ಹೌದು ಅದಕ್ಯಾಕೆ ಈ ಪಾಟಿ ಪ್ರೊಟೆಕ್ಷನ್ ಎಂಬ ಅಚ್ಚರಿಯೇ? ಇದು ಕಳ್ಳಕಾಕರ ಭಯಕ್ಕಲ್ಲ, ಇನ್ಯಾವುದೋ ಕೊಲೆಗಡುಕರದ್ದೋ, ಪ್ರಾಣಿಗಳದ್ದೋ ಹೆದರಿಕೆಗೂ ಅಲ್ಲ. ತಮ್ಮ ಪತ್ನಿಯರಿಂದ ರಕ್ಷಿಸಿಕೊಳ್ಳಲು ಕಂಡುಕೊಂಡಿರುವ ಉಪಾಯವಿದು.
ಹಿಗ್ಗಾಮುಗ್ಗಾ ಕುಡಿದು ತಡರಾತ್ರಿ ಬರುವ ಪತಿ ತಮ್ಮೊಂದಿಗೆ ಮಂಚದಲ್ಲಿ ಸಹಕರಿಸುತ್ತಿಲ್ಲ ಎಂದು ವಿಪರೀತ ಕ್ರುದ್ಧಗೊಳ್ಳುತ್ತಿರುವ ಅಸಂತುಷ್ಟ ಪತ್ನಿಯರು, `ಅದು' ಯಾಕೆ ಹೇಳಿ ನಿಮ್ಗೆ? ಎಂದು ಸಿಟ್ಟಿನಿಂದ ಕೇಳುತ್ತಿದ್ದಾರಂತೆ. ಜಗಳವಾಡಿದರೂ ಓಕೆ. ಇನ್ನೂ ವಿಪರೀತಗಳನ್ನು ಯೋಚಿಸಿರುವ ಕೆಲವು ಹೆಂಗಳೆಯರು, ಸೆನ್ಸಾರ್ ವಿಷಯಕ್ಕೇ ಕತ್ತರಿ ಹಾಕುವ ಬಗ್ಗೆ ಬಹಿರಂಗವಾಗಿ ಧಮಕಿ ಹಾಕಿದ್ದಾರೆ. ಆದರೆ ಇದರಿಂದ ಬೆದರಿದ ಗಂಡಸರು ಕುಡಿತ ಬಿಡುವ ಬದಲಿಗೆ ಲೋಹದ ಕವಚಗಳ ಮೊರೆ ಹೋಗಿದ್ದಾರೆ.
ಸೀರಿಯಸ್ ಮ್ಯಾಟರ್ ಏನಂದ್ರೆ..
ಕೀನ್ಯಾದ ಒಂದಷ್ಟು ಪಟ್ಟಣಗಳಲ್ಲಿ ಮನೆಯಲ್ಲಿ ತಯಾರಿಸುವ ಕಳ್ಳಭಟ್ಟಿ ಮದ್ಯ ನಿಜಕ್ಕೂ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಭಾರಿ ಕಿಕ್ ಕೊಡುತ್ತದೆಂಬ ಕಾರಣಕ್ಕೆ ಹೆಚ್ಚಿನ ಪುರುಷ ಸಮೂಹವೇ ಅಲ್ಲಿ ಮದ್ಯದ ದಾಸರಾಗಿ ಹೋಗಿದ್ದಾರೆ. ಇದರಿಂದಾಗಿ ಅಲ್ಲಿನ ಅನೇಕ ಗೃಹಿಣಿಯರಿಗೆ ಮಕ್ಕಳೇ ಆಗಿಲ್ಲ, ಜೊತೆಗೆ ಲೈಂಗಿಕ ಜೀವನದಲ್ಲೂ ಕೊರತೆ ಅನುಭವಿಸುತ್ತಿದ್ದಾರೆ. ಸರ್ಕಾರದೆದುರು ಈ ಮದ್ಯನಿಷೇಧಕ್ಕೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಯಾವುದೂ ಫಲಕಾಣದೆ ಇಂಥದೊಂದು ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
Advertisement