ನೇಪಾಳವನ್ನು ಹಿಂದೂರಾಷ್ಟ್ರವೆಂದು ಘೋಷಿಸಿ: ನೇಪಾಳಿ ಮುಸ್ಲಿಮರ ಒತ್ತಾಯ

ನೇಪಾಳದಲ್ಲಿ ಸಂವಿಧಾನ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅಲ್ಲಿನ ಮುಸ್ಲಿಮರು ನೇಪಾಳವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಠ್ಮಂಡು: ನೇಪಾಳದಲ್ಲಿ ಸಂವಿಧಾನ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅಲ್ಲಿನ ಮುಸ್ಲಿಮರು ನೇಪಾಳವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸೆಕ್ಯುಲರ್ ಸಂವಿಧಾನಕ್ಕಿಂತಲೂ ಹಿಂದೂರಾಷ್ಟ್ರದ ಸಂವಿಧಾನದಲ್ಲೇ ಸುರಕ್ಷಿತವಾಗಿರುತ್ತೇವೆ ಎಂದು ನೇಪಾಳದಲ್ಲಿರುವ ಮುಸ್ಲಿಮರು ಹೇಳಿದ್ದಾರೆ.

ನೇಪಾಳದ ಹಿಂದೂ ರಾಷ್ಟ್ರದ  ಗುರುತನ್ನು ಹಾಗೆಯೇ ಉಳಿಸಿಕೊಳ್ಳಬೇಕು ಸೆಕ್ಯುಲರ್ ಸಂವಿಧಾನ ಜಾರಿಗೆ ಬರುವುದು ಬೇಡ ಎಂದು ಹೇಳಿರುವ ಮುಸ್ಲಿಮರು ನೇಪಾಳ ಹಿಂದೂರಾಷ್ಟ್ರವಾಗಬೇಕು ಎಂದು ಅಭಿಯಾನ ಪ್ರಾರಂಭಿಸಿದ್ದಾರೆ. ಇಸ್ಲಾಂ  ಮತವನ್ನು ಕಾಪಾಡುವುದಕ್ಕೆ ಹಿಂದೂ ರಾಷ್ಟ್ರದಿಂದ ಮಾತ್ರ ಸಾಧ್ಯ. ನನ್ನ ಸ್ವಧರ್ಮವನ್ನು ಕಾಪಾಡುವುದಕ್ಕಾಗಿ ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ನೇಪಾಳದ ರಪ್ತಿ ಮುಸ್ಲಿಂ ಸೊಸೈಟಿ ಅಧ್ಯಕ್ಷ ಅಮ್ಜದ್ ಅಲಿ ಹೇಳಿದ್ದಾರೆ.  ಅಲ್ಲದೇ ಇದಕ್ಕಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಸಿಪಿಎನ್- ಯುಎಂಎಲ್ ನ ಸದಸ್ಯೆಯಾಗಿರುವ ಅನಾರ್ಕಲಿ ಮಿಯಾ ಸಹ ನೇಪಾಳವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕೆಂಬ ಒತ್ತಾಯಕ್ಕೆ ಬೆಂಬಲ ನೀಡಿದ್ದು, ಕ್ರೈಸ್ತ ಮತವನ್ನು ಅನುಸರಿಸುವಂತೆ ಮಿಷನರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನೇಪಾಳವೆನಾದರು ಸೆಕ್ಯುಲರ್ ಸಂವಿಧಾನವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಿಯಾ ತಿಳಿಸಿದ್ದಾರೆ.  
ನೇಪಾಳದಲ್ಲಿ ಕ್ರೈಸ್ತ ಮತದ ಪ್ರಚಾರ ಹೆಚ್ಚುತ್ತಿರುವುದರಿಂದ ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಮುಸ್ಲಿಂ ಮುಕ್ತಿ ಮೋರ್ಚಾದ ಸಹ ಸಂಸ್ಥೆ ಯುಸಿಪಿಎನ್ ನ(ಮಾವೋ ವಾದಿ) ಅಧ್ಯಕ್ಷ ಉದ್ಬುದ್ದೀನ್ ಫ್ರು ಕೂಡ ಆಗ್ರಹಿಸಿದ್ದಾರೆ.  ನೇಪಾಳವನ್ನು ಸೆಕ್ಯುಲರ್ ದೇಶವನ್ನಾಗಿ ಮಾಡುವುದರ ಹಿಂದೆ ಹಿಂದೂ- ಮುಸ್ಲಿಮರ ನಡುವಿನ ಅಂತರವನ್ನು ಹೆಚ್ಚು ಮಾಡುವ ಹುನ್ನಾರವಿದೆ. ಅದ್ದರಿಂದ ನೇಪಾಳದ ಅತಿ ಪುರಾತನ ಪರಂಪರೆಯಾದ ಹಿಂದೂಧರ್ಮವನ್ನು ಹಾಗೆಯೇ ಉಳಿಸಿಕೊಂಡು ಹಿಂದೂರಾಷ್ಟ್ರವನ್ನಾಗಿಸಬೇಕಾದ ಅನಿವಾರ್ಯತೆ ಇದೆ ಎಂದು  ರಾಷ್ಟ್ರವಾದಿ ಮುಸ್ಲಿಂ ಮಂಚ್ ನೇಪಾಳ್ ಗಂಜ್ ನ ಅಧ್ಯಕ್ಷ ಬಾಬು ಖಾನ್ ಪಠಾಣ್ ಹಿಮಾಯಲನ್ ಟೈಮ್ಸ್ ಗೆ ಹೇಳಿಕೆ ನೀಡಿದ್ದಾರೆ.
ಹಿಂದೂರಾಷ್ಟ್ರಕ್ಕಿಂತ ಸೆಕ್ಯುಲರ್ ರಾಷ್ಟ್ರವಿರಲು ಸಾಧ್ಯವಿಲ್ಲ, ನೇಪಾಳವನ್ನು ಹಿಂದೂರಾಷ್ಟ್ರ ಎಂದೇ ಗುರುತಿಸಬೇಕು, ಹಾಗಾದಲ್ಲಿ ಮಾತ್ರ ಎಲ್ಲರಿಗೂ ಭದ್ರತೆ ಇರಲಿದೆ ಎಂದು ಪಠಾಣ್ ಹೇಳಿದ್ದಾರೆ. ಅಲ್ಲದೇ ನೇಪಾಳದಲ್ಲಿರುವ ಶೇ.80 ಮುಸ್ಲಿಮರು ನೇಪಾಳವನ್ನು  ಹಿಂದೂರಾಷ್ಟ್ರ ಎಂದು ಘೋಷಿಸುವುದಕ್ಕೆ ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com