
ಸಿಡ್ನಿ: ಇಬ್ಬರು ಮಲಗಿ ಮೂರನೇಯವ ಸೃಷ್ಟಿಯಾಗುವುದು ಜಗತ್ತಿನ ನಿಯಮ ನಿಜ. ಆದರೆ ಅದಕ್ಕೆ ಕನಿಷ್ಠ 9 ತಿಂಗಳುಬೇಕು. ರಾತ್ರಿ ಇಬ್ಬರು ಮಲಗಿ ಬೆಳಗ್ಗೆ ಹೊತ್ತಿಗೆ ಇಬ್ಬರಿದ್ದವರ ಮೂವರಾಗಿ ಬಿಟ್ಟರೆ ಹೇಗಿರುತ್ತದೆ.
ಅದು ವಿಸ್ಮಯವೇ ತಾನೇ? ಅದರಲ್ಲೂ ಮೂರನೇ ಜೀವ 25 ವರ್ಷದ ಗಂಡಸಾಗಿದ್ದರೆ? ತರ್ಕಕ್ಕೆ ನಿಲುಕುತ್ತಿಲ್ಲ ಅಂತೀರಾ? ಅಂಥ ಪವಾಡವೇನೂ ನಡೆದಿಲ್ಲ. ಆದರೆ ಇದು ಆತಂಕಕಾರಿ ತಮಾಷೆ ಘಟನೆಯಂತೂ ಹೌದು. ಓದುವವರಿಗೆ ಚೆಲ್ಲಾಟ ಅನುಭವಿಸಿದವರಿಗೆ ಪ್ರಾಣ ಸಂಕಟ ಎಂಬಂಥ ಕಥೆ ಇದು.
ಸಿಡ್ನಿಯ ಜೋಡಿಯೊಂದು ಎಂದಿನಂತೆ ರಾತ್ರಿಯ ಗಡದ್ದು ಊಟ ಮುಗಿಸಿ ಬೆಡ್ ರೂಂ ಸೇರಿಕೊಂಡಿದೆ. ಸುಖನಿದ್ರೆಯ ಮಧ್ಯೆ ಗೊರಕೆ ಶಬ್ದಕ್ಕೋ ಏನೋ ಇದ್ದಕ್ಕಿದ್ದಂತೆಯೇ ಪತ್ನಿಗೆ ಎಚ್ಚರವಾಗಿದೆ. ಸುಮಾರು 1.45ಗಂಟೆಯ ಹೊತ್ತು. ಕಣ್ ಬಿಟ್ಟು ನೋಡಿದರೆ ಬಲಬದಿಯಲ್ಲಿರುವ ಗಂಡ ಸೈಲೆಂಟಾಗಿ ನಿದ್ರಿಸುತ್ತಿದ್ದಾನೆ.
ಎಡ ಮಗ್ಗುಲಾದರೆ ಅಪರಿಚಿತ ಪುರುಷನೊಬ್ಬ ಗೊರೆಯುತ್ತಿದ್ದಾನೆ. ಆತನ ಮುಖದಿಂದ ಕೊಂಚ ಕೆಳಗೆ ಕಣ್ಣಾಯಿಸಿದ ಲೇಡಿ ಮೂರ್ಛೆ ತಪ್ಪುವುದೊಂದು ಬಾಕಿ. ಆತ ಪೂರ್ತಾಪೂರ್ತಿ ನಗ್ನ!. ತಕ್ಷಣ ಈಕೆ ಗಂಡನನ್ನು ಎಬ್ಬಿಸಿದ್ದಾಳೆ. ಗಂಡ ಗೊರ್ಕೆಮ್ಯಾನ್‍ನನ್ನು ತಟ್ಟಿ ಎಬ್ಬಿಸಿ ಪ್ರಶ್ನಿಸಿದ ಕೂಡಲೇ ಆತ ಬಟ್ಟೆ ಎತ್ತಿಕೊಂಡು ಮನೆಯಿಂದ ಓಡಿದ್ದಾನೆ. ಆದರೆ ದಂಪತಿ ಆತನನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಸಫಲರಾಗಿದ್ದಾರೆ.
ಒಳಬಂದದ್ದು ಹೇಗೆ?: ಈತನಿಗೆ 25 ವರ್ಷ ವಯಸ್ಸೆಂದೂ, ಐರಿಷ್ ಮೂಲದವನೆಂದೂ ಪೊಲೀಸರಿಂದ ತಿಳಿದುಬಂದಿದೆ. ಈತ ಪೊಲೀಸ್ ಸ್ಟೇಷನ್ ನಲ್ಲಿ ಕೊಟ್ಟ ಹಾವಳಿಗೆ ಕಂಗೆಟ್ಟ ಪೊಲೀಸರು ಆತ ಮಾದಕ ದ್ರವ್ಯಗಳ ವ್ಯಸನಿ ಎಂದು ಗೊತ್ತಾದ ನಂತರ ಆ್ಯಂಬುಲೆನ್ಸಲ್ಲಿ ಆಸ್ಪತ್ರೆಗೆ ಕಳಿಸಿದ್ದಾರೆ. ಆದರೆ ಈ ಮಾನಸಿಕ ಅಸ್ವಸ್ಥ ಮನೆ ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆಗೆ ದಂಪತಿಗಳೂ ಕೂಡ ಅಚ್ಚರಿಯಿಂದಲೇ ಉತ್ತರಿಸಿದ್ದಾರೆ.
ಮನೆಯಲ್ಲಿ ಸಾಕಿರುವ ಬೆಕ್ಕಿಗೆ ಓಡಾಡಿಕೊಳ್ಳಲು ಅನುಕೂಲ ಆಗಲೆಂದು ಕಿಟಕಿಯನ್ನು ತೆರೆದಿಟ್ಟಿದ್ದೆವು. ಆದರೆ ಅಲ್ಲಿಂದ ಹೀಗೊಬ್ಬ ಮನುಷ್ಯನೊಬ್ಬ ಬರಬಹುದೆಂದು ಊಹಿಸಿಯೂ ಇರಲಿಲ್ಲ. ಕಿಟಕಿಯವರೆಗೂ ಆತ ಹೇಗೆ ಹತ್ತಿ ಬಂದ ಎಂಬುದೇ ಅರ್ಥವಾಗುತ್ತಿಲ್ಲ ಎಂದು ದಂಪತಿ ಹೇಳಿದ್ದಾರೆ. ಸದ್ಯ ಮೂರನೇ ವ್ಯಕ್ತಿಯ ಪ್ರವೇಶ ಪತಿ ಪತ್ನಿ ಮದ್ಯೆ ಸಂಶಯಕ್ಕೆ ಕಂಡಿದೆ. ಯಾಕಂದ್ರೆ ಅದು ಪರದೇಶ!.
Advertisement