
ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ಎನ್ ಎಸ್ ಎ ಮಾತುಕತೆ ರದ್ದುಗೊಂಡಿರುವುದರ ಬಗ್ಗೆ ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿದೆ.
ಎನ್ಎಸ್ಎ ಸಭೆ ರದ್ದುಗೊಂಡ ಬೆನ್ನಲ್ಲೇ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರತಿನಿಧಿಯಾಗಿರುವ ಮಳೆಹಾ ಲೋಧಿಗೆ, ಭಾರತ ಮಾತುಕತೆ ರದ್ದುಗೊಳಿಸಿರುವುದರ ಬಗ್ಗೆ ವಿಶ್ವಸಂಸ್ಥೆ ನಾಯಕರೊಂದಿಗೆ ಚರ್ಚಿಸಲು ಪಾಕಿಸ್ತಾನ ಸೂಚಿಸಿತ್ತು.
ಪಾಕಿಸ್ತಾನದ ಪ್ರತಿನಿಧಿ ವಿಶ್ವಸಂಸ್ಥೆ ಉಪ ಕಾರ್ಯದರ್ಶಿ ಜಾನ್ ಎಲಿಯಾಸನ್ ಗೆ ಎನ್ಎಸ್ಎ ಮಾತುಕತೆ ರದ್ದುಗೊಂಡಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಅಂತಾರಾಷ್ಟ್ರೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನ ವಿಶ್ವಸಂಸ್ಥೆ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ ಎಂದು ವಿಶ್ಲೇಶಿಸಲಾಗುತ್ತಿದೆ.ಕಾಶ್ಮೀರಿ ಪ್ರತ್ಯೆಕತಾವಾದಿಗಳೊಂದಿಗೆ ಮಾತುಕತೆ ನಡೆಸಬಾರದು ಎಂಬ ಭಾರತ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ರನ್ನು ಭಾರತಕ್ಕೆ ಕಲಿಸಲಿಲ್ಲ ಎಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ತಿಳಿಸಿದೆ.
ಕಾಶ್ಮೀರ ವಿವಾದ ಅಂತ್ಯಗೊಳ್ಳಬೆಖಿದ್ದರೆ, ಆ ವಿಷಯದ ಅವಿಭಾಜ್ಯವಾಗಿರುವ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದು ಅಗತ್ಯ ಎಂದು ಪಾಕಿಸ್ತಾನ ವಾದ ಮಾಡಿದೆ. ಇದೇ ವೇಳೆ ಭಾರತ ಕಳೆದ ಜೂನ್ ನಿಂದ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
Advertisement