
ಬೀಜಿಂಗ್: ಅತಿಯಾದ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಚೀನಾ ರಾಜಧಾನಿ ಬೀಜಿಂಗ್ ಇದೇ ಮೊದಲ ಬಾರಿಗೆ 'ರೆಡ್ ಅಲರ್ಟ್' ಘೋಷಿಸಿದ್ದು, ಇನ್ನೂ ಮೂರು ದಿನಗಳ ಕಾಲ ಬೀಜಿಂಗ್ ನಲ್ಲಿ ದಟ್ಟ ಮಂಜು ಕವಿಯಲಿದೆ ಎಂದು ಎಚ್ಚರಿಸಿದೆ.
ಬೀಜಿಂಗ್ ನಗರದಲ್ಲಿ ಮಂಗಳವಾರ-ಗುರುವಾರದವರೆಗೆ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದ್ದು ಈ ಹಿನ್ನೆಲೆಯಲ್ಲಿ ಬೀಜಿಂಗ್ ನಗರಾಡಳಿತ ಅಲ್ಲಿನ ನಿವಾಸಿಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಬೀಜಿಂಗ್ ನಗರದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು, ವಿವಿಧ ಬಗೆಯ ಕಾರ್ಖಾನೆಗಳು, ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳು, ದೊಡ್ಡ ಸಂಖ್ಯೆಯ ವಾಹನಗಳು ಇರುವುದರಿಂದ ಅಲ್ಲಿ ವಾಯು ಮಾಲಿನ್ಯ ಅತ್ಯಧಿಕವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂಷಿಸಿದ್ದಾರೆ.
ಅತಿಯಾದ ವಾಯುಮಾಲಿನ್ಯದಿಂದಾಗಿ ಅಲ್ಲಿನ ನಿವಾಸಿಗಳು ಉಸಿರಾಡಲು ಸ್ವಚ್ಛ ಗಾಳಿ ಸಿಗದೇ ನಾನಾ ಬಗೆಯ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸ್ಥಿತಿಯಲ್ಲಿ ಮಂಜು ದಟ್ಟವಾಗಿ ಕವಿಯಿತೆಂದರೆ, ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಾಗಿ, ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗುತ್ತದೆ.
ಮುಂದಿನ ಎರಡು ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ, ಕಟ್ಟಡದ ಅವಶೇಷಗಳನ್ನು ಸಾಗಿಸುವ ವಾಹನಗಳು ಸೇರಿದಂತೆ ನಿರ್ದಿಷ್ಟವಾದ ಸಂಖ್ಯೆಯ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಹಾಗೂ ಶಾಲಾ-ಕಾಲೇಜುಗಳಿಗೆ ಕಡ್ಡಾಯವಾಗಿ ರಜೆ ನೀಡಬೇಕೆಂದು ಬೀಜಿಂಗ್ ನಗರಾಡಳಿತ ಎಚ್ಚರಿಕೆ ನೀಡಿದೆ.
Advertisement