ಇಲ್ಲಿ ಸಾಯೋದು ಅಪರಾಧ!

``ಹುಟ್ಟು ಉಚಿತ, ಸಾವು ಖಚಿತ'' ಎಂಬ ಮಾತಿದೆ. ಆದರೆ, ಈ ಊರಲ್ಲಿ ಮಾತ್ರ ನೀವು `ಸಾವು ಖಚಿತ' ಎನ್ನುವ ಹಾಗಿಲ್ಲ. ಏಕೆಂದರೆ, ಇಲ್ಲಿ ಸಾಯುವುದು ಕಾನೂನುಬಾಹಿರ!...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ರೋಮ್: ``ಹುಟ್ಟು ಉಚಿತ, ಸಾವು ಖಚಿತ'' ಎಂಬ ಮಾತಿದೆ. ಆದರೆ, ಈ ಊರಲ್ಲಿ ಮಾತ್ರ ನೀವು `ಸಾವು ಖಚಿತ' ಎನ್ನುವ ಹಾಗಿಲ್ಲ. ಏಕೆಂದರೆ, ಇಲ್ಲಿ ಸಾಯುವುದು ಕಾನೂನುಬಾಹಿರ!

ಹೌದು. ಇದು ವಿಚಿತ್ರವಾದರೂ ಸತ್ಯ. ಇಟಲಿಯ ಕೆಲಾಬ್ರಿಯಾ ಪ್ರದೇಶದಲ್ಲಿರುವ ಪುಟ್ಟ ನಗರ ಸೆಲ್ಲಿಯಾದಲ್ಲಿ ಇತ್ತೀಚೆಗಷ್ಟೇ ಸಾಯುವುದನ್ನು ಕಾನೂನುಬಾಹಿರ ಎಂದು ಘೋಷಿಸಿ ಹೊಸ ಕಾನೂನು ಜಾರಿ ಮಾಡಲಾಗಿದೆ. ಆಯಸ್ಸು ಮುಗಿದರೆ ಯಾರೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಬೇಡಿ. ಸಾಯುವವರೆಗೂ ನೀವು ಎಷ್ಟು ಸಾಧ್ಯವೋ ಅಷ್ಟು ಬದುಕಲು ಪ್ರಯತ್ನಿಸಬೇಕು!

ಜನಸಂಖ್ಯೆ ಕಮ್ಮಿಯಾಗಿದ್ದಕ್ಕೆ: ಸೆಲ್ಲಿಯಾದ ಜನಸಂಖ್ಯೆ 1960ರ ಸಮಯದಲ್ಲಿ ಸುಮಾರು 1,500 ಆಗಿತ್ತು. ಆದರೆ, ಈಗ ಇದು 500ಕ್ಕಿಳಿದಿದೆ. ಈ ಪೈಕಿ ಹೆಚ್ಚಿನವರು 65 ವಯಸ್ಸು ದಾಟಿದವರು. ಇದರಿಂದ ಗಾಬರಿಯಾಗಿರುವ ಮೇಯರ್ ಡೇವಿಡ್ ಝಿಚಿನೆಲ್ಲಾ ಅವರು, ಇಂತಹುದೊಂದು ಕಠಿಣ ಕಾನೂನನ್ನು ಜಾರಿ ಮಾಡಿದ್ದಾರೆ. ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಲಿ ಎನ್ನುವುದೇ ಈ ಕಾನೂನಿನ ಉದ್ದೇಶ ಎಂದೂ ಅವರು ತಿಳಿಸಿದ್ದಾರೆ ಎಂದು ಸ್ಕೂಪ್‍ವೂಪ್ ವರದಿ ಮಾಡಿದೆ.

ರೋಗ ಬಂದು ಸಾಯುವಂತಿಲ್ಲ: ಈ ಕಾನೂನಿನಂತೆ, ಯಾರು ಕೂಡ ರೋಗ ಬಂದು ಸುಖಾಸುಮ್ಮನೆ ಸಾಯುವಂತಿಲ್ಲ. ಸಾಯದಂತೆ ಆಗಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂದ ಹಾಗೆ, ಜೀವ ಉಳಿಸಿ ಕೊಳ್ಳಲು ಯತ್ನಿಸುವವರಿಗೆ ಭರ್ಜರಿ ಕೊಡುಗೆಗಳೂ ಇವೆ. ಯಾರು ನಿಯಮಿತವಾಗಿ ತಪಾಸಣೆಗೆ ಒಳಗಾಗುತ್ತಾರೋ, ಅವರಿಗೆ ವಾರ್ಷಿಕ ಆರೋಗ್ಯ ತೆರಿಗೆಯಲ್ಲಿ 10 ಯೂರೋಗಳ ವಿನಾಯ್ತಿ ನೀಡಲಾಗುತ್ತದೆ. ಯಾರು ತಮ್ಮ ಆರೋಗ್ಯದ ಬಗ್ಗೆ ಅಷ್ಟೊಂದು ಗಮನಹರಿಸುವುದಿಲ್ಲವೋ, ಅವರಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ.

ಬೇರೆ ದೇಶಗಳಲ್ಲೂ
ಇತ್ತು ಇಂಥ ಕಾನೂನು ಸಾವನ್ನು ಕಾನೂನುಬಾಹಿರಗೊಳಿಸುವಂತಹ ಕಾನೂನು ಜಾರಿಯಾದದ್ದು ಇದೇ ಮೊದಲಲ್ಲ. ಸೆಲ್ಲಿಯಾಗಿಂತ ಹಿಂದೆ ಫ್ರಾನ್ಸ್, ಬ್ರೆಜಿಲ್, ಜಪಾನ್, ಸ್ಪೇನ್ ಮತ್ತಿತರ ದೇಶಗಳಲ್ಲೂ ಸಾಯುವುದಕ್ಕೆ ನಿಷೇಧ ಹೇರಲಾಗಿತ್ತು. ಸತ್ತವರನ್ನು ಹೂಳಲು ಜಾಗದ ಕೊರತೆ ಉಂಟಾಗಿದ್ದಕ್ಕೆ ಕೆಲವು ದೇಶಗಳು ಈ ಕಾನೂನಿನ ಮೊರೆ ಹೋಗಿದ್ದವು.ಪುರಾತನ ಗ್ರೀಕ್ ನಲ್ಲೂ ಇಂಥ ಪದ್ಧತಿಗಳಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com