
ಬ್ರಸೆಲ್ಸ್: ಭಾನುವಾರ ನಡೆಯುವ ಜನಾದೇಶಕ್ಕೆ ಮೊದಲು ಯಾವುದೇ ಸಾಲ ನೆರವು ನೀಡಿಕೆಯನ್ನು ಹಣಕಾಸು ಸಂಸ್ಥೆಗಳು ತಿರಸ್ಕರಿಸಿದ್ದರಿಂದ ದೇಶದ ಪ್ರಜೆಗಳನ್ನು ಕುರಿತು ದೂರದರ್ಶನದಲ್ಲಿ ಮಾತನಾಡಿದ ಗ್ರೀಕ್ ಪ್ರಧಾನಿ ಅಲೆಕ್ಸಿ ಸಿಪ್ರಾಸ್, ಹಣಕಾಸು ಸಂಸ್ಥೆಗಳು ವಿಧಿಸಿರುವ ಷರತ್ತುಗಳನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.
ಸಿಪ್ರಾಸ್ ಕಳೆದ ಜನವರಿಯಲ್ಲಿ ಪ್ರಧಾನಿಯಾಗಿ ಆಯ್ಕೆಯಾದಂದಿನಿಂದಲೂ ಸಾಲ ನೀಡಿರುವ ಸಂಸ್ಥೆಗಳೊಂದಿಗೆ ಜಗಳವಾಡಿಕೊಂಡು ಬಂದಿರುವ ಅವರು, ಗುರುವಾರ ಸಹ ಷರತ್ತುಗಳ ವಿರುದ್ಧ ಮತ ನೀಡುವಂತೆ ಕೋರಿದ್ದಾರೆ. ಭಾನುವಾರದ ಜನಾದೇಶ ಗ್ರೀಸನ್ನು ಯುರೊ ಒಕ್ಕೂಟದಿಂದ ಹೊರಗಿಡುವ ಅಥವಾ ಸೇರಿಸಿಕೊಳ್ಳುವ ಕುರಿತ ನಿರ್ಣಯವಾಗಿದೆ ಎಂದು ಐರೋಪ್ಯ ಒಕ್ಕೂಟದ ಮುಖಂಡರು ಭಾವಿಸಿದ್ದಾರೆ.
ದೇಶದ ಜನರಿಗೆ ಅನುಕೂಲವಾಗುವಂತಹ ಷರತ್ತುಗಳೊಂದಿಗೆ ಸೋಮವಾರ ಸಂಧಾನ ಮಾತುಕತೆಗೆ ತೆರಳುತ್ತೇನೆ ಎಂದು ಸಿಪ್ರಾಸ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಸಾಲ ಮರುಪಾವತಿಗೆ ಅಂತಿಮ ದಿನವಾಗಿದ್ದ ಜೂ.30ರಂದು ತಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನಡೆಸಿದ ನಂತರ ಸಿಪ್ರಾಸ್ ಜನಾದೇಶಕ್ಕೆ ಮುಂದಾಗಿದ್ದರು.
ಭಾನುವಾರದ ಜನಾದೇಶದವರೆಗೂ ಯಾವುದೇ ಮಾತುಕತೆ ನಡೆಸದಿರಲು ನಿರ್ಧರಿಸಿರುವ ಐರೋಪ್ಯ ಒಕ್ಕೂಟದ ಹಣಕಾಸು ಸಚಿವರು ಮತ್ತಷ್ಟು ಸಂಧಾನ ಮಾತುಕತೆಗಳನ್ನು ನಡೆಸಲು ಯಾವುದೇ ದಾರಿಗಳು ಉಳಿದಿಲ್ಲ ಎಂದಿದ್ದಾರೆ. ಒಂದು ವೇಳೆ ಹಣಕಾಸು ಸಂಸ್ಥೆಗಳ ಷರತ್ತುಗಳ ವಿರುದ್ಧ ಜನಾದೇಶ ಬಂದರೆ ಗ್ರೀಕ್ ಯುರೋ ಒಕ್ಕೂಟದಿಂದ ಹೊರಹೋಗಲಿದೆ. ಇದರಿಂದ ಇಡೀ ಒಕ್ಕೂಟ ಬಿಕ್ಕಟ್ಟಿಗೆ ಸಿಲುಕಲಿದೆ ಎಂದು ಯುರೋ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement