ಹೈಟೆಕ್ ಕಿಚನ್ ನಲ್ಲಿ ರೋಬೋ ನಳಪಾಕ!

ನೀವು ಚಾಲಕನಿಲ್ಲದ ಕಾರಿನ ಬಗ್ಗೆ ಕೇಳಿರಬಹುದು, ಆದರೆ ಅಡುಗೆಯವನಿಲ್ಲದ ಅಡುಗೆಮನೆ ಬಗ್ಗೆ ಕೇಳಿದ್ದೀರಾ?...
ಅಮೆರಿಕದಲ್ಲಿನ ರೋಬೋಟ್ ರೆಸ್ಟೋರೆಂಟ್
ಅಮೆರಿಕದಲ್ಲಿನ ರೋಬೋಟ್ ರೆಸ್ಟೋರೆಂಟ್

ವಾಷಿಂಗ್ಟನ್: ನೀವು ಚಾಲಕನಿಲ್ಲದ ಕಾರಿನ ಬಗ್ಗೆ ಕೇಳಿರಬಹುದು, ಆದರೆ ಅಡುಗೆಯವನಿಲ್ಲದ ಅಡುಗೆಮನೆ ಬಗ್ಗೆ ಕೇಳಿದ್ದೀರಾ?

ಅಡುಗೆಮನೆಯಲ್ಲಿರುವ ಅತ್ಯಾಧುನಿಕ ಹೈಟೆಕ್ ವಸ್ತುವೆಂದರೆ ಮೈಕ್ರೋವೇವ್ ಓವನ್ ಎಂದು ಯಾರು ತಿಳಿದುಕೊಂಡಿದ್ದಾರೋ ಅವರಿಗೆ ರೋಬೋ ಬಾಣಸಿಗನ ಪರಿಚಯ ಇನ್ನೂ ಆಗಿಲ್ಲವೆಂದೇ ಅರ್ಥ.

ಹೌದು, ಈಗ ಆಹಾರವೂ ಡಿಜಿಟಲೀಕರಣಗೊಳ್ಳುತ್ತಿದೆ. ನಿಮ್ಮ ಅಡುಗೆಪುಸ್ತಕ ನೋಡಿ ಶಾಪಿಂಗ್ ಪಟ್ಟಿ ಸಿದ್ಧಪಡಿಸುವ ಆ್ಯಪ್ ಗಳಿಂದ ಹಿಡಿದು ಬಿಸಿ ಬಿಸಿಯಾದ ಅಡುಗೆ ಮಾಡಿ ಬಡಿಸುವ ರೋಬೋಟ್ ಗಳವರೆಗೆ ನಮ್ಮ ತಂತ್ರಜ್ಞಾನದ ಪಯಣ ಮುಂದುವರಿದಿದೆ. ಈಗ ಅಮೆರಿಕದಲ್ಲಿ ಬಾಣಸಿಗನಿಲ್ಲದ ಅಡುಗೆಮನೆಗಳಿಗೇ ಹೆಚ್ಚು ಡಿಮ್ಯಾಂಡ್, ಅಡುಗೆಮನೆಗಳಲ್ಲಿ ರೋಬೋ ಬಾಣಸಿಗನದ್ದೇ ಕಾರುಬಾರು. ಅಡುಗೆಗೆ ಅಗತ್ಯವಿರುವ ವಸ್ತುಗಳನ್ನು ರೆಡಿಯಾಗಿಟ್ಟರೆ ಸಾಕು, ಕೆಲವೇ ನಿಮಿಷಗಳಲ್ಲಿ ನಳಪಾಕ ಸಿದ್ಧಪಡಿಸುತ್ತದೆ ಈ ರೋಬೋ ಶೆಫ್.

ರೋಬೋ ಬಾಣಸಿಗ ಏನು ಮಾಡುತ್ತಾನೆ?:
ಮೊದಲಿಗೆ ಬಾಣಸಿಗನ ಕ್ರಿಯೆಗಳನ್ನು ರೋಬೋಟ್ ರೆಕಾರ್ಡ್ ಮಾಡಿಕೊಳ್ಳುತ್ತದೆ. ನಾವು ಮೊದಲೇ ನಿಗದಿಪಡಿಸಿದ ಸ್ಥಳಗಳಲ್ಲಿ ಆಹಾರ ತಯಾರಿಸಲು ಬೇಕಾದ ಎಲ್ಲ ವಸ್ತುಗಳನ್ನು ಸರಿಯಾಗಿ ರೋಬೋಟ್ ಕೈಗೆ ಸಿಗುವಂತೆ ಇಡಬೇಕು. ಅಷ್ಟಾದರೆ ಸಾಕು, ರೋಬೋ ಬಾಣಸಿಗನು ಯಾರ ಸಹಾಯವನ್ನೂ ಪಡೆಯದೇ ರುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತದೆ.

ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಇನ್ನಷ್ಟು ಸ್ಮಾರ್ಟ್ ಆಗಬಹುದು. ಮನೆಯವರ ರುಚಿಯನ್ನು ಅರಿತು ಅದಕ್ಕೆ ತಕ್ಕಂತೆಯೇ ಆಹಾರವನ್ನು ರೋಬೋ ಸಿದ್ಧಪಡಿಸಲೂಬಹುದು ಎಂದು ದಿ ಇಂಡೆಪೆಂಡೆಂಟ್ ವರದಿ ಮಾಡಿದೆ.

ಇದೇ ದೊಡ್ಡ ಉದ್ದಿಮೆ: ಅಮೆರಿಕದಲ್ಲೀಗ ಇದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಬ್ಲೂ ಆ್ಯಪ್ರಾನ್, ಡೋರ್ ಡ್ಯಾಷ್, ಹೆಲೋಫ್ರೆಷ್, ಚೌನೌನಂತಹ ಸ್ಟಾರ್ಟ್ ಅಪ್ ಗಳು ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿವೆ. 2014ರಲ್ಲಿ ಅಮೆರಿಕ ಮೂಲದ ಫುಡ್-ಟೆಕ್ ಕಂಪೆನಿಗಳು 6 ಸಾವಿರದ 384 ಕೋಟಿಗಿಂತಲೂ ಹೆಚ್ಚು ಹೂಡಿಕೆ ಮಾಡಿವೆ.

ಭಾರತಕ್ಕೂ ಪ್ರವೇಶ:
 
ಇಂತಹ ಸ್ಟಾರ್ಟ್ ಆಪ್ ಗಳು ಈಗ ಭಾರತ, ಯುರೋಪ್ ಮತ್ತು ಚೀನಾದತ್ತ ಕಣ್ಣು ನೆಟ್ಟಿವೆ. ಇಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭವಾಗಬಹುದು ಎನ್ನುವುದು ಉದ್ಯಮಿಗಳ ಯೋಚನೆ.

ಊಟಕ್ಕೂ ಆ್ಯಪ್
ರೋಬೋ ಅಷ್ಟೇ ಅಲ್ಲ, ಆಹಾರವನ್ನು ಮನೆಗೆ ಕಳುಹಿಸುವ ಆ್ಯಪ್ ಕೂಡ ಅಮೆರಿಕದಲ್ಲಿ ಚಾಲ್ತಿಯಲ್ಲಿದೆ. ತಾಜಾ ಆಹಾರವನ್ನು ಮೊಬೈಲ್ ಆ್ಯಪ್ ಮೂಲಕ ಆರ್ಡರ್ ಮಾಡಿದರೆ ಸಾಕು, ಕೇವಲ 30 ನಿಮಿಷಗಳಲ್ಲಿ ಅದು ನಿಮ್ಮ ಬಾಗಿಲಿಗೆ ತಲುಪಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com