
ಲಂಡನ್: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಫಿಫಾ ಮುಖ್ಯಸ್ಥ ಸೆಪ್ ಬ್ಲಾಟರ್ ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಲೀನ್ ಚಿಟ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಬ್ಲಾಟರ್ ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ಹೊಗಳಿದ್ದಾರೆ.
ಬ್ಲಾಟರ್ ಅಂತಾರಾಷ್ಟ್ರೀಯ ಫುಟ್ ಬಾಲ್ ಆಡಳಿತ ಮಂಡಳಿಗೆ ನೀಡಿರುವ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಪುಟಿನ್ ಹೇಳಿದ್ದಾರೆ.ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಮುಖ್ಯಸ್ಥರನ್ನು ಗುರುತಿಸಬೇಕಾಗಿದೆ. ಬ್ಲಾಟರ್ ನಂತಹ ವ್ಯಕ್ತಿಗಳು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ಪುಟಿನ್ ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ.
ಬ್ಲಾಟರ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾನು ವಯಕ್ತಿಕವಾಗಿ ನಂಬುವುದಿಲ್ಲ ಎಂದು ಪುಟಿನ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. 2018 ರಿಂದ 2022 ವರೆಗೆ ನಡೆಯಲಿರುವ ಫುಟ್ ಬಾಲ್ ವಿಶ್ವಕಪ್ ನಲ್ಲಿ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಫಿಫಾದ ಮಾಜಿ ಅಧಿಕಾರಿ ಚಕ್ ಬ್ಲೇಜರ್ ಆರೋಪಿಸಿದ್ದರು. ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಫಿಫಾ ಅಧ್ಯಕ್ಷ ಸ್ಥಾನಕ್ಕೆ ಬ್ಲಾಟರ್ ರಾಜೀನಾಮೆ ನೀಡಿದ್ದರು. ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಫಿಫಾ ಕಾಂಗ್ರೆಸ್ ಅಧಿವೇಶನದಲ್ಲಿ ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೂ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲು ಬ್ಲಾಟರ್ ಯತ್ನಿಸುತ್ತಿದ್ದಾರೆ.
Advertisement