ದುರಂತ ಸಾವಿಗೀಡಾದ ಬೃಹತ್ ಸಿಂಹ "ಸೆಸಿಲ್"
ದುರಂತ ಸಾವಿಗೀಡಾದ ಬೃಹತ್ ಸಿಂಹ "ಸೆಸಿಲ್"

ಅಮೆರಿಕ ವೈದ್ಯನ ಬೇಟೆ ಹುಚ್ಚಿಗೆ ಬಲಿಯಾಯ್ತು "ಸೆಸಿಲ್"

ಜಿಂಬಾಬ್ವೆ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿದ್ದ ಸೆಸಿಲ್ ಎಂಬ ಸಿಂಹ ಇದೀಗ ಅಮೆರಿಕ ಮೂಲದ ದಂತ ವೈದ್ಯನ ಬೇಟೆಯ ಹುಚ್ಚಿಗೆ ಬಲಿಯಾಗಿದೆ...

ಹರಾರೆ: ಜಿಂಬಾಬ್ವೆ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿದ್ದ ಸೆಸಿಲ್ ಎಂಬ ಸಿಂಹ ಇದೀಗ ಅಮೆರಿಕ ಮೂಲದ ದಂತ ವೈದ್ಯನ ಬೇಟೆಯ ಹುಚ್ಚಿಗೆ ಬಲಿಯಾಗಿದೆ.

13 ವರ್ಷ ಪ್ರಾಯದ ಸೆಸಿಲ್ ಜಿಂಬಾಬ್ವೆ ಪ್ರವಾಸೋದ್ಯಮದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಹ್ವಾಂಗೆ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆಯಾಗಿದ್ದ ಸೆಸಿಲ್ ತನ್ನ ದೇಹದ ಗಾತ್ರ, ತೂಕ ಮತ್ತು ವಿಶಾಲ ಆಕಾರದಿಂದಲೇ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಆದರೆ ಇದೀಗ ಈ ಬೃಹತ್ ಸಿಂಹ ಬೇಟೆಗಾರರ ವಿಕೃತ ಮನಸ್ಸಿಗೆ ಬಲಿಯಾಗಿದೆ. ಅಮೆರಿಕದಲ್ಲಿ ಪ್ರಮುಖ ದಂತ ವೈದ್ಯನಾಗಿರುವ ವಾಲ್ಟರ್ ಜೇಮ್ಸ್ ಪಾಮರ್ ಎಂಬಾತ ಈ ಬೃಹತ್ ಗಂಡು ಸಿಂಹವನ್ನು ಹೀನಾಯವಾಗಿ ಬೇಟೆಯಾಡಿದ್ದಾನೆ.

ಈ ಹಿಂದೆ ಪ್ರವಾಸಕ್ಕೆಂದು ಜಿಂಬಾಬ್ವೆಗೆ ಭೇಟಿ ನೀಡಿದ್ದ ಪಾಮರ್ ತನ್ನ ಸ್ಥಳೀಯ ಬೇಟೆಗಾರನೊಂದಿಗೆ ಸೇರಿ ಹ್ವಾಂಗೆ ರಾಷ್ಟ್ರೀಯ ಉಧ್ಯಾನಕ್ಕೆ ಬೇಟೆಗೆ ತೆರಳಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಸೆಸಿಲ್ ಸಿಂಹವನ್ನು ತನ್ನ ಬಿಲ್ಲು ಬಾಣದ ಮೂಲಕವಾಗಿ ಕೊಂದು ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನದ ಮುಖ್ಯಸ್ಥರು ಹೇಳುವಂತೆ, ವಿಶ್ವ ವಿವಿಧ ದೇಶಗಳಿಂದ ಸಾಕಷ್ಟು ಮಂದಿ ಜಿಂಬಾಬ್ವೆ ಪ್ರವಾಸೋದ್ಯಮದ ಆಕರ್ಷಣೆಯಾಗಿರುವ ಸಫಾರಿ ನೋಡಲು ಆಗಮಿಸುತ್ತಿದ್ದರು. ಕಳೆದ ಒಂದು ವರ್ಷವೊಂದರಲ್ಲಿಯೇ ಹ್ವಾಂಗೆ ರಾಷ್ಟ್ರೀಯ ಉದ್ಯಾನದಲ್ಲಿರುವ ಬೃಹತ್ ಸಿಂಹ ಸೆಸಿಲ್ ನನ್ನು ನೋಡಲು ಸುಮಾರು 50 ಸಾವಿರ ಮಂದಿ ಭೇಟಿ ನೀಡಿದ್ದರು. ಇದೀಗ ರಾಷ್ಟ್ರೀಯ ಉದ್ಯಾನದ ಆಕರ್ಷಣೆಯಾಗಿದ್ದ ಸೆಸಿಲ್ ಸಿಂಹ ದುರಂತ ಸಾವಿಗೀಡಾಗಿದೆ. ಸೆಸಿಲ್ ಅರಣ್ಯದಲ್ಲಿಯೇ ಇದ್ದರೂ ಆತ ಬಹುತೇಕ ಪಳಗಿದ ಸಿಂಹಗಳಂತೆ ವರ್ತಿಸುತ್ತಿದ್ದ. ಪ್ರವಾಸಿಗರಿಗೆ ಯಾವುದೇ ರೀತಿಯಿಂದಲೂ ಹಾನಿ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೇಗಾಯ್ತು ದುರಂತ..?
ಅಮೆರಿಕದ ದಂತ ವೈದ್ಯ ವಾಲ್ಟರ್ ಜೇಮ್ಸ್ ಪಾಮರ್, ಜಿಂಬಾಬ್ವೆಯಲ್ಲಿರುವ ವೃತ್ತಿಪರ ಭೇಟೆಗಾರ ಬ್ರಾಂಕ್ ಹಾರ್ಸ್ಟ್ ಎಂಬಾತ ಜೊತೆಗೂಡಿ ರಾತ್ರಿ ವೇಳೆ ಭೇಟೆಗೆ ತೆರಳಿದ್ದಾರೆ. ಸತ್ತ ಸಾಧು ಪ್ರಾಣಿಯೊಂದನ್ನು ತಮ್ಮ ವಾಹನದ ಹಿಂಬದಿಗೆ ಕಟ್ಟಿ ಸಿಂಹವನ್ನು ಸೆಳೆಯಲು ಯತ್ನಿಸಿದ್ದಾರೆ. ಈ ವೇಳೆ ಮಾಂಸವನ್ನು ಕಂಡ ಸೆಸಿಲ್ ಸಿಂಹ ಮಾಂಸಕ್ಕಾಗಿ ವಾಹನದ ಹಿಂದೆ ಓಡಿ ಬಂದಾಗ ಬಿಲ್ಲು ಮತ್ತು ಬಾಣಗಳಿಂದ ಸಿಂಹಕ್ಕೆ ಹಾನಿ ಮಾಡಿದ್ದಾರೆ. ಕೂಡಲೇ ಸಿಂಹ ಕೆಳಗೆ ಬಿದ್ದಿದೆಯಾದರೂ ಅದು ಸಾವನ್ನಪ್ಪಿರಲಿಲ್ಲ. ಆದರೆ ಪಾಮರ್ ಮತ್ತು ಬೇಟೆಗಾರ ಬ್ರಾಂಕ್ ಹಾರ್ಸ್ಟ್ ತಮ್ಮ ಬಳಿಯಿದ್ದ ಗನ್ ತೆಗೆದು ಸಿಂಹಕ್ಕೆ ಗುಂಡಿಕ್ಕಿದ್ದಾರೆ. ಗುಂಡೇಟು ಮತ್ತು ಬಾಣದ ಏಟಿನಿಂದ ಸುಮಾರು 40 ತಾಸುಗಳ ಕಾಲ ಸಾವು-ಬದುಕಿನ ನಡುವೆ ಯಮ-ಯಾತನೆ ಅನುಭವಿಸಿ ಸಿಂಹ ಸಾವನ್ನಪ್ಪಿದೆ. ಪಾಮರ್ ಮತ್ತು ಆತನ ಸ್ನೇಹಿತ ಸಿಂಹದ ತಲೆಯನ್ನು ಕೂಡ ಕತ್ತರಿಸಿದ್ದರು ಎಂದು ಜಿಂಬಾಬ್ವೆಯ ವನ್ಯಮೃಗ ಸಂರಕ್ಷಣಾ ಕಾರ್ಯಪಡೆಯ ಸಿಬ್ಬಂದಿಗಳು ಹೇಳಿದ್ದಾರೆ.

ಸಿಬ್ಬಂದಿಗೆ ಭಾರಿ ಲಂಚ ನೀಡಿ ಭೇಟೆಯಾಡಿದ ವೈದ್ಯ
ಇನ್ನು ಈ ಬೇಟೆಗೆ ಪಾಮರ್ ಬರೊಬ್ಬರಿ 50 ಸಾವಿರ ಡಾಲರ್ ಹಣವನ್ನು ಸ್ಥಳೀಯ ರಾಷ್ಟ್ರೀಯ ಉದ್ಯಾನವನ ಸಿಬ್ಬಂದಿಗಳಿಗೆ ಲಂಚವಾಗಿ ನೀಡಿದ್ದ ಎಂದು ತಿಳಿದುಬಂದಿದೆ. ಬಳಿಕವಷ್ಟೇ ಆತ ಸಿಂಹವನ್ನು ಬೇಟೆಯಾಡಿದ್ದಾನೆ. ತನ್ನ ವಾಹನಕ್ಕೆ ಪ್ರಾಣಿಯೊಂದನ್ನು ಕಟ್ಟಿ ದೂರದಲ್ಲಿ ಬೇಟೆಗಾರರು ಅಡಗಿ ಕುಳಿತ್ತಿದ್ದಾರೆ. ಈ ವೇಳೆ ಮಾಂಸದ ಆಸೆಗೆ ಸಿಂಹವು ಉದ್ಯಾನದ ಕಾಂಪೌಂಡ್ ಹಾರಿ ಹೊರಗೆ ಬಂದು ಮಾಂಸವನ್ನು ತಿನ್ನಲು ಯತ್ನಿಸಿದೆ. ಆಗ ಸಿಂಹವನ್ನು ಗುರಿಯಾಗಿಸಿಕೊಂಡು ಪಾಮರ್ ತನ್ನ ಬಾಣ ಹೂಡಿದ್ದಾನೆ. ಬಾಣಕ್ಕೆ ತುತ್ತಾದ ಸೆಸಿಲ್ ಸಿಂಹ ಅದರಿಂದ ಸಾಯಲಿಲ್ಲ. ಬಳಿಕ ಮತ್ತೆ ತನ್ನ ಗನ್ ತೆಗೆದ ಪಾಮರ್ ಅದನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾನೆ.

ಜಿಂಬಾಬ್ವೆ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾದ ಸೆಸಿಲ್ ಬೇಟೆ
ಹ್ವಾಂಗೆ ರಾಷ್ಟ್ರೀಯ ಉದ್ಯಾನದ ಆಕರ್ಷಣೆಯಾಗಿದ್ದ ಬೃಹತ್ ಸಿಂಹ ಸೆಸಿಲ್ ದುರಂತ ಸಾವಿನಿಂದಾಗಿ ಅಲ್ಲಿಗೆ ಭೇಟಿ ನೀಡಿರುವ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವನ್ಯಮೃಗ ಸಂರಕ್ಷಣಾ ಕಾಯ್ದೆಯನ್ನು ಕಠಿಣಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಬೇಟೆಗಾರರನ್ನು ಕಠಿಣವಾಗಿ ಶಿಕ್ಷಿಸುವಂತೆ ಆಗ್ರಹಿಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com