
ನ್ಯೂಯಾರ್ಕ್: ಕಳೆದ ವಾರ ಈಜಿಪ್ಟ್ ನಲ್ಲಿ ಸಂಭವಿಸಿದ್ದ ರಷ್ಯಾ ವಿಮಾನ ದುರಂತಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರು ವಿಮಾನದಲ್ಲಿರಿಸಿದ್ದ ಬಾಂಬ್ ಕಾರಣ ಎಂದು ಅಮೆರಿಕ ಮತ್ತು ಯುರೋಪ್ ಭದ್ರತಾಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಇರಾಕ್ ಮತ್ತು ಸಿರಿಯಾವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಐಎಸ್ ಸಂಘಟನೆಯ ಉಗ್ರರು ಈಜಿಪ್ಟ್ ಮೇಲೆ ತಮ್ಮ ಹಿಡಿತ ಸಾಧಿಸಲು ಯತ್ನ ನಡೆಸುತ್ತಿದ್ದು, ವಿಮಾನ ಪತನಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ವಿಮಾನದಲ್ಲಿ ಸ್ಪೋಟಕ ಸಾಮಾಗ್ರಿಗಳ ಅಂಶಗಳಿರುವುದಾಗಿ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿತ್ತು. ಇದರಂತೆ ಅಮೆರಿಕ ತನಿಖಾ ತಂಡವು ವಿಮಾನದ ಇಂಧನ ಟ್ಯಾಂಕಿನಲ್ಲಿ ಉಂಟಾದ ಸ್ಪೋಟ ಅಥವಾ ಬಾಂಬ್ ಸ್ಪೋಟದಿಂದಾಗಿ ದುರಂತ ಸಂಭವಿಸಿರಬಹುದು ಎಂದು ಹೇಳಿತ್ತು.
ಇದೀಗ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಬಾಂಬ್ ನ್ನು ವಿಮಾನದಲ್ಲಿರಿಸಿರುವುದಾಗಿ ಹೇಳಲಾಗುತ್ತಿದ್ದು, ವಿಮಾನ ಪತನವಾದ ಸ್ಥಳದಲ್ಲಿ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಉಗ್ರರು ಬಾಂಬ್ ನ್ನು ವಿಮಾನದಲ್ಲಿ ಎಲ್ಲಿ ಇರಿಸಿದ್ದರು ಎಂಬುದು ಈ ವರೆಗೂ ಖಚಿತವಾಗಿಲ್ಲ.
ರಷ್ಯಾ ಏರ್ ಲೈನ್ಸ್ ಎ321 ವಿಮಾನವು ಸಿಬ್ಬಂದಿ ಸೇರಿ 224 ಪ್ರಯಾಣಿಕರನ್ನು ಈಜಿಪ್ಟ್ ನಿಂದ ರಷ್ಯಾಗೆ ತೆರಳಲು ಸಿದ್ಧವಾಗಿತ್ತು. ಈಜಿಪ್ಟ್ ನಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ಕಂಟ್ರೋಲ್ ನ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ವಿಮಾನವು ಈಜಿಪ್ಟ್ ನ ಸಿಯಾನ್ ಬಳಿ ಅಪಘಾತಕ್ಕೀಡಾಗಿತ್ತು. ದುರಂತದಲ್ಲಿ 224 ಜನರು ಮೃತಪಟ್ಟಿದ್ದರು.
Advertisement