ಶೀಘ್ರದಲ್ಲೇ 54 ಭಾಗಗಳಾಗಿ ಭಾರತ ಛಿದ್ರ: ಜಾವೆದ್ ಮಿಯಾಂದಾದ್

ಶೀಘ್ರದಲ್ಲಿಯೇ ಭಾರತ ದೇಶ 54 ಭಾಗಗಳಾಗಿ ಛಿದ್ರವಾಗಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿ ಜಾಲೆದ್ ಮಿಯಾಂದಾದ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ (ಸಂಗ್ರಹ ಚಿತ್ರ)
ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಶೀಘ್ರದಲ್ಲಿಯೇ ಭಾರತ ದೇಶ 54 ಭಾಗಗಳಾಗಿ ಛಿದ್ರವಾಗಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿ ಜಾವೆದ್  ಮಿಯಾಂದಾದ್ ಹೇಳಿದ್ದಾರೆ.

ಪಾಕಿಸ್ತಾನದ ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಭಾರತದ ಬಗ್ಗೆ ಮಾತನಾಡಿದ ಮಿಯಾಂದಾದ್, ಧರ್ಮ ಮತ್ತು ಭಾಷೆಗಳ ಆಧಾರದಲ್ಲಿ ಭಾರತ ದೇಶ ಶೀಘ್ರ 54 ಸಣ್ಣ ದೇಶಗಳಾಗಿ ವಿಭಜನೆಯಾಗಲಿದೆ ಎನ್ನುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಅಲ್ಲದೆ ಈ ವೇಳೆ ಭಾರತವನ್ನು ಎರಡನೇ ಜಾಗತಿಕ ಯುದ್ಧ ಸಂದರ್ಭದ ಜರ್ಮನಿಗೆ ಹೋಲಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಕೆ ಮಾಡಿದ್ದಾರೆ.

ಬಾಲಿವುಡ್ ನಟ ಶಾರುಖ್ ವಿಚಾರದಲ್ಲಿ ಇತ್ತೀಚೆಗೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಿಯಾಂದಾದ್, ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಲ್ಪ ಸಂಖ್ಯಾತರನ್ನು ಹೀನಾಯವಾಗಿ  ನಡೆಸಿಕೊಳ್ಳಲಾಗುತ್ತಿದೆ. ಶಾರುಖ್ ಮತ್ತು ಸಲ್ಮಾನ್ ಖಾನ್‌ರಿಂದಾಗಿಯೇ ಭಾರತ ದೇಶ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ, ಅವರನ್ನು ನಡೆಸಿಕೊಳ್ಳುವ ರೀತಿ ಮಾತ್ರ ಸರಿಯಿಲ್ಲ ಎಂದು ಮಿಯಾಂದಾದ್ ಹೇಳಿದ್ದಾರೆ.

ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮಿಯಾಂದಾದ್ ಸುದ್ದಿಯಾಗುತ್ತಿದ್ದು, ಇತ್ತೀಚೆಗೆ ಇಂಡೋ-ಪಾಕ್ ಕ್ರಿಕೆಟ್ ಸರಣಿ ಕುರಿತಂತೆಯೂ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ವಿರುದ್ಧ ಭಾರತ ಸೋಲುವ ಭೀತಿಯಿಂದಲೇ ಬಿಸಿಸಿಐ ಸರಣಿ ಆಯೋಜನೆ ಮಾಡುತ್ತಿಲ್ಲ ಎಂದು  ಆರೋಪಿಸಿದ್ದರು.

ಇನ್ನು ದೇಶದ ವಿಚಾರಕ್ಕೆ ಬರುವುದಾದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯೇ ನೂರಾರು ಸಮಸ್ಯೆಗಳಿದ್ದು, ಅಲ್ಲಿನ ಪಾಕಿಗಳೇ ತಮ್ಮನ್ನು ಭಾರತಕ್ಕೆ ಸೇರ್ಪಡೆ ಮಾಡುವಂತೆಯೂ ಮತ್ತು ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಮಿಯಾಂದಾದ್ ಭಾರತ ದೇಶದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ತಮ್ಮ ದೇಶದಲ್ಲೇ ಎದ್ದಿರುವ  ಅಸಮಾನತೆ ಕುರಿತು ಚಿಂತಿಸಬೇಕಿದೆ ಎಂದು ಭಾರತದ ಕೆಲ ವಿಚಾರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂನ ಪುತ್ರಿಯನ್ನು ಜಾವೆದ್ ಮಿಯಾಂದಾದ್ ಪುತ್ರ 2005ರಲ್ಲಿ ವಿವಾಹವಾಗಿದ್ದನು. ದಶಕಗಳಿಂದಲೂ ಭಾರತ ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಆರೋಪಿಸುತ್ತಾ ಬಂದಿದ್ದರೂ ಪಾಕಿಸ್ತಾನ ಮಾತ್ರ ದಾವೂದ್ ತನ್ನ ನೆಲದಲ್ಲಿ ಇಲ್ಲ ಎಂದು ವಾದಿಸುತ್ತಾ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com