
ನೇಪಿಡಾ: ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಯಲ್ಲಿ ಹೋರಟಗಾರ್ತಿ ಆಂಗ್ ಸಾನ್ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿ ಐತಿಹಾಸಿಕ ಗೆಲುವು ಸಾಧಿಸಿದೆ.
1990ರಿಂದಲೂ ಸೂಕಿ ನೇತತ್ವದ ಎನ್ ಎಲ್ ಡಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಇದೇ ಮೊದಲ ಬಾರಿದೆ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಇಟ್ಟಿದೆ. ಎನ್ ಎಲ್ ಡಿ ಪಕ್ಷ ಶೇ.80ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆಯತ್ತ ಸ್ಪಷ್ಟ ಹೆಜ್ಜೆಗಳನ್ನಿಟ್ಟಿದೆ. ಈವರೆಗೆ ಪ್ರಕಟಗೊಂಡಿರುವ ಫಲಿತಾಂಶದ ಪ್ರಕಾರ, ಸಂಸತ್ತಿನ ಉಭಯ ಸದನಗಳ 664 ಸ್ಥಾನಗಳ ಪೈಕಿ ಕೆಳ ಮನೆಯ 262 ಸ್ಥಾನಗಳಲ್ಲಿ ಮತ್ತು ಮೇಲ್ಮನೆಯ 83 ಸ್ಥಾನಗಳಲ್ಲಿ ಎನ್‌ಎಲ್‌ಡಿ ಜಯಗಳಿಸಿದೆ. ಇದರೊಂದಿಗೆ ಎನ್‌ಎಲ್‌ಡಿ ಒಟ್ಟು 348 ಸ್ಥಾನ ಗಳಿಸಿದಂತಾಗಿದೆ. ಆ ಮೂಲಕ ಎನ್ ಎಲ್ ಡಿ ಪಕ್ಷ ಸರಳ ಬಹುಮತಗಳಿಸಿದಂತಾಗಿದೆ.
ಇನ್ನೂ ಒಂದಷ್ಟು ಕ್ಷೇತ್ರಗಳ ಫಲಿತಾಂಶ ಬಾಕಿ ಇದ್ದು, ಎನ್ ಎಲ್ ಡಿ ಮತ್ತಷ್ಟು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಚುನಾವಣೆಯಲ್ಲಿನ ಜಯಕ್ಕಾಗಿ ಸೂಕಿ ಅವರನ್ನು ಅಭಿನಂದಿಸಿರುವ ಮ್ಯಾನ್ಮಾರ್ ಅಧ್ಯಕ್ಷ ಥೇನ್ ಸೇನ್ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿಸಿದ್ದಾರೆ. ಸೇನಾ ಮುಖ್ಯಸ್ಥರೂ ಸೂಕಿ ಅವರನ್ನು ಅಭಿನಂದಿಸಿದ್ದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಮೊದಲ ಹಂತದ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಸೂಕಿ ಭರ್ಜರಿ ಬಹುಮತದೊಂದಿಗೆ ಜಯಗಳಿಸಿದ್ದರು. ಇದರ ಬೆನ್ನಲ್ಲೇ ಸೂಕಿ ಅವರಿಗೆ ಅಧ್ಯಕ್ಷರ ಪರವಾಗಿ ಮಾಹಿತಿ ಸಚಿವ ಯೆ ಟ ಟ್ ಶುಭಾಶಯ ಸಂದೇಶ ರವಾನಿಸಿದ್ದರು.
ಸೂಕಿಗೆ ಪ್ರಧಾನಿ ಮೋದಿ ಶುಭಾಶಯ
ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ನೇತೃತ್ವದ ಎನ್ಎಲ್ ಡಿ ಪಕ್ಷದ ಮುಖ್ಯಸ್ಥೆ ಆಂಗ್ ಸಾನ್ ಸೂಕಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಅಲ್ಲದೆ ಭಾರತಕ್ಕೆ ಭೇಟಿ ನೀಡುವಂತೆಯೂ ಮೋದಿ ಆಹ್ವಾನಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡ ಸೂಕಿ ಅವರನ್ನು ಅಭಿನಂದಿಸಿದ್ದಾರೆ.
Advertisement