ಸ್ಯಾಕ್ರಮೆಂಟೋ: ನಾವು ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಎಂಥೆಂಥ ಪ್ರಯಾಣಿಕರನ್ನು ಕಾಣಬಹುದು? ಟಿಕೆಟ್ ಇಲ್ಲದೆ ಪ್ರಯಾಣಿಸುವವ, ಕಂಡಕ್ಟರ್ ಬರುವ ಹೊತ್ತಿಗೆ ಸರಿಯಾಗಿ ದಿಢೀರ್ ನಿದ್ದೆಗೆ ಶರಣಾಗಿಗೊರೆಯುವವ, ಅಪರಿಚಿತರಾದರೂ ಪಕ್ಕದವರೊಂದಿಗೆ ಹರಟೆ ಕೊಚ್ಚುವವ, ಫೋನ್ ನಲ್ಲೇ ಊರಿಂದಾಚೆಗೆ ಕೇಳುವಂತೆ ಮಾತಾಡುವವ, ಕಳ್ಳೇಕಾಯಿ ತಿಂದು ಅಲ್ಲೇ ಸಿಪ್ಪೆ ಎಸೆವವ, ಗುಟ್ಕಾ ಜಗಿದು ಅಲ್ಲೇ ಉಗಿಯುವವ.. ಅಬ್ಬಾ... ಇಲ್ಲಿ ಏನು ಮಾಡಿದರೂ ಕೇಳೋವ್ರಿಲ್ಲ! ಆದರೆ ಅಮೆರಿಕದ ಸ್ಯಾಕ್ರಮೆಂಟೋ ನಗರದಲ್ಲಿ ನೀವು ಬಸ್ ಹತ್ತೋಕೆ ಮೊದಲು ನಿಮ್ಮೆಲ್ಲ ಚಾಳಿಗಳನ್ನು ಬದಿಗಿಡಬೇಕು. ಇಲ್ಲವಾದರೆ ಶಿಕ್ಷೆ ಅವಮಾನ ಕಟ್ಟಿಟ್ಟ ಬುತ್ತಿ. ಹೌದು. ಅಲ್ಲಿ ಬಸ್ ಮತ್ತು ಸಿಟಿ ರೈಲು ಪ್ರಯಾಣಕ್ಕೆ ಹಲವು ಕಟ್ಟುನಿಟ್ಟು ನಿಯಮಗಳಿವೆ. ಇದೀಗ ಸರ್ಕಾರ ಇನ್ನೂ ಹೊಸ ನಿಬಂಧನೆ ವಿಧಿಸಿದೆ. ಬಸ್ನಲ್ಲಿ ನಿದ್ದೆ ಮಾಡುವಂತಿಲ್ಲ. ಜೋರಾಗಿ ಮಾತಾ ಡುವಂತಿಲ್ಲ. ಫೋನಲ್ಲಿ ಜೋರು ಮಾತಾಡೋದು, ದೊಡ್ಡದನಿಯಲ್ಲಿ ಹಾಡು ಪ್ಲೇ ಮಾಡೋದು ಇಲ್ಲವೇ ಇಲ್ಲ. ಸ್ತ್ರೀ-ಪುರುಷರಿಬ್ಬರೂ ಸೊಂಟಭಾಗದ ಮೇಲೆ ಮತ್ತು ಕೆಳಗೆ ಸಂಪೂರ್ಣ ವಸ್ತ್ರದಿಂದ ಮುಚ್ಚಿ ಕೊಂಡಿರಬೇಕು. ಪಾಲಿಸದಿದ್ದಲ್ಲಿ ವಾಹನ ದಿಂದ ಅನಾಮತ್ತಾಗಿ ಕೆಳಗಿಳಿಸಲಾಗುವುದು. ಈ ನಿಯಮ ಕಳೆದ ಸೋಮವಾರದಿಂದ ಜಾರಿಗೆ ಬಂದಿದೆ. ಮದ್ಯಪಾನದಿಂದ ನಾರುತ್ತಿರುವವರು ಹಾಗೂ ಅತಿಘಾಟಿನ ಸುಗಂಧದ್ರವ್ಯ ಪೂಸಿಕೊಂಡಿರುವವರನ್ನೂ ಸಿಟಿಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸದಂತೆ ನಿಷೇಧಿಸುವ ಪ್ರಸ್ತಾವ ಇತ್ತಾದರೂ ಸದ್ಯಕ್ಕೆ ಕೈಬಿಡಲಾಗಿದೆ. ಈ ನಿಯಮಾವಳಿಗಳನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಬಸ್ ಮತ್ತು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿರುವ ಮಧ್ಯಮ ವರ್ಗದ ವರಿಗೆ ಇಂಥ ರೂಲ್ಸ್ ಗಳಿಂದ ತಾಪತ್ರಯವಾಗಲಿದೆ ಎನ್ನುವ ವಿರೋಧ ಜನರಿಂದ ವ್ಯಕ್ತವಾಗಿದೆ.