ಟರ್ಕಿಯಲ್ಲಿ ಇಸಿಸ್ ಉಗ್ರನಿಂದ ಆತ್ಮಹತ್ಯಾ ದಾಳಿ

ಪ್ಯಾರಿಸ್ ಮೇಲಿನ ಉಗ್ರ ದಾಳಿ ಹಸಿರಾಗಿರುವಂತೆಯೇ ಟರ್ಕಿಯಲ್ಲಿ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಸಿಸ್ ಉಗ್ರನೊಬ್ಬ ಆತ್ಮಾಹುತಿ ಬಾಂಬ್ ಮೂಲಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ...
ಟರ್ಕಿಯಲ್ಲಿ ಇಸಿಸ್ ದಾಳಿ (ಸಂಗ್ರಹ ಚಿತ್ರ)
ಟರ್ಕಿಯಲ್ಲಿ ಇಸಿಸ್ ದಾಳಿ (ಸಂಗ್ರಹ ಚಿತ್ರ)

ಅಂಕಾರ: ಪ್ಯಾರಿಸ್ ಮೇಲಿನ ಉಗ್ರ ದಾಳಿ ಹಸಿರಾಗಿರುವಂತೆಯೇ ಟರ್ಕಿಯಲ್ಲಿ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಸಿಸ್ ಉಗ್ರನೊಬ್ಬ ಆತ್ಮಾಹುತಿ ಬಾಂಬ್ ಮೂಲಕ ತನ್ನನ್ನು ತಾನು  ಸ್ಫೋಟಿಸಿಕೊಂಡಿದ್ದಾನೆ.

ಟರ್ಕಿಯ ದಕ್ಷಿಣ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಟ ನಾಲ್ಕು ಮಂದಿ ಪೊಲೀಸರು ಮತ್ತು ಇಬ್ಬರು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  ಇನ್ನು ಅತ್ತ ಆತ್ಮಾಹುತಿ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆಯೇ ಇತ್ತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರಸ್ತುತ ಭದ್ರತಾ ಪಡೆಗಳು ನಾಲ್ಕು ಮಂದಿ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು  ತಿಳಿದುಬಂದಿದೆ. ಟರ್ಕಿಯ ಗಝಿಯಾಂಟೆಪ್ ನಲ್ಲಿರುವ ಬಹುಮಹಡಿ ಕಟ್ಟಡದ ಮೇಲೆ ಭದ್ರತಾ ಪಡೆಗಳು ದಾಳಿ ಮಾಡಿದಾಗ ಅಲ್ಲಿದ್ದ ಉಗ್ರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಇದೇ ಟರ್ಕಿಯಲ್ಲಿ ವಿಶ್ವದ ವಿವಿಧ ದೇಶಗಳ ನಾಯಕರ ಉಪಸ್ಥಿತಿಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ  ವಿಶ್ವದ ಅಗ್ರಗಣ್ಯ ನಾಯಕರು ಪಾಲ್ಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಟರ್ಕಿಯಲ್ಲಿ ವ್ಯಾಪಕ ಭದ್ರತೆ ನಿಯೋಜಿಸಲಾಗಿತ್ತು. ಹೀಗಿದ್ದೂ ಟರ್ಕಿಯಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು, ಆ ದೇಶದ  ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಇನ್ನು ಉಗ್ರರು ಜಿ-20 ಶೃಂಗಸಭೆಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ನಿನ್ನೆಯಷ್ಟೇ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ 15 ಇಸಿಸ್ ಉಗ್ರರು ದಾಳಿ ಮಾಡಿ 150ಕ್ಕೂ ಹೆಚ್ಚು ಜನರ ಮಾರಣ ಹೋಮ ನಡೆಸಿದ್ದರು. ಇದೀಗ ಮತ್ತೆ ಇಸಿಸ್ ತನ್ನ ಪೈಶಾಚಿಕ ಕೃತ್ಯ ಮುಂದುವರೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com