
ರಾಕಾ (ಸಿರಿಯಾ): ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಇಸಿಸ್ ಉಗ್ರರು ಮಾರಣಹೋಮ ನಡೆಸಿದ ಬೆನ್ನಲ್ಲೇ, ಉಗ್ರ ಸಂಘಟನೆ ವಿರುದ್ಧ ತಿರುಗಿಬಿದ್ದಿರುವ ಫ್ರಾನ್ಸ್ ಸೇನೆ ತನ್ನ ವಾಯುದಾಳಿಯನ್ನು ತೀವ್ರಗೊಳಿಸಿದೆ.
ಇಸಿಸ್ ಉಗ್ರರ ಕಪಿಮುಷ್ಟಿಯಲ್ಲಿರುವ ಸಿರಿಯಾದ ರಾಕಾ ಪ್ರದೇಶದಲ್ಲಿರುವ ಇಸಿಸ್ ಘಟಕಗಳ ಮೇಲೆ ಭಾನುವಾರ ರಾತ್ರಿಯಿಂದಲೇ ಫ್ರಾನ್ಸ್ ಸೇನೆಯ 10 ಯುದ್ಧ ವಿಮಾನಗಳು ವಾಯುದಾಳಿ ಆರಂಭಿಸಿದೆ ಎಂದು ತಿಳಿದುಬಂದಿದೆ. ಫ್ರಾನ್ಸ್ ಸೇನೆಯ ಈ ದಾಳಿಗೆ ಅಮೆರಿಕ ಮಿತ್ರ ಪಡೆಗಳು ಕೂಡ ಸಾಥ್ ನೀಡಿದ್ದು, ಅಮೆರಿಕ ಸೇನೆಯ ಯುದ್ಧ ವಿಮಾನಗಳು ಕೂಡ ಬಾಂಬ್ ದಾಳಿ ನಡೆಸಿವೆ.
ಮೂಲಗಳ ಪ್ರಕಾರ ಭಾನುವಾರ ಒಂದೇ ರಾತ್ರಿಯಲ್ಲಿ ಫ್ರಾನ್ಸ್ ಸೇನೆಯ 10 ಯುದ್ಧ ವಿಮಾನಗಳು ಇಸಿಸ್ ನೆಲೆಗಳ ಮೇಲೆ 20 ಬಾಂಬ್ ಗಳನ್ನು ಹಾಕಿದ್ದು, ಇಸಿಸ್ ನ ಶಸ್ತ್ರಾಗಾರ, ವೈದ್ಯಕೀಯ ಘಟಕ, ಉಗ್ರರ ತಂಗುದಾಣಗಳನ್ನು ನಾಶಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಯುದಾಳಿಯಲ್ಲಿ ಸಾವಿಗೀಡಾದವರ ಅಥವಾ ಗಾಯಗೊಂಡವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಪ್ಯಾರಿಸ್ ಮೇಲೆ ನಡೆದ ಉಗ್ರರ ಹೀನ ಕೃತ್ಯದಿಂದಾಗಿ ದಾಳಿ ಹೊಣೆಹೊತ್ತಿರುವ ಇಸಿಸ್ ಉಗ್ರ ಸಂಘಟನೆಯ ವಿರುದ್ಧ ತೀವ್ರ ಆಕ್ರೋಶಗೊಂಡಿರುವ ಫ್ರಾನ್ಸ್ ಸೇನೆ ತನ್ನ ದಾಳಿಯನ್ನು ಇಮ್ಮಡಿಗೊಳಿಸಲು ಮುಂದಾಗಿದೆ. ಉಗ್ರರ ವಿರುದ್ಧ ಯಾವುದೇ ರೀತಿಯ ಕರುಣೆ ಇಲ್ಲದೆ ದಾಳಿ ಮಾಡುವಂತೆ ಫ್ರಾನ್ಸ್ ಸರ್ಕಾರ ತನ್ನ ಸೇನೆಗೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಸಿರಿಯಾದ ಇಸಿಸ್ ಉಗ್ರರ ವಶದಲ್ಲಿರುವ ಪ್ರದೇಶಗಳ ಮೇಲೆ ಫ್ರಾನ್ಸ್ ಸೇನೆಯ ದಾಳಿ ತೀವ್ರಗೊಂಡಿದೆ.
ದಾಳಿಯಲ್ಲಿ ರಾಕಾದಲ್ಲಿರುವ ಒಂದು ಫುಟ್ ಬಾಲ್ ಸ್ಟೇಡಿಯಂ, ಮ್ಯೂಸಿಯಂ ಸಂಪೂರ್ಣ ನಾಶವಾಗಿದ್ದು, ರಾಕಾ ನಗರಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ಪ್ರಮುಖ ಘಟಕ ಕೂಡ ವಾಯುದಾಳಿಯಲ್ಲಿ ಹಾನಿಗೊಳಗಾಗಿದೆ. ಈ ಹಿನ್ನಲೆಯಲ್ಲಿ ರಾಕಾ ನಗರದಲ್ಲಿ ಕತ್ತಲು ಆವರಿಸಿದೆ. ಅಲ್ಲದೆ ಇಲ್ಲಿರುವ ಸುಮಾರು 2 ಲಕ್ಷಕ್ಕೂ ಅಧಿಕ ನಾಗರಿಕರು ಇದೀಗ ನಗರ ತೊರೆಯುವಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯೊಂದು ಹೇಳಿದೆ.
ದಾಳಿ ಕುರಿತಂತೆ ಜಿ-20 ಶೃಂಗಸಭೆಯಲ್ಲಿ ಚರ್ಚೆ
ಇನ್ನು ಮತ್ತೊಂದು ಮೂಲದ ಪ್ರಕಾರ ಭಾನುವಾರ ರಾತ್ರಿ ನಡೆದ ದಿಢೀರ್ ವಾಯುದಾಳಿಗೆ ಸಂಬಂಧಿಸಿದಂತೆ ಅಮೆರಿಕ ಸೇನಾಧಿಕಾರಿಗಳು ಫ್ರಾನ್ಸ್ ದೇಶದ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೇ ತಿಳಿಸಿದ್ದು, ಟರ್ಕಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಉಭಯ ದೇಶಗಳ ಸೇನಾಧಿಕಾರಿಗಳು ದೂರವಾಣಿಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಶನಿವಾರ ಮತ್ತು ಭಾನುವಾರ ಇಸಿಸ್ ವಶದಲ್ಲಿರುವ ಪ್ರದೇಶಗಳಲ್ಲಿ ವಾಯುದಾಳಿ ನಡೆಯಲಿದೆ ಎಂದು ಅವರು ಹೇಳಿದರು. ಇತ್ತ ಅಮೆರಿಕ ಮಿತ್ರಪಡೆಗಳು ರಾಕಾದಲ್ಲಿ ನಡೆಸುತ್ತಿರುವ ವಾಯುದಾಳಿ ಸೋಮವಾರವೂ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಪ್ಯಾರಿಸ್ ನಲ್ಲಿ ಮಾರಣ ಹೋಮ ನಡೆಸಿದ ಇಸಿಸ್ ಉಗ್ರ ಸಂಘಟನೆಯ ವಿರುದ್ಧ ಫ್ರಾನ್ಸ್ ಸರ್ಕಾರ ತಿರುಗಿ ಬಿದ್ದಿದ್ದು, ಇಸಿಸ್ ಉಗ್ರರ ಹೆಡೆಮುರಿ ಕಟ್ಟಲು ತನ್ನ ಪ್ರಯತ್ನ ಮುಂದುವರೆಸಿದೆ.
Advertisement