ಫೋಟೋಶಾಪ್ ಬಳಸಿ ಕೆನಡಾದ ಸಿಖ್ ಪತ್ರಕರ್ತನನ್ನು ಪ್ಯಾರಿಸ್ ದಾಳಿಯ ಉಗ್ರನನ್ನಾಗಿಸಿದರು!

ಕೆನಡಾದಲ್ಲಿ ಪತ್ರಕರ್ತನಾಗಿರುವ ಮುಗ್ಧ ಸಿಖ್ ಪತ್ರಕರ್ತನ ಫೋಟೋವೊಂದನ್ನು ಫೋಟೋಶಾಪ್ ಬಳಸಿ ಪ್ಯಾರಿಸ್ ದಾಳಿಯ ಉಗ್ರನನ್ನಾಗಿ ಚಿತ್ರಿಸಿದ್ದು...
ವೀರೇಂದರ್ ಜುಬ್ಬಾಲ್ ಅವರ ಫೋಟೋಶಾಪ್ ಮಾಡಿದ ಚಿತ್ರ (ಎಡ) ಮತ್ತು ಒರಿಜಿನಲ್ ಚಿತ್ರ
ವೀರೇಂದರ್ ಜುಬ್ಬಾಲ್ ಅವರ ಫೋಟೋಶಾಪ್ ಮಾಡಿದ ಚಿತ್ರ (ಎಡ) ಮತ್ತು ಒರಿಜಿನಲ್ ಚಿತ್ರ
ಟೊರಂಟೋ: ಕೆನಡಾದಲ್ಲಿ ಪತ್ರಕರ್ತನಾಗಿರುವ ಮುಗ್ಧ ಸಿಖ್ ಪತ್ರಕರ್ತನ ಫೋಟೋವೊಂದನ್ನು ಫೋಟೋಶಾಪ್ ಬಳಸಿ ಪ್ಯಾರಿಸ್ ದಾಳಿಯ ಉಗ್ರನನ್ನಾಗಿ ಚಿತ್ರಿಸಿದ್ದು, ಈ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಷ್ಟೇ ಅಲ್ಲ, ಸ್ಪಾನಿಷ್ ದಿನಪತ್ರಿಕೆಯೊಂದು ಈತನೇ ಪ್ಯಾರಿಸ್ ದಾಳಿ ನಡೆಸಿದ ಉಗ್ರ ಎಂದು ಸುದ್ದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ.
ಮ್ಯಾಡ್ರಿಡ್ ಮೂಲದ ಲಾ ರಾಜೋನ್ ಎಂಬ ಪತ್ರಿಕೆ ಕೆನಡಾದ ಹವ್ಯಾಸಿ ಪತ್ರಕರ್ತ ವೀರೇಂದರ್ ಜುಬ್ಬಾಲ್ ಅವರ ಫೋಟೋಶಾಪ್ ಮಾಡಿದ ಚಿತ್ರವನ್ನು ಪ್ರಕಟಿಸಿ ಈತ ಪ್ಯಾರಿಸ್ ದಾಳಿ ನಡೆಸಿದ ಉಗ್ರರರಲ್ಲೊಬ್ಬ ಎಂಬ ಶೀರ್ಷಿಕೆ ನೀಡಿತ್ತು. ಆಮೇಲೆ ನಿಜ ಸಂಗತಿ ತಿಳಿದ ಪತ್ರಿಕೆ ನಿನ್ನೆ ಮಧ್ಯಾಹ್ನವೇ ಕ್ಷಮೆ ಯಾಚಿಸಿದೆ.
ಒರಿಜಿನಲ್ ಫೋಟೋದಲ್ಲಿ ಜುಬ್ಬಾಲ್ ಐಪ್ಯಾಡ್‌ನ್ನು ಹಿಡಿದು ನಿಂತಿದ್ದಾರೆ. ಅದೇ ಫೋಟೋವನ್ನು ಫೋಟೋಶಾಪ್ ಮಾಡಿದಾಗ ಅದರಲ್ಲಿದ್ದ ಐಪ್ಯಾಡ್ ಜಾಗದಲ್ಲಿ ಖುರಾನ್ ಬಂದಿದೆ. ಜುಬ್ಬಾಲ್ ಆತ್ಮಾಹುತಿ ಬಾಂಬ್‌ನ ಪಟ್ಟಿ ಧರಿಸಿ ಖುರಾನ್ ಹಿಡಿದುಕೊಂಡಿರುವ ಫೋಟೋ ಆಗಿ ಒರಿಜಿನಲ್ ಫೋಟೋ ಬದಲಾಗಿದೆ.
ಜುಬ್ಬಾಲ್ ಅವರ ಫೋಟೋಶಾಪ್ ಮಾಡಿದ ಫೋಟೋ ವೈರಲ್ ಆಗುತ್ತಿದ್ದಂತೆ, ಜುಬ್ಬಾಲ್ ತನ್ನ ಒರಿಜಿನಲ್ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ, ಶುಕ್ರವಾರ ಪ್ಯಾರಿಸ್ ನಲ್ಲಿ ನಡೆದ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ನಾನು ಉಗ್ರನೆಂದು ತೋರಿಸಿರುವುದು ಫೋಟೋಶಾಪ್ ಮಾಡಿದ ಚಿತ್ರವಾಗಿದೆ. ಜನರು ನನ್ನ ಫೋಟೋವನ್ನು ಫೋಟೋಶಾಪ್ ಬಳಸಿ ಎಡಿಟ್ ಮಾಡಿದ್ದಾರೆ.  ಪ್ಯಾರಿಸ್ ನಲ್ಲಿ ದಾಳಿ ನಡೆಸಿದ್ದರಲ್ಲಿ ನನ್ನ ಪಾತ್ರವೇನೂ ಇಲ್ಲ. ನಾನು ಪ್ಯಾರಿಸ್ ಗೆ ಹೋಗಲೇ ಇಲ್ಲ. ನಾನು ಟರ್ಬಾನ್ ತೊಟ್ಟಿರುವ ಸಿಖ್, ನಾನು ಕೆನಡಾ ನಿವಾಸಿ ಎಂದು ಜುಬ್ಬಾಲ್ ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಜುಬ್ಬಾಲ್  ಫೋಟೋವನ್ನು ಎಡಿಟ್ ಮಾಡಿದವರು ಯಾರು? ಮತ್ತು ಯಾಕೆ? ಎಂಬುದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಆದರೆ ಗೇಮರ್‌ಗೇಟ್ ಬಗ್ಗೆ ಜುಬ್ಬಾಲ್ ವಿಮರ್ಶಿಸಿರುವುದೇ ಇದಕ್ಕೆಲ್ಲಾ ಕಾರಣ ಎಂದು ಶಂಕೆ ವ್ಯಕ್ತಪಡಿಸಲಾಗಿದೆ ಎಂದು ದ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಏನಿದು ಗೇಮರ್ ಗೇಟ್? : ಅಗಸ್ಟ್ 2014ರಲ್ಲಿ ಗೇಮರ್‌ಗೇಟ್ ವಿವಾದ ಭುಗಿಲೆದ್ದಿತ್ತು. ವೀಡಿಯೋಗೇವ್ಸ್ ಗಳಲ್ಲಿ ಹೆಚ್ಚುತ್ತಿರುವ ಸೆಕ್ಸಿಸಂ ವಿರೋಧಿಸಿ ನಡೆಸಲಾದ ಅಭಿಯಾನವೇ ಇದು. ಈ ಅಭಿಯಾನದಲ್ಲಿ ವಿರೇಂದ್ರ ಜುಬ್ಬಾಲ್ ಮುಂಚೂಣಿಯಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com