ಮಾಲಿ ಉಗ್ರ ನಿಗ್ರಹ ಕಾರ್ಯಾಚರಣೆ ಅಂತ್ಯ: 5 ಉಗ್ರರು ಸೇರಿ 27 ಮಂದಿ ಸಾವು

ಪ್ಯಾರಿಸ್ ದಾಳಿಯ ಭೀಕರತೆಯು ಇನ್ನೂ ಹಸಿರಾಗಿರುವಾಗಲೇ ಮಾಲಿಯ ಹೋಟೆಲ್ ಮೇಲೆ ಉಗ್ರರು ನಡೆಸಿದ್ದ ದಾಳಿಯನ್ನು ಭದ್ರತಾ ಪಡೆಗಳು ಮೆಟ್ಟಿನಲ್ಲಿವಲ್ಲಿ ಯಶಸ್ವಿಯಾಗಿದ್ದಾರೆ..
ಮಾಲಿ ಹೊಟೆಲ್ ಮೇಲೆ ಉಗ್ರರ ದಾಳಿ (ಚಿತ್ರಕೃಪೆ:ನ್ಯೂಯಾರ್ಕ್ ಟೈಮ್ಸ್)
ಮಾಲಿ ಹೊಟೆಲ್ ಮೇಲೆ ಉಗ್ರರ ದಾಳಿ (ಚಿತ್ರಕೃಪೆ:ನ್ಯೂಯಾರ್ಕ್ ಟೈಮ್ಸ್)

ಮಾಲಿ: ಪ್ಯಾರಿಸ್ ದಾಳಿಯ ಭೀಕರತೆಯು ಇನ್ನೂ ಹಸಿರಾಗಿರುವಾಗಲೇ ಮಾಲಿಯ ಹೋಟೆಲ್ ಮೇಲೆ ಉಗ್ರರು ನಡೆಸಿದ್ದ ದಾಳಿಯನ್ನು ಭದ್ರತಾ ಪಡೆಗಳು ಮೆಟ್ಟಿನಲ್ಲಿವಲ್ಲಿ ಯಶಸ್ವಿಯಾಗಿದ್ದಾರೆ

ಶುಕ್ರವಾರ ಮಾಲಿ ರಾಜಧಾನಿ ಬಮಾಕೋದ ರ್ಯಾಡಿಸನ್ ಬ್ಲೂ ಹೋಟೆಲ್ ಮೇಲೆ ದಾಳಿ ನಡೆಸಿದ ಉಗ್ರರು 20 ಭಾರತೀಯರು ಸೇರಿದಂತೆ 170 ಮಂದಿಯನ್ನು ಒತ್ತೆಯಲ್ಲಿಟ್ಟುಕೊಂಡಿದ್ದರು. ಈ ಪೈಕಿ 27 ಒತ್ತೆಯಾಳುಗಳನ್ನು ಹತ್ಯೆಗೈಯ್ಯಲಾಗಿದೆ ಎಂದು ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಕರ್ತರು ಹೇಳಿದ್ದಾರೆ. ಏತನ್ಮಧ್ಯೆ, ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಹೋಟೆಲ್‍ನೊಳಗಿದ್ದ ಭಾರತೀಯರೂ ಸೇರಿದಂತೆ ಉಳಿದೆಲ್ಲ ಒತ್ತೆಯಾಳುಗಳನ್ನೂ ರಕ್ಷಿಸುವಲ್ಲಿ ರಕ್ಷಣಾಪಡೆಯ ಯೋಧರು ಯಶಸ್ವಿಯಾಗಿದ್ದಾರೆ. ಅಲ್ಲದೆ ಕಾರ್ಯಾಚರಣೆಯಲ್ಲಿ 5 ಮಂದಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ.

ಹೋಟೆಲ್‍ಗೆ ಲಗ್ಗೆಯಿಟ್ಟ ಉಗ್ರರು: ರ್ಯಾಡಿಸನ್ ಬ್ಲೂ ಎನ್ನುವುದು 190 ಕೊಠಡಿಗಳ ಐಷಾರಾಮಿ ಹೋಟೆಲ್. ಉಗ್ರರು ರಾಜತಾಂತ್ರಿಕ ಪ್ಲೇಟ್‍ಗಳುಳ್ಳ ಕಾರಿನಲ್ಲಿ ಹೋಟೆಲ್ ನುಗ್ಗಿದರು. ಶುಕ್ರವಾರ ಉಗ್ರರು ರಾಜತಾಂತ್ರಿಕ ಪ್ಲೇಟ್‍ಗಳುಳ್ಳ ಕಾರಿನಲ್ಲಿ ಹೋಟೆಲ್ ಕಾಂಪೌಂಡ್‍ನೊಳಕ್ಕೆ ಆಗಮಿಸಿದರು. ಸುಮಾರು 10ರಷ್ಟಿದ್ದ ಉಗ್ರರು ಏಕಾಏಕಿ ಗುಂಡು ಹಾರಿಸುತ್ತಾ ಒಳ ಪ್ರವೇಶಿಸಿದರು. ನಂತರ ಒಂದೊಂದೇ ಕೊಠಡಿಗೆ ತೆರಳಿ, ಅತಿಥಿಗಳು ಮತ್ತು ಹೋಟೆಲ್ ಸಿಬ್ಬಂದಿಯನ್ನು ಒತ್ತೆಯಾಗಿಟ್ಟುಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೆರಿಕದ ವಿಶೇಷ ಪಡೆಗಳು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ಹಲವರನ್ನು ರಕ್ಷಿಸಿದೆ. ಒತ್ತೆಯಾಳುಗಳ ಪೈಕಿ ಅಮೆರಿಕ ಸರ್ಕಾರದ ಹಲವು ಅಧಿಕಾರಿಗಳೂ ಸೇರಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ದುಬೈ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 20 ಮಂದಿ ಭಾರತೀಯರು ಇದೇ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಅದೃಷ್ಟವಶಾತ್ ಅವರೆಲ್ಲರೂ ಸುರಕ್ಷಿತವಾಗಿ ಬಿಡುಗಡೆ ಹೊಂದಿದ್ದಾರೆ.

ಕುರಾನ್ ಓದಿದವರ ಬಿಡುಗಡೆ: ಇನ್ನೊಂದೆಡೆ, ಉಗ್ರರು ಕುರಾನ್‍ನ ಶ್ಲೋಕಗಳನ್ನು ಓದಲು ಬಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಜೂನ್‍ನಲ್ಲೇ ಸರ್ಕಾರದ ಪರವಾಗಿರುವ ಸಶಸ್ತ್ರ ಪಡೆಗಳು ಹಾಗೂ ತುರೇಗ್ ಬಂಡುಕೋರರ ನಡುವೆ ಶಾಂತಿ ಮಾತುಕತೆ ನಡೆದಿದ್ದರೂ, ಮಾಲಿಯಲ್ಲಿ ಇಸ್ಲಾಮಿಕ್ ಉಗ್ರರ ದಾಳಿ ಮಾತ್ರ ಮುಂದುವರಿದಿದೆ. ಅಲ್ಲದೆ, ಮಾಲಿಯ ಬಹುತೇಕ ಪ್ರದೇಶಗಳು ಸರ್ಕಾರ ಹಾಗೂ ವಿದೇಶಿ ಪಡೆಗಳ ನಿಯಂತ್ರಣಕ್ಕೆ ಸಿಗುತ್ತಿಲ್ಲ.

ವರ್ಷದಲ್ಲಿ ಮೂರನೇ ದಾಳಿ
-ಉಗ್ರರು ಮಾಲಿಯ ಹೋಟೆಲ್ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಪ್ರಸಕ್ತ ವರ್ಷದಲ್ಲೇ 2 ಬಾರಿ ಹೋಟೆಲ್‍ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದು ಇಲ್ಲಿ ನಡೆಯುತ್ತಿರುವ ಮೂರನೇ ದಾಳಿಯಾಗಿದೆ.
-ಮಾರ್ಚ್‍ನಲ್ಲಿ ಬಮಾಕೋದ ರೆಸ್ಟೋರೆಂಟ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂನ ತಲಾ ಒಬ್ಬರು ಸೇರಿದಂತೆ ಐದು ಮಂದಿ ಸಾವಿಗೀಡಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com