ಅತ್ಯಾಧುನಿಕ ಸೇನಾ ನಿಯಂತ್ರಣ ಕೊಠಡಿಯಲ್ಲಿ ಇಸಿಸ್ ಉಗ್ರ ನಿಗ್ರಹ ಕಾರ್ಯಾಚರಣೆ ವೀಕ್ಷಿಸುತ್ತಿರುವ ರಷ್ಯಾ ಸೇನಾಧಿಕಾರಿಗಳು (ಚಿತ್ರಕೃಪೆ: ದಿ ಇಂಡಿಪೆಂಡೆಂಟ್)
ಅತ್ಯಾಧುನಿಕ ಸೇನಾ ನಿಯಂತ್ರಣ ಕೊಠಡಿಯಲ್ಲಿ ಇಸಿಸ್ ಉಗ್ರ ನಿಗ್ರಹ ಕಾರ್ಯಾಚರಣೆ ವೀಕ್ಷಿಸುತ್ತಿರುವ ರಷ್ಯಾ ಸೇನಾಧಿಕಾರಿಗಳು (ಚಿತ್ರಕೃಪೆ: ದಿ ಇಂಡಿಪೆಂಡೆಂಟ್)

ಇಸಿಸ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ಸೇನೆಯ ನಿಯಂತ್ರಣ ಕೇಂದ್ರ ಹೇಗಿದೆ ಗೊತ್ತಾ..?

ಇಸಿಸ್ ಉಗ್ರಗಾಮಿಗಳ ವಿರುದ್ಧದ ದಾಳಿಗೆ ರಷ್ಯಾ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ರಷ್ಯಾ ಸಿದ್ಧತೆಯನ್ನು ನೋಡಿ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಿದೆ...

ಮಾಸ್ಕೋ: ಶತಾಯಗತಾಯ ಇಸಿಸ್ ಉಗ್ರಗಾಮಿಗಳನ್ನು ಹೆಡೆಮುರಿ ಕಟ್ಟಲೇ ಬೇಕೆಂದು ರಷ್ಯಾ ಅಧ್ಯಕ್ಷ ವ್ಲಾಡಿಪುಟಿನ್ ತೀರ್ಮಾನಿಸಿದಂತಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದ ಅವರು ಇದೀಗ  ಪ್ಯಾರಿಸ್ ದಾಳಿ ಬಳಿಕ ಇಸಿಸ್ ಉಗ್ರಗಾಮಿಗಳ ವಿರುದ್ಧ ತೀವ್ರ ವಾಯುದಾಳಿಗೆ ಸೂಚನೆ ನೀಡಿದ್ದಾರೆ.

ಇನ್ನು ಈ ಭಯೋತ್ಪಾದಕರ ವಿರುದ್ಧದ ದಾಳಿಗೆ ರಷ್ಯಾ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ರಷ್ಯಾ ಸಿದ್ಧತೆಯನ್ನು ನೋಡಿ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಿದೆ.  ಪ್ರಮುಖ ಸೇನಾ ಕಾರ್ಯಾಚರಣೆಗೆ ಅಮೆರಿಕ ಸೇನೆ ಮತ್ತು ಪೆಂಟಗಾನ್ ಬಳಸುವ ಅತ್ಯಾಧುನಿಕ ನಿಯಂತ್ರಣ ಕೊಠಡಿಯ ಮಾದರಿಯಲ್ಲಿಯೇ ರಷ್ಯಾ ಕೂಡ ಅತ್ಯಾಧುನಿಕ ಸೇನಾ ನಿಯಂತ್ರಣ  ಕೊಠಡಿಯನ್ನು ಅಭಿವೃದ್ಧಿಪಡಿಸಿದೆ. ಈ ಸೇನಾ ನಿಯಂತ್ರಣ ಕೊಠಡಿಯಿಂದಲೇ ರಷ್ಯಾ ಸೇನೆ ಸಿರಿಯಾದಲ್ಲಿ ತಾನು ನಡೆಸುತ್ತಿರುವ ದಾಳಿಯನ್ನು ನಿಯಂತ್ರಿಸುತ್ತಿದೆ. ಪ್ರಮುಖವಾಗಿ ದಾಳಿ  ಮೇಲ್ವಿಚಾರಣೆಯನ್ನು ಖುದ್ಧು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ತಂಡ ಪರೀಕ್ಷಿಸುತ್ತಿದೆ.

ಸೇನೆಯ ವಿವಿಧ ವಿಭಾಗಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪ್ರತ್ಯೇಕ ಸಾಲು
ಬರೊಬ್ಬರಿ ಮೂರು ಅಂತಸ್ತಿನ ಈ ವಾರ್ ರೂಂ ನಲ್ಲಿ ವಿವಿಧ ವಿಭಾಗಗಳಿದ್ದು, ಸಾಲಾಗಿ ನಿರ್ಮಿಸಲಾಗಿರುವ ಆಸನಗಳಲ್ಲಿ ಆಯಾ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಆಸೀನರಾಗಿರುತ್ತಾರೆ. ಮೂರು ಅಂತಸ್ತಿನಲ್ಲಿ ಭೂದಳ, ವಾಯುದಳ ಮತ್ತು ನೌಕಾಪಡೆಗೆ ಸೇರಿದ ಮೂರು ವಿಭಾಗಗಳ ಅಧಿಕಾರಿಗಳು ಆಯಾ ವಿಭಾಗಕ್ಕೆ ಮೀಸಲಿಟ್ಟ ಸಾಲುಗಳಲ್ಲಿನ ಆಸನಗಳಲ್ಲಿ ಕುಳಿತುಕೊಂಡು  ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಪ್ರತಿಯೊಬ್ಬ ಅಧಿಕಾರಿಗೂ ಒಂದೊಂದು ಅತ್ಯಾಧುನಿಕ ಕಂಪ್ಯೂಟರ್ ಗಳನ್ನು ನೀಡಲಾಗಿದ್ದು, ಅಲ್ಲಿ ಕಾರ್ಯಾಚರಣೆಗೆ ಮತ್ತು ಸೇನೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿಟ್ಟಿರಲಾಗುತ್ತದೆ. ಅಗತ್ಯ ಬಿದ್ದಾಗ ಅಧಿಕಾರಿಗಳು ಈ ಮಾಹಿತಿಗಳನ್ನು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಇತರೆ  ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಅತ್ಯಾಧುನಿಕ ತಂತ್ರಜ್ಞಾನದ ನಿಯಂತ್ರಣ ಕೊಠಡಿ
ರಷ್ಯಾ ಸೇನೆ ನಿರ್ಮಿಸಿರುವ ಈ ಸೇನಾ ನಿಯಂತ್ರಣ ಕೊಠಡಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಕೊಠಡಿಗೆ ಅಳವಡಿಸಲಾಗಿರುವ ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಕಾರ್ಯಾಚರಣೆಯಲ್ಲಿ ತೊಡಗಿರುವ ಯುದ್ಧ ವಿಮಾನ, ಟ್ಯಾಂಕರ್ ಗಳು ಮತ್ತು ಸೇನಾ ಟ್ರಕ್ ಗಳ ತತ್ ಕ್ಷಣದ ಇರುವಿಕೆಯನ್ನು ಕ್ಷಣ ಮಾತ್ರದಲ್ಲಿ ಗುರುತಿಸಬಹುದಾಗಿದೆ. ಮ್ಯಾಪ್ ತಂತ್ರಜ್ಞಾನದ ಸಹಾಯದಿಂದ ಸೇನಾ ಕಾರ್ಯಾಚರಣೆ ನಡೆಯುವ ಯುದ್ಧ ಭೂಮಿಯ ಭೌಗೋಳಿಕ ಪರಿಚಯವನ್ನು ಈ ನಿಯಂತ್ರಣ ಕೊಠಡಿಯಲ್ಲಿದ್ದುಕೊಂಡೇ ಸೇನಾಧಿಕಾರಿಗಳು ಪಡೆದು ತಮ್ಮ ಸೈನಿಕರಿಗೆ ರವಾನಿಸಬಹುದಾಗಿದೆ.

ಕಾರ್ಯಾಚರಣೆ ವೀಕ್ಷಣೆಗೆ ಹಲವು ಬೃಹತ್ ಪರದೆಗಳು
ಇಸಿಸ್ ಉಗ್ರಗಾಮಿ ಸಂಘಟನೆ ವಿರುದ್ಧ ರಷ್ಯಾ ಸೇನೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ವೀಕ್ಷಿಸಲೆಂದೇ ಈ ಬೃಹತ್ ಸೇನಾ ನಿಯಂತ್ರಣ ಕೊಠಡಿಯಲ್ಲಿ ಹಲವು ಬೃಹತ್ ಪರದೆಗಳನ್ನು  ಅಳವಡಿಸಲಾಗಿದ್ದು, ಇಲ್ಲಿಂದಲೇ ಕಾರ್ಯಾಚರಣೆಯ ಸಂಪೂರ್ಣ ದೃಶ್ಯಾವಳಿಗಳನ್ನು ಸೇನಾಧಿಕಾರಿಗಳು ವೀಕ್ಷಿಸುತ್ತಾರೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಸೇನೆ ತೆಗೆದುಕೊಳ್ಳಬೇಕಾದ  ನಿರ್ಣಯಗಳ ಕುರಿತು ಕೂಡಲೇ ಮಾಹಿತಿ ನೀಡುತ್ತಾರೆ. ಇದಕ್ಕೆಂದೇ ಪ್ರತ್ಯೇಕ ಸೇನಾ ವಿಭಾಗವನ್ನು ಸಿರಿಯಾಗೆ ರವಾನಿಸಿದ್ದು, ರಷ್ಯಾ ಸೇನೆಯ ಕಾರ್ಯಾಚರಣೆ ಸಂಪೂರ್ಣ ವಿಡಿಯೋ  ದೃಶ್ಯಾವಳಿಗಳನ್ನು ಈ ವಿಭಾಗ ರವಾನಿಸುತ್ತಿರುತ್ತದೆ.

ಅಧಿಕಾರಿಗಳು ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ತಮ್ಮ ಮುಂದಿರುವ ಬೃಹತ್ ಪರದೆಯ ಮುಖಾಂತರವಾಗಿ ವೀಕ್ಷಿಸುತ್ತಾರೆ. ಅಲ್ಲದೆ ಅಲ್ಲಿಂದಲೇ ತಮ್ಮ ಸೈನಿಕರಿಗೆ  ನಿರ್ದೇಶನಗಳನ್ನೂ ನೀಡುತ್ತಾರೆ. ಇಲ್ಲೇ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ರಷ್ಯಾದ ಪ್ರಮುಖ ಸೇನಾಧಿಕಾರಿಗಳಿಗೆ ಪ್ರತ್ಯೇಕ ಆಸನವನ್ನು ಮೀಸಲಿರಿಸಲಾಗಿದ್ದು, ಪುಟಿನ್ ಅಲ್ಲಿಂದಲೇ ತಮ್ಮ  ಸೇನೆಯ ಕಾರ್ಯಾಚರಣೆಯನ್ನು ವೀಕ್ಷಿಸುತ್ತಾರೆ. ಇಂತಹ ಅತ್ಯಾಧುನಿಕ ಬೃಹತ್ ಸೇನಾ ನಿಯಂತ್ರಣ ಕೊಠಡಿಯನ್ನು ಈ ಹಿಂದೆ ಅಮೆರಿಕ ಸೇನೆ ನಿರ್ಮಿಸಿಕೊಂಡಿತ್ತು.

ಪೆಂಟಗಾನ್ ನಲ್ಲಿರುವ ಈ ನಿಯಂತ್ರಣ ಕೊಠಡಿಯಿಂದಲೇ ಅಮೆರಿಕ ಸೇನೆ ಪಾಕಿಸ್ತಾನದ ಅಬೋಟಾಬಾದ್ ನಲ್ಲಿದ್ದ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ವಿರುದ್ಧ ಕಾರ್ಯಾಚರಣೆ  ನಡೆಸಿ ಆತನನ್ನು ಹೊಡೆದುರುಳಿಸಿತ್ತು. ಈ ಕಾರ್ಯಾಚರಣೆಯ ಅಷ್ಟೂ ದೃಶ್ಯಾವಳಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪೆಂಟಗಾನ್ ನಿಯಂತ್ರಣ ಕೊಠಡಿಯಿಂದ ವೀಕ್ಷಿಸುತ್ತಿದ್ದ  ವಿಚಾರ ಬಳಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com