ಚೀನಾದ ನೂತನ ಗಾಜಿನ ಸೇತುವೆಯಲ್ಲಿ ಬಿರುಕು: ಪ್ರವಾಸಿಗರಲ್ಲಿ ಆತಂಕ

ಸಮುದ್ರ ಮಟ್ಟದಿಂದ 3 ಸಾವಿರದ 500 ಅಡಿ ಎತ್ತರದಲ್ಲಿ ವಿಶ್ವದ ಅತಿದೊಡ್ಡ ಮತ್ತು ಉದ್ದವಾದ ಎಂದು ನಂಬುವ ಹೊಚ್ಚಹೊಸ ಪಾರದರ್ಶಕ ಗಾಜಿನ...
ಚೀನಾದ ನೂತನ ಗಾಜಿನ ಸೇತುವೆ
ಚೀನಾದ ನೂತನ ಗಾಜಿನ ಸೇತುವೆ

ಬೀಜಿಂಗ್: ಸಮುದ್ರ ಮಟ್ಟದಿಂದ 3 ಸಾವಿರದ 500 ಅಡಿ ಎತ್ತರದಲ್ಲಿ ವಿಶ್ವದ ಅತಿದೊಡ್ಡ ಮತ್ತು ಉದ್ದವಾದ ಎಂದು ನಂಬುವ ಹೊಚ್ಚಹೊಸ ಪಾರದರ್ಶಕ ಗಾಜಿನ ಸೇತುವೆ ಚೀನಾದ ಯುಂಟೈ ಪರ್ವತ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಪ್ರವಾಸಿಗರಿಗೆ ಭೀಕರ ಮತ್ತು ರೋಮಾಂಚಕ ಅನುಭವವನ್ನು ಒಟ್ಟಿಗೆ ನೀಡುತ್ತಿದೆ. ಇದನ್ನು ಇತ್ತೀಚೆಗಷ್ಟೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಯುಂಟೈ ಪರ್ವತ ಭಾಗದ ಹೆನನ್ ಪ್ರಾಂತ್ಯದಲ್ಲಿ ಯು ಆಕಾರದಲ್ಲಿ ಈ ಸೇತುವೆಯಿದ್ದು ಇದು ನಡೆಯಲು ಸುರಕ್ಷಿತವಾಗಿದೆ ಎಂದು ಕಟ್ಟಿದವರು ಹೇಳುತ್ತಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಎರಡು ಪದರಗಳಲ್ಲಿ ಬೇಲಿ ನಿರ್ಮಿಸಲಾಗಿದ್ದು, ಮೂರು ಪದರಗಳ ನಡೆದುಕೊಂಡು ಹೋಗುವ ನೆಲ ಭಾಗವನ್ನು ಹೊಂದಿದೆ. ಪ್ರತಿ ಚದರಡಿ ತುಂಡು ಗ್ಲಾಸಿನ ದಪ್ಪ 27 ಮಿಲಿ ಮೀಟರ್ ಇದ್ದು, ಸಾವಿರದ 700 ಪೌಂಡು ತೂಕವನ್ನು ಹೊಂದಿದೆ.ಆದರೂ ಕೂಡ ಕೆಲವರಿಗೆ ಇದರ ಮೇಲೆ ನಡೆದುಕೊಂಡು ಹೋಗುವುದೆಂದರೆ ಭಯ. ಯಾರೋ ಸೇತುವೆ ಮೇಲೆ ಸ್ಟೈನ್ ಲೆಸ್ ಸ್ಟೀಲ್ ಕಪ್ ಬೀಳಿಸಿದ್ದರು ಅಂತ ಸುದ್ದಿ ಓದಿದ ಮೇಲಂತೂ ಇನ್ನೂ ಹೆದರಿಕೆ ಹೆಚ್ಚಾಗಿದೆಯಂತೆ.

ಸೇತುವೆಯ ಭದ್ರತೆ ಬಗ್ಗೆ ಪ್ರತಿದಿನ ತಪಾಸಣೆ ಮಾಡಲಾಗುತ್ತದೆ. ಮೊನ್ನೆ ಸೋಮವಾರ ಹೀಗೆ ತಪಾಸಣೆ ಮಾಡುತ್ತಿದ್ದಾಗ ಒಂದು ಭಾಗದಲ್ಲಿ ಬಿರುಕು ಬಿಟ್ಟಿರುವುದು ಕಾಣಿಸಿಕೊಂಡಿದೆ.ತಳಭಾಗದ ಮೂರು ಪದರಗಳಲ್ಲಿ ಒಂದು ಪದರದಲ್ಲಿ ಬಿರುಕು ಕಾಣಿಸಿಕೊಂಡಿತ್ತು, ಆದರೆ ಇದು ಸುರಕ್ಷತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸೇತುವೆಯ ಸುರಕ್ಷತೆ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಲೀ ಡಾಂಗ್ ಹೈ ಎಂಬುವವರು ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಬಿರುಕು ಬಂದಲ್ಲಿ ಸ್ವಲ್ಪ ನಡುಗಿದ ಅನುಭವ ಆಗಿತ್ತಂತೆ. ಅನೇಕ ಮಂದಿ ಕಿರುಚಲು ಆರಂಭಿಸಿದರಂತೆ. ನಾನೂ ಕೂಡ ಭೀತಿಗೊಂಡು ಕಿರುಚಿದೆ. ನಾವೆಲ್ಲ ಒಬ್ಬರನ್ನೊಬ್ಬರು ತಳ್ಳಿ ಬೇಗನೆ ಆಚೆ ಬಂದುಬಿಟ್ಟೆವು ಎಂದು ಸಾಮಾಜಿಕ ಜಾಲತಾಣ ವೈಬೋದಲ್ಲಿ ಹಾಕಿಕೊಂಡಿದ್ದಾರೆ ಎಂದು ನ್ಯೂಸ್.ಕಾಂ ಎಂಬ ಸುದ್ದಿತಾಣ ವರದಿ ಮಾಡಿದೆ.
ಇನ್ನೊಬ್ಬ ಲಿ ಡೊಂಗ್ಹೈ ಎಂಬುವವರು, ಸೇತುವೆಯ ಒಂದೆಡೆ ಮಾತ್ರವಲ್ಲ, ಇಡೀ ಸೇತುವೆಯೇ ನಡೆದುಕೊಂಡು ಹೋಗುವಾಗ ನಡುಗುತ್ತಿದೆ. ಅದನ್ನು ರಿಪೇರಿ ಮಾಡಬೇಕಾದುದು ಅವಶ್ಯ ಎಂದು ಬರೆದುಕೊಂಡಿದ್ದಾರೆ.

ಹೀಗೆ ಸೇತುವೆ ಬಿರುಕು ಬಿಟ್ಟಿರುವ ಸುದ್ದಿ ಕೇಳುತ್ತಿರುವುದು ಇದು ಮೊದಲೇನಲ್ಲ. ಅಮೆರಿಕದ ಚಿಕಾಗೋದ ವಿಲ್ಲಿಸ್ ಟವರ್ಸ್ ಸ್ಕೈಡೆಕ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸುದ್ದಿಯಾಗಿತ್ತು. ಆಗ ಅಲ್ಲಿನ ವಕ್ತಾರರು, ಟವರ್ ನ ರಕ್ಷಕ ಪೊರೆಯಲ್ಲಿ ಮಾತ್ರ ಬಿರುಕು ಕಾಣಿಸಿಕೊಂಡಿದೆಯಷ್ಟೆ, ಗ್ಲಾಸ್ ನಲ್ಲಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಲಂಡನ್ ನ ಟವರ್ ಬ್ರಿಡ್ಜ್ ನಲ್ಲಿ ಪಾರದರ್ಶಕ ನಡೆಯುವ ಜಾಗದಲ್ಲಿ ಯಾರೋ ಬಿಯರ್ ಬಾಟಲ್ ಬಿಸಾಕಿದ್ದರಿಂದ ಬಿರುಕು ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿತ್ತು.

ಇದೀಗ ಚೀನಾದ ಮೌಂಟ್ ಯುಂಟೈ ಅಧಿಕಾರಿಗಳು, ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ.ತಾತ್ಕಾಲಿಕವಾಗಿ ಗಾಜಿನ ಸೇತುವೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೇತುವೆಯ ಕೆಲಸ ಸಂಪೂರ್ಣವಾಗಿ ಮುಗಿದ ನಂತರ ಪ್ರವಾಸಿಗರಿಗೆ ಬಿಟ್ಟುಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com