
ಲಂಡನ್: ತಮ್ಮ ಇಳಿ ವಯಸ್ಸು ಮತ್ತು ಅನಾರೋಗ್ಯದ ಬಗ್ಗೆ ಆತಂಕಕ್ಕೀಡಾಗಿರುವ ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಈ ಸ್ಥಾನವನ್ನು ಅಲಂಕರಿಸಿದ ಕೊನೆಯ ಗುರು ತಾವಾಗಿರಲೂಬಹುದು ಎಂದು ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಟಿಬೆಟಿಯನ್ನರ 14ನೇ ಧಾರ್ಮಿಕ ಗುರು ದಲೈಲಾಮಾ, ನನಗೆ ಈ ಬಗ್ಗೆ ಯಾವುದೇ ಆತಂಕವಿಲ್ಲ. ಆದರೆ ಧಾರ್ಮಿಕ ಗುರು ಸ್ಥಾನವನ್ನು ಅಲಂಕರಿಸಿದ ಕೊನೆಯ ವ್ಯಕ್ತಿ ತಾವಾಗಲೂಬಹುದು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಚೀನಾ ಸರ್ಕಾರವನ್ನು ಟೀಕಿಸಿದ ಅವರು, ಚೀನಾಕ್ಕೆ ದಲೈಲಾಮಾ ಸಂಸ್ಥೆಯ ಬಗ್ಗೆ ಹೆಚ್ಚು ಆಸಕ್ತಿ ಇದೆಯೇ ಹೊರತು ಧಾರ್ಮಿಕ ಗುರುವಿನ ಬಗ್ಗೆ ಅಲ್ಲ ಎಂದಿದ್ದಾರೆ. ಹಿಂದಿನ ಗುರುಗಳು ಶತಮಾನದವರೆಗೆ ಹುದ್ದೆಯನ್ನಲಂಕರಿಸಿದ್ದರು. ಆದರೆ 2011ರಿಂದ ನಾನು ಸಂಪೂರ್ಣವಾಗಿ ರಾಜಕೀಯ ಜವಾಬ್ದಾರಿಗಳಿಂದ ನಿವೃತ್ತಿ ತೆಗೆದುಕೊಂಡಿದ್ದೇನೆ. ಇದರಿಂದ ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಸಂಪ್ರದಾಯ ಮುರಿದುಬಿದ್ದಿದೆ ಎಂದು ಹೇಳಿದ್ದಾರೆ.
ಟಿಬೆಟಿಯನ್ನರ ಬೌದ್ಧ ಧರ್ಮ ಧಾರ್ಮಿಕ ಗುರುಗಳಿಲ್ಲದೆ ಮುಂದುವರಿಯಲೂಬಹುದು ಎಂದು ಹೇಳಿದ್ದಾರೆ.ದಲೈಲಾಮಾ ಅವರು ಮೊದಲಿನಿಂದಲೂ ಟಿಬೆಟನ್ನು ಪ್ರತ್ಯೇತ ದೇಶವನ್ನಾಗಿ ಗುರುತಿಸಬೇಕೆಂದು ಚೀನಾ ಜೊತೆ ಹೋರಾಟ ನಡೆಸುಕೊಂಡು ಬಂದಿದ್ದಾರೆ. ಐತಿಹಾಸಿಕವಾಗಿ ಟಿಬೆಟ್ ಸ್ವತಂತ್ರ ದೇಶ. ಆದರೆ ಚೀನೀಯರು ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ವಾಸ್ತವ ನೆಲೆಗಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಸಂದರ್ಶನದ ವೇಳೆ ಹೇಳಿದ್ದಾರೆ.
ಚೀನೀ ಪಡೆಗಳು ಟಿಬೆಟ್ ನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ 1959ರಲ್ಲಿ ದಲೈಲಾಮಾ ಅವರು ಭಾರತಕ್ಕೆ ಓಡಿ ಹೋಗಿದ್ದರು. ಅವರ ಉತ್ತರಾಧಿಕಾರಿಯ ನೇಮಕ ಬಗ್ಗೆ ಸುದ್ದಿ ಹಬ್ಬುತ್ತಿದ್ದು, ಪಂಚೇನ್ ಲಾಮಾ ಅವರ ಹೆಸರು ಕೇಳಿಬರುತ್ತಿದೆ. ಇವರು ಬಾಲಕರಾಗಿದ್ದಾಗ ಇವರ ಹೆಸರನ್ನು ಸೂಚಿಸಿದ್ದು ದಲೈ ಲಾಮಾ ಅವರೇ. ಆದರೆ ಚೀನಾ ಇದನ್ನು ವಿರೋಧಿಸಿದ್ದು, ತಾನು ಸೂಚಿಸುವವರು ಧಾರ್ಮಿಕ ಗುರು ಆಗಬೇಕೆಂದು ಪಟ್ಟು ಹಿಡಿಯುತ್ತಿದೆ.
Advertisement