ಅಪ್ಸರೆ ಎಂದದ್ದಕ್ಕೆ ರು.10 ಕೋಟಿ ದಾವೆ!

ಪ್ರಮುಖ ಐಟಿ ಸಂಸ್ಥೆ, ಬೆಂಗಳೂರು ಮೂಲದ ವಿಪ್ರೋದ ಭಾರತೀಯ ಮಹಿಳಾ ಸಿಬ್ಬಂದಿಯೊ ಬ್ಬರು ಸಂಸ್ಥೆಯ ಮೇಲೆ ಲೈಂಗಿಕ ತಾರತಮ್ಯ...
ಶ್ರೇಯಾ ಉಕಿಲ್
ಶ್ರೇಯಾ ಉಕಿಲ್
Updated on: 
ಲಂಡನ್: ಪ್ರಮುಖ ಐಟಿ ಸಂಸ್ಥೆ, ಬೆಂಗಳೂರು ಮೂಲದ ವಿಪ್ರೋದ ಭಾರತೀಯ ಮಹಿಳಾ ಸಿಬ್ಬಂದಿಯೊ ಬ್ಬರು ಸಂಸ್ಥೆಯ ಮೇಲೆ ಲೈಂಗಿಕ ತಾರತಮ್ಯ, ಅಸಮಾನ ವೇತನ ಮತ್ತು ಅನ್ಯಾಯದ ವಜಾ ಕುರಿತ ಕೇಸು ದಾಖಲಿಸಿದ್ದು, ರು.  9.92 ಕೋಟಿ ಪರಿಹಾರ ಕೋರಿದ್ದಾರೆ. ವಿಪ್ರೋ ಸಂಸ್ಥೆಯ ಬ್ರಿಟನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಾ ಉಕಿಲ್ (39), ತನ್ನ ವಿವಾಹಿತ ಬಾಸ್ ತನ್ನೊಡನೆ ಅಫೇರ್ ಇಟ್ಟುಕೊಳ್ಳುವಂತೆ ಬಲಾತ್ಕರಿಸಿದ್ದ ಎಂದು ಆರೋಪಿಸಿದ್ದಾಳೆ. ಕೆಲಸದ ಸ್ಥಳದಲ್ಲಿನ ಬಲಿಹಾಕುವ, ಮಹಿಳಾದ್ವೇಷದ ವಾತಾವರಣಕ್ಕೆ ತಾನು ಬಲಿಪಶುವಾಗಿದ್ದೇನೆ ಎಂದು ಆಕೆ ಉದ್ಯೋಗ ಪ್ರಾಧಿಕಾರಕ್ಕೆ ನಿಡಿದ ದೂರಿನಲ್ಲಿ ಅಲವತ್ತುಕೊಂಡಿದ್ದಾಳೆ ಎಂದು ಇಂಡಿಯನ್ ಎಕ್ಸ್ ಪ್ರೆಸ್  ವರದಿ ಮಾಡಿದೆ. ಈಕೆಯ 54ರ ಹರೆಯದ ಬಾಸ್, ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಈಕೆಯನ್ನು `ಅಪ್ಸರೆ' ಎಂದು ಕರೆದಿದ್ದಲ್ಲದೆ, ತನ್ನೊಡನೆ ಅಫೇರ್ ಇಟ್ಟುಕೊಳ್ಳುವಂತೆ ಸೂಚಿಸಿದ್ದ. 2013ರಲ್ಲಿ ಸ್ಟಾಕ್ ಹೋಮ್ ಗೆ ಕೆಲಸದ ಮೇಲೆ ಪ್ರವಾಸ ಹೋದಾಗಈಕೆ ಧರಿಸಿದ್ದ ರೇಷ್ಮೆ ರವಿಕೆ ಈಕೆಯ ದೇಹಕ್ಕೆ `ತುಂಬಾ ಟೈಟ್ ಆಗಿದೆ' ಎಂದಿದ್ದ. ಈತನ ವರ್ತನೆ ಅಸಭ್ಯವಾಗಿದೆ ಎಂದು ತಿಳಿದರೂ ಆಕೆ ಆತನ ಜತೆ ಹೊಂದಿಕೊಂಡು ಹೋಗಿದ್ದಳು.
`ಅಲ್ಲಿ ಆತ್ಮವಿಶ್ವಾಸವುಳ್ಳ, ಸಾಮರ್ಥ್ಯವಂತ, ತಮ್ಮ ಅಭಿಪ್ರಾಯಗಳನ್ನು ದಿಟ್ಟವಾಗಿ ಹೇಳಬಲ್ಲ ಮಹಿಳೆಯರನ್ನು ಭಾವೋದ್ರೇಕಗೊಳ್ಳುವ, ಉನ್ಮತ್ತ, ಮುಟ್ಟು ನಿಲ್ಲುವ ಹಂತದಲ್ಲಿರುವ ಸ್ತ್ರೀಯರೆಂದು ಗೇಲಿ ಮಾಡಲಾಗುತ್ತಿತ್ತು. ಸ್ತ್ರೀರನ್ನು ಬೆಂಬಲಿಸುವ ಸ್ತ್ರೀಯರನ್ನು ಸಲಿಂಗಕಾಮಿಗಳೆಂದು ಚಿತ್ರಿಸಲಾಗುತ್ತಿತ್ತು' ಎಂದು ಆಕೆ ದೂರಿನಲ್ಲಿ ಕೆಂಡ ಕಾರಿದ್ದಾಳೆ. ತನ್ನ ಪುರುಷ ಸಹೋದ್ಯೋಗಿಗಳಿಗೆ 1.2 ಲಕ್ಷ ಪೌಂಡ್ ವೇತನ ನೀಡುತ್ತಿದ್ದರೆ, ತನಗೆ ಕೇವಲ 75 ಸಾವಿರ ಪೌಂಡ್ ನೀಡಲಾಗುತ್ತಿತ್ತು ಎಂದು ಆಕೆ ತಿಳಿಸಿದ್ದಾಳೆ. ಬಾಸ್ ಜತೆಗಿನ ಅಫೇರ್ ಕೊನೆಗೊಳಿಸಿದ ಬಳಿಕ ಆಕೆಯನ್ನು ಕಸದಂತೆ ಕಾಣಲಾಗಿತ್ತು. ಆಕೆಯ ಬಗ್ಗೆ ದೂರುಗಳನ್ನು ನೀಡಲಾಗಿತ್ತು ಎಂದು ಮಾರುಕಟ್ಟೆ ಅಭಿವೃದ್ಧಿ ಮ್ಯಾನೇಜರ್ ಒಬ್ಬರು ಹೇಳಿದ್ದಾರೆ.
ಈ ದೂರಿಗೆ ಪ್ರತಿಕ್ರಿಯೆ ನೀಡಲು ವಿಪ್ರೋ ನಿರಾಕರಿಸಿದೆ. ತಾನು ಎಲ್ಲ ಸಿಬ್ಬಂದಿಗಳನ್ನೂ ಸಮಾನ ಗೌರವದಿಂದ ನೋಡುತ್ತಿದ್ದು, ಯಾವುದೇ ತಾರತಮ್ಯ ಮಾಡುತ್ತಿಲ್ಲ. ಮಹಿಳೆ ಮತ್ತು ಆಕೆಯ ಬಾಸ್ ಇಬ್ಬರನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ. ಈ ಪ್ರಕರಣವನ್ನು ಕೋರ್ಟ್‍ನಲ್ಲಿ ಎದುರಿಸಲಾಗುತ್ತದೆ ಹಾಗೂ ಮಾನಹಾನಿಕರ ದೂರಿಗೆ ಪ್ರತಿದಾವೆ ಹೂಡಲಾಗುತ್ತದೆ ಎಂದು ವಿಪ್ರೋ ಹೇಳಿಕೆ ನೀಡಿದೆ.
ದೂರಿನ ಅಂಶಗಳು
-ಅಫೇರ್ ಇಟ್ಟುಕೊಳ್ಳಲು ಬಲವಂತ
- ಸ್ತ್ರೀಯರಿಗೆ ನಿರಂತರಗೇಲಿ ಅವಮಾನ
- ಮಹಿಳಾ ದ್ವೇಷದ ವಾತಾವರಣಕ್ಕೆ ನಾನು ಬಲಿಯಾಗಿದ್ದೇನೆ
- ನಾನು ತೊಡುವ ಬಟ್ಟೆ ಮೇಲೂ ಕೆಟ್ಟ ಕಮೆಂಟ್ ಎಂದು ಉಲ್ಲೇಖ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com