ಪಾಕ್ ಹುಡುಗಿಯ ಚಿಕಿತ್ಸೆಗೆ ರು.13 ಲಕ್ಷ ನೆರವು ನೀಡಿದ ಭಾರತೀಯರು!

ಪಾಕಿಸ್ತಾನದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದ 15 ವರ್ಷದ ಹುಡುಗಿಗೆ ಭಾರತೀಯರು ರು.13ಲಕ್ಷ ದೇಣಿಗೆ ನೀಡುವ...
ಕರಾಚಿಯ ಸಾಬಾ ತಾರಿಖ್ ಅಹ್ಮದ್(ಚಿತ್ರ ಕೃಪೆ: ಮಿಡ್ ಡೇ)
ಕರಾಚಿಯ ಸಾಬಾ ತಾರಿಖ್ ಅಹ್ಮದ್(ಚಿತ್ರ ಕೃಪೆ: ಮಿಡ್ ಡೇ)
ಮುಂಬೈ: ಪಾಕಿಸ್ತಾನದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದ 15 ವರ್ಷದ ಹುಡುಗಿಗೆ ಭಾರತೀಯರು ರು.13ಲಕ್ಷ ದೇಣಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. 
ಕರಾಚಿಯ ಸಾಬಾ ತಾರಿಖ್ ಅಹ್ಮದ್ ಎಂಬ ಹುಡುಗಿ ಪಾಕಿಸ್ತಾನದಿಂದ ಭಾರತಕ್ಕೆ 49 ದಿನಗಳ ಹಿಂದೆ ಬಂದಿದ್ದಳು. ತನ್ನ ಕಾಯಿಲೆಯೊಂದಕ್ಕೆ ಸಂಬಂಧಿಸಿ ಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಿದ್ದಳು. ಭಾರತೀಯರ ಸಹಕಾರದಿಂದ ಗುಣಮುಖಳಾಗಿ ಈ ಹುಡುಗಿ ಇದೀಗ ತನ್ನ ತವರಿಗೆ ಹಿಂದಿರುಗಿದ್ದಾಳೆ.
ದೇಹದೊಳಗೆ ತಾಮ್ರದ ಅಂಶವೊಂದು ಕ್ರೋಢೀಕರಣಗೊಂಡು ವಿಷಮಯವಾಗುವ ವಿಚಿತ್ರ ಕಾಯಿಲೆಗೆ ಆಕೆಗೆ ಚಿಕಿತ್ಸೆ ನೀಡಲಾಗಿದೆ. ಆಕೆಯ ಚಿಕಿತ್ಸೆಯ ಖರ್ಚಿನಲ್ಲಿ ಸುಮಾರು ರು.13 ಲಕ್ಷ, ಭಾರತೀಯರು ದಾನವಾಗಿ ಸಂಗ್ರಹಿಸಿ ನೀಡಿದ್ದಾರೆ. ಇದೀಗ ಸಂಪೂರ್ಣ ಗುಣಮುಖಳಾಗಿರುವ ಸಾಬಾ ಮತ್ತು ಆಕೆಯ ತಾಯಿ ನಝಿಯಾ ಕರಾಚಿ ವಿಮಾನ ಹತ್ತಿ ಈಗಾಗಲೇ ಪಾಕಿಸ್ತಾನ ತಲುಪಿ ಆಗಿದೆ. ಭಾರತದಲ್ಲಿ ಚಿಕಿತ್ಸೆ ಪಡೆದು, ಇಲ್ಲಿನ ಆತಿಥ್ಯ ಸ್ವೀಕರಿಸಿರುವುದಕ್ಕೆ ತಾಯಿ-ಮಗಳಿಬ್ಬರೂ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. 
ಇಷ್ಟೆ ಅಲ್ಲಾ... ಕಳೆದ ಎಪ್ರಿಲ್ ನಲ್ಲಿಯೂ ಇಂತಹುದೇ ಶಸ್ತ್ರ ಚಿಕಿತ್ಸೆಗೆ ಈ ಹುಡುಗಿ ಒಳಗಾಗಿದ್ದಳು. ಆಗಲೂ ಆಕೆಗೆ ಭಾರತೀಯರು ಸಹಾಯ ಮಾಡಿದ್ದರು. ಆ ಸಂದರ್ಭ ಬ್ಲೂಬೆಲ್ಸ್ ಕಮ್ಯುನಿಟಿ ಎಂಬ ಎನ್ ಜಿ ಒ ಒಂದು ಆಕೆಗೆ ರು.7 ಲಕ್ಷ ಸಂಗ್ರಹ ಮಾಡಿ ದೇಣಿಗೆ ನೀಡಿತ್ತು. ತನಗಿರುವ ವಿಲ್ಸನ್ ನ ಕಾಯಿಲೆಗೆ ನೀಡಲಾಗುತ್ತಿರುವ ಚಿಕಿತ್ಸೆಗೆ ಸಾಬಾಳ ದೇಹ ಸರಿಯಾಗಿ ಸ್ಪಂಧಿಸುತ್ತಿರಲಿಲ್ಲ. ಡಾ. ಆಭಾ ನಗ್ರಲ್ ಎಂಬ ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಕೆಯ ದೈಹಿಕ ಚಲನವಲನಗಳು ಸರಿಯಾಗಲು ಆಕೆಗೆ ಔಷಧಿ ಬದಲಾಯಿಸುತ್ತಿರಬೇಕಾಗುತ್ತದೆ ಎಂದು ಡಾ. ನಗ್ರಲ್ ಹೇಳುತ್ತಾರೆ.
ಸಾಬಾ ತಾಯಿ ನಝಿಯಾ ಬ್ಲೂಬೆಲ್ಸ್ ಸಂಸ್ಥೆಯನ್ನು ಭೇಟಿಯಾಗಿ ತನ್ನ ಕಷ್ಟವನ್ನು ತೋಡಿಕೊಂಡಿದ್ದರು. ಹೀಗಾಗಿ ಸಂಸ್ಥೆಯು ಮಾಡಿದ ಆನ್ ಲೈನ್ ಮನವಿಗೆ ಭಾರತದಿಂದ ಸಾಕಷ್ಟು ನೆರವು ಲಭ್ಯವಾಯಿತು. ಹೀಗಾಗಿ ಕಳೆದ ಆಗಸ್ಟ್ 15ರಂದು ತಾಯಿ ಮಗಳು ಚಿಕಿತ್ಸೆಗಾಗಿ ಕರಾಚಿಯಿಂದ ಭಾರತಕ್ಕೆ ಬಂದಿದ್ದರು. ಆಗ ಮೂರು ತಿಂಗಳಿನ ಚಿಕಿತ್ಸೆಗಾಗಿ ರು.10 ಲಕ್ಷ ಸಂಗ್ರಹವಾಗಿತ್ತು.
ಈ ಕಾಯಿಲೆಗೆ ಭಾರತ ಅಥವಾ ಪಾಕಿಸ್ತಾನದಲ್ಲಿ ಪರ್ಯಾಯ ಉಚಿತ ಔಷಧಿಗಳಿಲ್ಲ. ಹೀಗಾಗಿ ಸಾಬಾಳ ಕತೆಯನ್ನು ಎನ್ ಜಿ ಒ ಮುಖೇನ ಆನ್ ಲೈನ್ ಮಾಹಿತಿ ಪ್ರಕಟಿಸಲಾಯಿತು. ಈ ಸಂಬಂಧ ಅಮೆರಿಕನ್ ಎನ್ ಜಿ ಒ ರಶೇಲ್ ಆ್ಯಂಡ್ ಡ್ರೂ ಕಾಟ್ಜ್ ಫೌಂಡೇಶನ್ ಸಂಸ್ಥೆಯು ರು.4 ಲಕ್ಷ ದೇಣಿಗೆ ನೀಡಿತು ಮತ್ತು ಲಂಡನ್ ಮೂಲದ ಸಂಸ್ಥೆಯೊಂದು ಉಚಿತ ಔಷಧಿಯ ಪ್ರಾಯೋಜಕತ್ವ ನೀಡಿತು ಎಂದು ಬ್ಲೂಬೆಲ್ಸ್ ಕಮ್ಯೂನಿಟಿಯ ವಾಲಿಯಾ ಎಂಬವರು ವಿವರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com