
ವಾಷಿಂಗ್ಟನ್: ಗುರುದಾಸ್‍ಪುರದಲ್ಲಿ 3 ತಿಂಗಳ ಹಿಂದೆ ನಡೆದ ದಾಳಿಗೆ ಸಂಬಂಧಿಸಿ ಪಾಕಿಸ್ತಾನವನ್ನು ಅಮೆರಿಕ ತರಾಟೆಗೆ ತೆಗೆದುಕೊಂಡ ವಿಚಾರ ಈಗ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಈ ದಾಳಿಗೂ, ನಮಗೂ ಸಂಬಂಧವೇ ಇಲ್ಲ ಎಂದಿದ್ದ ಪಾಕ್‍ಗೆ ಅಮೆರಿಕ ಸೂಕ್ತ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡೇ ಜಾಡಿಸಿದೆ.
ಇತ್ತೀಚೆಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಾಷಿಂಗ್ಟನ್ ಭೇಟಿ ವೇಳೆ, ಈ ವಿಚಾರ ಪ್ರಸ್ತಾಪಿಸಿದ್ದ ಅಮೆರಿಕ ಅಧ್ಯಕ್ಷ ಒಬಾಮ, ಗುರುದಾಸ್‍ಪುರ ದಾಳಿಯನ್ನು ನಡೆಸಿದ್ದು ಪಾಕಿಸ್ತಾನದಲ್ಲಿದ್ದ ಸಂಘಟನೆಯಲ್ಲವೇ ಎಂದು ನೇರ ಪ್ರಶ್ನೆ ಹಾಕಿದ್ದರು. ಅಲ್ಲದೆ, ಸೆರೆಸಿಕ್ಕ ಉಗ್ರರಿಂದ ವಶಪಡಿಸಿಕೊಳ್ಳಲಾದ ಜಿಪಿಎಸ್ ಸೆಟ್‍ಗಳೇ ಇದಕ್ಕೆ ಸಾಕ್ಷಿ ಎಂದೂ ಹೇಳಿದ್ದರು ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಯುದ್ಧಕ್ಕೆ ನಾಂದಿಯಾಗುತ್ತಿತ್ತು: ಒಂದು ವೇಳೆ, ಗುರುದಾಸ್‍ಪುರ ದಾಳಿ ವೇಳೆ ಮೃತರ ಸಂಖ್ಯೆ ಹೆಚ್ಚಾಗಿರುತ್ತಿದ್ದರೆ, ಖಂಡಿತಾ ಭಾರತ ಸರ್ಕಾರವು ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರಗಳತ್ತ ದಾಳಿಗೆ ಆದೇಶಿಸುತ್ತಿತ್ತು. ಆಗ ಭಾರತ-ಪಾಕ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುತ್ತಿತ್ತು ಎಂದೂ ಒಬಾಮ ಅವರು ಷರೀಫ್ ಗೆ ಎಚ್ಚರಿಸಿದ್ದರು. ಆರಂಭದಲ್ಲಿ, ಪಾಕಿಸ್ತಾನಿ ರಾಜತಾಂತ್ರಿಕರು, ಗುರುದಾಸ್‍ಪುರ ದಾಳಿಗೂ ಪಾಕ್‍ಗೂ ಸಂಬಂಧವಿಲ್ಲ ಎಂದೇ ವಾದಿಸಿದ್ದರು.
ಆದರೆ, ಯಾವಾಗ ಅಮೆರಿಕವು ಜಿಪಿಎಸ್ ವಿಚಾರ ಪ್ರಸ್ತಾಪಿಸಿತೋ, ಆಗ ಗೊಂದಲಕ್ಕೀಡಾದ ಅಧಿಕಾರಿಗಳು, ತಾಂತ್ರಿಕ ವಿಚಾರ ಅಧಿಕೃತವಾಗಿ ದೃಢಪಟ್ಟಿಲ್ಲ ಎನ್ನುತ್ತಾ ಜಾರಿಕೊಂಡರು ಎಂದೂ ಹೇಳಲಾಗಿದೆ. ದಾಳಿ ವೇಳೆ ವಶಪಡಿಸಿಕೊಳ್ಳಲಾದ ಜಿಪಿಎಸ್ ಮೊದಲು ಆನ್ ಆಗಿದ್ದು ಪಾಕ್ ವಾಯುನೆಲೆ ಸರ್ಗೋಧಾದಲ್ಲಿ. ಅದೂ ದಾಳಿಗೆ 6 ದಿನ ಮುಂಚೆ(ಜು.21). ಜುಲೈ 27ರಂದು ದಾಳಿ ನಡೆದಿದ್ದು, ಎಸ್ಪಿ ಸೇರಿದಂತೆ 7 ಮಂದಿ ಮೃತಪಟ್ಟಿದ್ದರು.
Advertisement