
ಲಂಡನ್: ನಾಲೆಯೊಂದರಲ್ಲಿ ಅಯಸ್ಕಾಂತ ಹಿಡಿದು ಕಬ್ಬಿಣದ ಚೂರುಗಳನ್ನು ಹುಡುಕ ಹೊರಟ ೮ ವರ್ಷದ ಬಾಲಕನಿಗೆ ಅಚ್ಚರಿ ಕಾದಿತ್ತು. ಸ್ಫೋಟಗೊಳ್ಳದ ಎರಡನೇ ವಿಶ್ವಯುದ್ಧದ ಗ್ರೆನೇಡಗಳನ್ನು ಅವನು ಹೊರಗೆಳೆದಿದ್ದ.
ತನ್ನ ಅವಳಿ ಸಹೋದರನೊಂದಿಗೆ ತನ್ನ ತಾತನ ಹಡಗಿನಲ್ಲಿ ಕೂತು ಶಕ್ತಿಯುತ ಅಯಸ್ಕಾಂತ ಹಿಡಿದು ಕಬ್ಬಿಣದ ಚೂರುಗಳನ್ನು ಶಾಲಾ ಬಾಲಕನೊಬ್ಬ ನಾಲೆಯಲ್ಲಿ ಹುಡುಕಹೊರಟಿದ್ದ. ಇಟಲಿ ಮೂಲದ ಈ ಬಾಲಕರ ಅಯಸ್ಕಾಂತಕ್ಕೆ ಸಿಕ್ಕಿಬಿದ್ದದ್ದು ಗ್ರೇನೇಡಗಳೆಂದು ತಿಳಿದಾಕ್ಷಣ ಅವರ ಅಜ್ಜ ಜೇಮ್ಸ್ ಬೋಲ್ಟನ್ ಅವರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಫೋಟಗೊಳ್ಳದ ಈ ಗ್ರೆನೇಡ್ಗಳನ್ನು ಎಚ್ಚರಿಕೆಯಿಂದ ತೆಗೆದಿಟ್ಟ ಅಜ್ಜ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸೇನೆಯ ತಂತ್ರಜ್ಞರು ಬಂದು ಇವುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಅಧಿಕಾರಿಗಳು ಈ ಗ್ರೆನೇಡ್ ಗಳನ್ನು ನಿಷ್ಕ್ರಿಯಗೊಳಿಸುವುದಕ್ಕೂ ಮೊದಲು, ಆ ಪ್ರದೇಶವನ್ನು ಸುತ್ತುವರಿದು ಬಾಂಬ್ ನಿಷ್ಕ್ರಿಯ ದಳ, ಆಂಬ್ಯುಲೆನ್ಸ್ ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಈ ಗ್ರೆನೇಡ್ ಗಳು ಎರಡನೇ ವಿಶ್ವಯುದ್ಧದವು ಎಂದು ಅಧಿಕಾರಿಗಳು ಧೃಢೀಕರಿಸಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಯ್ಯಲು ಸುರಕ್ಷಿತವಾದವು ಎಂದು ತಿಳಿಸಿದ್ದಾರೆ.
Advertisement