ಡೆನ್ಮಾರ್ಕಿನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋದ ನಿರಾಶ್ರಿತರು

ಜರ್ಮನಿಯಿಂದ ರೈಲಿನಲ್ಲಿ ಸ್ವೀಡನ್ ಗೆ ತೆರಳುತ್ತಿದ್ದ ದೊಡ್ಡ ಗುಂಪಿನ ನಿರಾಶ್ರಿತರು ಡೆನ್ಮಾರ್ಕಿನಲ್ಲಿ ಚದುರಿ ಪೊಲೀಸರ ಕಣ್ತಪ್ಪಿಸಿ ಓಡಿ ಹೋದ ಘಟನೆ ನಡೆದಿದೆ
ಸಿರಿಯನ್ ನಿರಾಶ್ರಿತರು (ಸಂಗ್ರಹ ಚಿತ್ರ)
ಸಿರಿಯನ್ ನಿರಾಶ್ರಿತರು (ಸಂಗ್ರಹ ಚಿತ್ರ)

ಕೋಪನ್ ಹೇಗನ್: ಜರ್ಮನಿಯಿಂದ ರೈಲಿನಲ್ಲಿ ಸ್ವೀಡನ್ ಗೆ ತೆರಳುತ್ತಿದ್ದ ದೊಡ್ಡ ಗುಂಪಿನ ನಿರಾಶ್ರಿತರು ಡೆನ್ಮಾರ್ಕಿನಲ್ಲಿ ಚದುರಿ ಪೊಲೀಸರ ಕಣ್ತಪ್ಪಿಸಿ ಓಡಿ ಹೋದ ಘಟನೆ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜರ್ಮನಿಯಿಂದ ಸ್ವೀಡನ್ ಗೆ ತೆರಳುತ್ತಿದ್ದ ರೈಲು ಡ್ಯಾನಿಶ್ ಬಂದರು ನಗರ ರಾಡ್ಬಿಯಲ್ಲಿ ನಿಲ್ಲಿಸಿತ್ತು.

ಪೊಲೀಸರ ಪ್ರಕಾರ ಜರ್ಮನಿಯಿಂದ ೭೫ ಜನ ನಿರಾಶ್ರಿತರನ್ನು ಹೊತ್ತ ರೈಲು ಭಾನುವಾರ ಸಂಜೆ ರಾಡ್ಬಿ ನಿಲ್ದಾಣದಲ್ಲಿ ನಿಂತಿತ್ತು. ನಿರಾಶ್ರಿತರಿಗೆ ಆಹಾರ ಮತ್ತು ನೀರು ನೀಡಲಾಗಿ, ೧೦೦ ಜನ ನಿರಾಶ್ರಿತರನ್ನು ಹೊತ್ತ ಮತ್ತೊಂದು ರೈಲು ಬರಲು ಕಾಯುತ್ತಿದ್ದರು. ಆದರೆ ಒಂದು ಗಂಟೆಯ ನಂತರ ಈ ಎರಡನೆಯ ರೈಲು ಬಂದ ಮೇಲೆ, ಅಲ್ಲಿ ಗೊಂದಲವೇರ್ಪಟ್ಟು ನೆರೆದಿದ್ದ ಹಲವಾರು ನಿರಾಶ್ರಿತರು ಹತ್ತಿರದ ಪ್ರದೇಶಗಳಿಗೆ ಚದುರಿ ಓಡಿಹೋದರು ಎಂದು ತಿಳಿದುಬಂದಿದೆ.

ಪೊಲೀಸರ ಅಂದಾಜಿನ ಪ್ರಕಾರ ಸುಮಾರು ೧೦೦ ನಿರಾಶ್ರಿತರು ನಿಲ್ದಾಣದಿಂದ ಓಡಿ ಹೋಗಿದ್ದಾರೆ. ಆದರೆ ತಡ ರಾತ್ರಿಯ ನಂತರ ಚದುರಿಹೋಗಿದ್ದ ನಿರಾಶ್ರಿತರನ್ನೆಲ್ಲಾ ಗುರುತಿಸಿ ಮತ್ತೆ ನಿಲ್ದಾಣಕ್ಕೆ ತರಲಾಗಿದೆ.

ನೊಂದಾಯಿಸಿಕೊಂದಿರುವ ಬಹುತೇಕ ನಿರಾಶ್ರಿತರು ಸಿರಿಯಾ ನಿವಾಸಿಗಳಾಗಿದ್ದರು ಆದರೆ ಅವರಕ್ಕಿ ಕೆಲವು ಇರಾಕಿಗಳು ಮತ್ತು ಆಫ್ರಿಕಾ ದೇಶದವರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ಓಡಿ ಹೋಗಿದ್ದ ಬಹುತೇಕ ನಿರಾಶ್ರಿತರು ಸ್ವೀಡನ್ ನಲ್ಲಿ ನೆಲೆಸಲು ಬಯಸಿ ಅಲ್ಲಿಗೆ ಟಿಕೆಟ್ ಕೊಂಡಿದ್ದರು. ಇನ್ನುಳಿದವರು ಡೆನ್ಮಾರ್ಕ್ ನಲ್ಲಿ ಆಶ್ರಯ ಪಡೆಯಬಯಸಿದ್ದರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com