
ರೋಮ್: ಈಗೇನೋ ಪ್ರೇಮಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬೇಕೆಂದಿದ್ದರೆ, ಫೋನ್ ಮಾಡಿ ಮಾತಾಡಬಹುದು, ವಾಟ್ಸ್ ಆ್ಯಪ್ ನಲ್ಲಿ ಸಂದೇಶ ಕಳುಹಿಸಬಹುದು, ಫೇಸ್‍ಬುಕ್‍ನಲ್ಲೋ, ಇಮೇಲ್‍ನಲ್ಲೋ ವಿವರವಾಗಿ ಪ್ರೇಮದ ಕಾದಂಬರಿಯೇ ಬರೆಯಬಹುದು.
ಆದರೆ, ಕೆಲವು ವರ್ಷ ಹಿಂದಕ್ಕೆ ಸಾಗಿ ನೋಡಿ. ಆಗ ಈ ಮೊಬೈಲ್ ಸಾಮಾಜಿಕ ತಾಣಗಳೆಂದರೆ ಏನೆಂದೇ ಗೊತ್ತಿರಲಿಲ್ಲ. ಅವರು ಏನೇ ಸಂದೇಶಗಳಿದ್ದರೂ ಪತ್ರದ ಮೂಲಕವೇ ಕಳುಹಿಸಬೇಕಾಗಿತ್ತು. ಇದಾದರೂ ಓಕೆ. ಆದರೆ ಅಕ್ಷರ ಜ್ಞಾನವೇ ಇಲ್ಲದವರು ಏನು ಮಾಡಬೇಕು? ಇದಕ್ಕೆ ಉತ್ತರ ಕೊಟ್ಟಿದ್ದಾಳೆ ಇಟಲಿಯ ಅನಕ್ಷರಸ್ಥೆ.
ಹೌದು. ಮೂವರು ಮಕ್ಕಳ ತಾಯಿಯಾದ ಈಕೆ ವಲಸೆ ಹೋದ ತನ್ನ ಪತಿಗೆ 1970ರಲ್ಲಿ ಪ್ರೇಮ ಪತ್ರ ಬರೆದಿದ್ದಾಳೆ. ಹೇಗೆಂದು ಯೋಚಿಸುತ್ತಿದ್ದೀರಾ? ಬರೀ ಚಿತ್ರಗಳ ಮೂಲಕ. ಆ ಸಮಯದಲ್ಲಿ ಇಟಲಿಯ ಜನಸಂಖ್ಯೆಯ ಶೇ.5.2ರಷ್ಟು ಮಂದಿ ಅನಕ್ಷರಸ್ಥರಾಗಿದ್ದರು. ಹೆಚ್ಚಿನ ಮಹಿಳೆಯರಿಗೆ ಓದಲು, ಬರೆಯಲು ಗೊತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಈ ದಂಪತಿ ಕೋಡ್‍ವರ್ಡ್ ಮೂಲಕ ಬರೆಯುವುದನ್ನು ಎಲ್ಲಿ ಕಲಿತಿದ್ದರೋ ಗೊತ್ತಿಲ್ಲ.
ಅಂತೂ ಆಕೆ ತನ್ನ ಪತಿಗೆ ಚಿತ್ರಗಳೇ ತುಂಬಿದ ಪತ್ರ ಬರೆದಿದ್ದು, ಅದು ಈಗ ಪತ್ತೆಯಾಗಿದೆ ಎಂದು ಕ್ವಾರ್ಟ್ಸ್ ವರದಿ ಮಾಡಿದೆ. ಸಿಲಿಸಿಯನ್ ಲೇಖಕ ಗೆಸುವಾಲ್ಡೋ ಬಫೆಲಿನೋ ಈ ಚಿತ್ರಪತ್ರವನ್ನು ಭಾಷೆಯ ರೂಪಕ್ಕೆ ತಂದಿದ್ದಾರೆ. ನಿರಕ್ಷರ ಚಿತ್ರ ಪತ್ರದ ಸಾರಾಂಶ ಹೀಗಿದೆ ಓ ನನ್ನ ಪ್ರೀತಿಯೇ, ನಿನ್ನ ನೆನಪು ಕಾಡಿ ಕಾಡಿ ನನ್ನ ಹೃದಯ ಗೋಳಾಡುತ್ತಿದೆ. ನಾನು ಮತ್ತು ನಮ್ಮ ಮೂರು ಮಕ್ಕಳು ನಿನ್ನೆಡೆಗೆ ತೋಳನ್ನು ಚಾಚುತ್ತಿದ್ದೇವೆ. ಬಂದು ಬಿಗಿದಪ್ಪಿಕೋ.
ನಾವೆಲ್ಲರೂ ಚೆನ್ನಾಗಿದ್ದೇವೆ. ನಾನು ಮತ್ತು ದೊಡ್ಡ ಮಗನಿಗೆ ಸ್ವಲ್ಪ ಆರೋಗ್ಯ ಸರಿಯಿಲ್ಲ, ಆದರೆ ಗಂಭೀವಾದದ್ದೇನೂ ಇಲ್ಲ. ನಾನು ಈ ಮೊದಲು ಬರೆದ ಪತ್ರಕ್ಕೆ ನೀನು ಪ್ರತಿಕ್ರಿಯಿಸಿಲ್ಲ, ತುಂಬಾ ನಿರಾಸೆಯಾಯಿತು. ನಿಮ್ಮ ಅಮ್ಮನಿಗೆ ಕಾಯಿಲೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾನು ಆಗಾಗ್ಗೆ ಹೋಗಿ ನೋಡಿ ಬರುತ್ತಿದ್ದೇನೆ. ನಾನು ಖಾಲಿ ಕೈಯ್ಯಲ್ಲಿ, ಒಬ್ಬಂಟಿಯಾಗಿ ಹೋಗುತ್ತೇನೆಂದು ಭಾವಿಸಬೇಡ. ಎರಡನೇ ಮಗ ನನ್ನೊಂದಿಗೆ ಬರುತ್ತಾನೆ.
ದೊಡ್ಡವಸಣ್ಣವನನ್ನು ನೋಡಿಕೊಳ್ಳುತ್ತಾನೆ. ಗದ್ದೆಯಲ್ಲಿ ಉಳುಮೆ ಮಾಡಿದ್ದೇವೆ. ಇಬ್ಬರು ಕಾರ್ಮಿಕರಿಗೆ ದಿನ 500 ಪೌಂಡ್ ಕೊಡುತ್ತಿದ್ದೇನೆ. ನಗರ ಚುನಾವಣೆ ನಡೆಯಿತು, ನಾನು ಪಾದ್ರಿ ಸಲಹೆಯಂತೆ ಕ್ರಿಶ್ಚಿಯನ್ ಡೆಮಾಕ್ರಸಿಗೆ ವೋಟು ಹಾಕಿದೆ. ಹ್ಯಾಮರ್ ಮತ್ತು ಸಿಕಲ್ ಇಬ್ಬರೂ ಸೋತು ಸುಣ್ಣವಾದರು. ಯಾರು ಗೆದ್ದರೂ ನಮ್ಮಂಥ ಬಡವರಿಗೇನೂ ಆಗದು. ಈ ಬಾರಿ ನಮ್ಮ ಆಲಿವ್ ಮರದಲ್ಲಿ ಬೇಕಾದಷ್ಟು ಕಾಯಿಗಳಾಗಿವೆ. ನಾನದನ್ನು 4 ಪೌಂಡ್‍ಗೆ ಮಾರುತ್ತೇನೆ.
ದೂರದಲ್ಲಿರುವ ನನ್ನ ಪ್ರಿಯತಮನೇ, ನನ್ನ ಹೃದಯ ಎಂದೆಂದಿಗೂ ನಿನ್ನನ್ನೇ ಸ್ಮರಿಸುತ್ತದೆ. ಕ್ರಿಸ್ ಮಸ್ ಹತ್ತಿರ ಬರುತ್ತಿರುವಂತೆ ನಾನು ನಿನ್ನೊಂದಿಗೇ ಇರಬೇಕಿತ್ತು ಎಂದನಿಸುತ್ತದೆ. ನಾನು ಮತ್ತು ನಮ್ಮ ಮಕ್ಕಳಿಂದ ನಿನಗೊಂದು ಬಿಸಿಯಪ್ಪುಗೆ. ಗುಡ್‍ಬೈ, ಒಲವೇ, ನನ್ನ ಹೃದಯ ನಿನ್ನದು, ನಾನೆಂದಿಗೂ ನಿನಗೆ ಆಭಾರಿ, ನಮ್ಮ ಎರಡು ಉಂಗುರಗಳಂತೆಯೇ ಎಂದೆಂದೂ ನಿನ್ನೊಂದಿಗೇ ಬೆರೆತಿರುತ್ತೇನೆ.
Advertisement