
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕೀಯ ಹಾಗೂ ಸೇನೆಯ ಪ್ರಾಬಲ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು ಅವರೊಬ್ಬ ಚತುರ ರಾಜಕಾರಣಿ ಎಂದು ಪಾಕಿಸ್ತಾನ ದೈನಿಕ ವರದಿ ಮಾಡಿದೆ.
ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಬಗ್ಗೆ ಸಂಪಾದಕೀಯ ಬರೆದಿರುವ ಪಾಕಿಸ್ತಾನದ "ದಿ ನೇಷನ್" ಪತ್ರಿಕೆ ಅಮೆರಿಕಾ ನರೇಂದ್ರ ಮೋದಿ ಅವರನ್ನು ತಾರೆಯಂತೆ ಸ್ವಾಗತಿಸಿತು ಎಂದು ಹೇಳಿದೆ. ರಾಜಕಾರಣಿಗಳ ನಡುವಿನ ಸ್ನೇಹವನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗು ನವಾಜ್ ಷರೀಫ್ ವಿಷಯದಲ್ಲಿ ಹಲವು ಗಂಭೀರ ಸಮಸ್ಯೆಗಳಿವೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದಲ್ಲಿ ಪ್ರಸಿದ್ಧ ತಾರೆಯಂತೆ ಸ್ವಾಗತಿಸಲಾಯಿತು. ಆದರೆ ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಪರಿಣಾಮ ಉಂಟುಮಾಡಲು ಇರುವ ವೇದಿಕೆ ವಿಶ್ವಸಂಸ್ಥೆಯೊಂದೇ ಎಂದು ಪತ್ರಿಕೆ ಹೇಳಿದೆ. ಅಭಿವೃದ್ಧಿ ಬಗ್ಗೆ ವಿಶ್ವಸಂಸ್ಥೆ ಆಯೋಜಿಸಿರುವ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞಾನ ಸಂಸ್ಥೆಗಳ ದಿಗ್ಗಜರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಅಮೆರಿಕಾದಲ್ಲೇ ಇರುವ ನವಾಜ್ ಷರೀಫ್ ಏನು ಮಾಡುತ್ತಿದ್ದಾರೆ ಎಂದು ಪತ್ರಿಕೆ ಪ್ರಶ್ನಿಸಿದೆ. ನರೇಂದ್ರ ಮೋದಿ ಭಾರತೀಯ ಸಮುದಾಯದವರೊಂದಿಗೆ ಬಾಂಧವ್ಯ ಬೆಸೆಯಲು ಯತ್ನಿಸುತ್ತಿದ್ದರೆ, ಇತ್ತ ಪಾಕಿಸ್ತಾನದ ಪ್ರತಿಷ್ಠೆಗೆ ಮತ್ತಷ್ಟು ಪುಷ್ಠಿ ನೀಡುವ ದೃಷ್ಟಿಯಿಂದ ನವಾಜ್ ಷರೀಫ್ ಅಮೆರಿಕ ಅಧ್ಯಕ್ಷರೊಂದಿಗೆ ಉರ್ದುವಿನಲ್ಲಿ ಮಾತನಾಡುವ ಸಾಹಸ ಮಾಡುತ್ತಿದ್ದಾರೆ ಎಂದು ದಿ ನೇಷನ್ ಟೀಕಿಸಿದೆ. ನರೇಂದ್ರ ಮೋದಿ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪಾಕಿಸ್ತಾನದ ಪತ್ರಿಕೆಯ ಸಂಪಾದಕೀಯ ಎಚ್ಚರಿಕೆ ನೀಡಿದೆ.
Advertisement