
ಕಠ್ಮಂಡು: ಹೊಸ ಸಂವಿಧಾನಕ್ಕೆ ವಿರೋಧ ಮತ್ತು ಆಂತರಿಕ ಬಿಕ್ಕಟ್ಟಿನಿಂದಾಗಿ ನಲುಗುತ್ತಿರುವ ನೇಪಾಳದಲ್ಲಿ ಇಂಧನ ಬಿಕ್ಕಟ್ಟು ಮತ್ತಷ್ಟು ತಾರಕ್ಕೇರಿದ್ದು, ಇಂಧನ ಕೊರತೆಯಿಂದಾಗಿ ನೇಪಾಳ ಜನತೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಿಂಸಾರೂಪ ಪಡೆದುಕೊಂಡಿದೆ. ಹೀಗಾಗಿ ಇಂಡೋ-ನೇಪಾಳ ಗಡಿಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಟ್ರಕ್ ಗಳು ನೇಪಾಳ ಪ್ರವೇಶಿಸಲಾಗದೇ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಕಳೆದ 5 ದಿನಗಳಿಂದ ಸುಮಾರು 10 ಕಿ.ಮೀ ಗೂ ಅಧಿಕ ದೂರದವರೆಗೂ ಟ್ರಕ್ ಗಳು ನಿಂತಿದ್ದು, ನೇಪಾಳದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಟ್ರಕ್ ಗಳನ್ನು ನೇಪಾಳ ರಾಷ್ಟ್ರದೊಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಭಾರತದಿಂದ ನೇಪಾಳಕ್ಕೆ ಹೊರಟಿದ್ದ ಅಗತ್ಯ ವಸ್ತುಗಳನ್ನು ತುಂಬಿಕೊಂಡಿರುವ ಟ್ರಕ್ ಗಳ ಗಡಿಯಲ್ಲೇ ನಿಂತಿರುವುದರಿಂದ ನೇಪಾಳದಲ್ಲಿ ಅಗತ್ಯ ವಸ್ತುಗಳಿಗೆ ಹಾಹಾಕಾರ ಶುರುವಾಗಿದೆ.
ನೇಪಾಳದ ಪ್ರಸ್ತುತ ಬಿಕ್ಕಟ್ಟು ಕುರಿತಂತೆ ಭಾರತವನ್ನು ದೂಷಿಸುತ್ತಿರುವ ನೇಪಾಳಿ ನಾಯಕರು, ಅಗತ್ಯ ವಸ್ತುಗಳ ಟ್ರಕ್ ಗಳನ್ನು ಬಲವಂತವಾಗಿ ಗಡಿಯಲ್ಲಿಯೇ ನಿಲ್ಲಿಸುವ ಮೂಲಕ ಭಾರತ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನೇಪಾಳದ ಮುಂದಿನ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿರುವ ಕೆಪಿ ಓಲಿ ಅವರು, ನೇಪಾಳದಲ್ಲಿ ಜಾರಿಗೆ ತಂದಿರುವ ಹೊಸ ಸಂವಿಧಾನಕ್ಕೆ ಭಾರತದ ವಿರೋಧವಿದ್ದು, ಗಡಿಯಲ್ಲಿ ಅಗತ್ಯ ವಸ್ತುಗಳ ಟ್ರಕ್ ಗಳನ್ನು ತಡೆ ಹಿಡಿಯುವ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಆ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತದ ತಿರುಗೇಟು
ಇನ್ನು ನೇಪಾಳ ರಾಜಕೀಯ ಮುಖಂಡರ ಆರೋಪಗಳನ್ನು ತಳ್ಳಿ ಹಾಕಿರುವ ಭಾರತ, ನೇಪಾಳಿ ನಾಯಕರ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಈಗಾಗಲೇ ಅಗತ್ಯ ವಸ್ತುಗಳನ್ನು ಮತ್ತು ಇಂಧನ ಹೊತ್ತ ಟ್ರಕ್ ಗಳು ಭಾರತದಿಂದ ಹೊರಟು ನೇಪಾಳದ ಗಡಿಯಲ್ಲಿ ನಿಂತಿವೆ. ಗಡಿಗೆ ಬಂದ ಟ್ರಕ್ ಗಳನ್ನು ದೇಶದೊಳಗೆ ಸುರಕ್ಷಿತವಾಗಿ ಕರೆಯಿಸಿಕೊಳ್ಳುವ ಹೊಣೆ ನೇಪಾಳ ಸರ್ಕಾರದ್ದೇ ಹೊರತು, ನಮ್ಮದಲ್ಲ. ನಾವು ಹೋಗಿ ನೇಪಾಳದಲ್ಲಿ ಟ್ರಕ್ ಗಳಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
Advertisement