
ಪ್ಯಾರಿಸ್: ಇಸ್ಲಾಂನ ತೀವ್ರವಾದಿ ರೂಪಗಳು ತನ್ನ ಸೈದ್ಧಾಂತಿಕ ಪ್ರಚಾರ ಯುದ್ಧದ ಮೂಲಕ ಜನರ ಮನಸ್ಸುಗಳನ್ನು ಹೃದಯಗಳನ್ನು ಗೆಲ್ಲುವ ಅಪಾಯವಿದೆ ಎಂದಿದ್ದಾರೆ ಫ್ರಾನ್ಸ್ ಪ್ರಧಾನಿ ಮ್ಯಾನ್ಯುಯೆಲ್ ವಾಲ್ಸ್. 'ಮಹಿಳೆಯರನ್ನು ಬಂಧಿಸಲು' ಬುರ್ಕಾವನ್ನು ಸಾಂಕೇತಿಕವಾಗಿ ಬಳಸುತ್ತಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.
ಸೋಮವಾರ ಇಸ್ಲಾಂ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು ತೀವ್ರವಾದಿಗಳು ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಯುದ್ಧವನ್ನು ಗೆಲ್ಲುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಯೂರೋಪಿನಿಲ್ಲಿ ಅತಿ ಹೆಚ್ಚು ಮುಸ್ಲಿಮರಿಗೆ ಆಶ್ರಯವಾಗಿದೆ ಫ್ರಾನ್ಸ್.
ಮುಂದಿನ ವರ್ಷಗಳಲ್ಲಿ ದೇಶದ ಭದ್ರತಾ ಮತ್ತು ರಕ್ಷಣಾ ಬಜೆಟ್ ಅನ್ನು ಬಹಳಷ್ಟು ಹೆಚ್ಚಿಸಬೇಕು ಏಕೆಂದರೆ ಕಳೆದ ವರ್ಷದ ಎರಡು ಜಿಹಾದಿ ಭಯೋತ್ಪಾದಕ ದಾಳಿಯ ನಂತರ ದೇಶ ನಲುಗಿದೆ ಎಂದಿದ್ದಾರೆ.
"ಈ ತೀವ್ರವಾದಿಗಳು ಮುಸ್ಲಿಮರು ೧% ಮುಸ್ಲಿಂ ಜನಸಂಖ್ಯೆಯಷ್ಟೇ ಇದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಧ್ವನಿ-ಸಂದೇಶಗಳಷ್ಟೇ ಕೇಳಿಬರುತ್ತಿದೆ" ಎಂದಿದ್ದಾರೆ.
ಜನವರಿ ೨೦೧೫ ರಲ್ಲಿ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ನಡೆದ ದಾಳಿ ಮತ್ತು ನವೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ಬಂಧೂಕುಧಾರಿಗಳು ೧೩೦ ಜನರನ್ನು ಕೊಂದ ನಂತರ ಭಯೋತ್ಪಾದನೆ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಫ್ರಾನ್ಸ್.
ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸುವುದನ್ನು ಕೂಡ ಫ್ರಾನ್ಸ್ ನಲ್ಲಿ ನಿಷೇಧಿಸಲಾಗಿದೆ. "ಬುರ್ಖಾ ಫ್ಯಾಶನ್ ಸಂಕೇತವಲ್ಲ. ಇದು ಒಬ್ಬರು ತೊಡುವ ಬಣ್ಣವಲ್ಲ. ಇದು ಮಹಿಳೆಯರ ಬಂಧನ" ಎಂದಿರುವ ಪ್ರಧಾನಿ "ಇದು ಧಾರ್ಮಿಕ ಸೈದ್ಧಾಂತಿಕತೆಯನ್ನು ಹರಡಲು ಮಾಡಿರುವುದು" ಎಂದು ಕೂಡ ಅವರು ತಿಳಿಸಿದ್ದಾರೆ.
Advertisement