
ವೋರ್ಸೆಸ್ಟರ್: ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ 5 ವರ್ಷದ ಪುಟ್ಟ ಮಗುವೊಂದು ತನ್ನ ತಾಯಿಯ ಸಾವಿನ ಸುಳಿವನ್ನು ಪೊಲೀಸರಿಗೆ ನೀಡಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.
ಅಶ್ಚರ್ಯವಾದರೂ ಇದು ಸತ್ಯ. ಈ ಘಟನೆ ನಡೆದಿರುವುದು ಇಂಗ್ಲೆಂಡ್ ನ ವೋರ್ಸೆಸ್ಟರ್ ನಲ್ಲಿ. ವೋರ್ಸೆಸ್ಟರ್ ನ ಗ್ರಾಫ್ಟನ್ ಪ್ರದೇಶದಲ್ಲಿ ಕಳೆದ ಬುಧವಾರ ಬೆಳಗ್ಗೆ ಸುಮಾರು 6 ಗಂಟೆಯ ಹೊತ್ತಿನಲ್ಲಿ ನಡು ರಸ್ತೆಯಲ್ಲಿ ಒಂಟಿಯಾಗಿ ಓಡಾತ್ತಿದ್ದ ಪುಟ್ಟ ಮಗುವೊಂದನ್ನು ಗಮನಿಸಿದ ಭದ್ರತಾ ಅಧಿಕಾರಿ ಥಾಮಸ್ ಮಿಕ್ನಿವಿಕ್ಜ್ ಎಂಬುವವರು ಕೂಡಲೇ ಮಗುವಿನ ಬಳಿ ಹೋಗಿ ಪೋಷಕರ ಬಗ್ಗೆ ವಿಚಾರಿಸಿದ್ದಾರೆ. ಆಗ ತನ್ನ ಪೋಷಕರು ಮನೆಯಲ್ಲಿದ್ದಾರೆ ಎಂದು ಹೇಳಿದ ಮಗು ತನ್ನ ತಾಯಿ ಹುಷಾರಿಲ್ಲದೆ ಮಲಗಿದ್ದಾಳೆ, ಎಷ್ಟು ಕೂಗಿದರೂ ಎದ್ದೇಳುತ್ತಿಲ್ಲ ಎಂದು ಹೇಳಿದ್ದಾಳೆ.
ಮಗುವಿನ ಮಾತು ಕೇಳಿ ಅನುಮಾನಗೊಂಡ ಪೊಲೀಸ್ ಅಧಿಕಾರಿ ಮಗು ನೀಡಿದ ಮಾಹಿತಿ ಮೇರೆಗೆ ಮನೆಗೆ ತೆರಳಿ ನೋಡಿದ್ದಾರೆ. ಮನೆಯ ಬೆಡ್ ರೂಂ ನಲ್ಲಿ ತಾಯಿ ಹೆಣವಾಗಿ ಬಿದ್ದಿದ್ದರೆ, ಮಗುವಿನ ತಂದೆ ತನ್ನ ಕುತ್ತಿಗೆ ಚಾಕು ಹಾಕಿಕೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೂಲಗಳ ಪ್ರಕಾರ ಐದು ವರ್ಷದ ಪುಟ್ಟ ಹೆಣ್ಣುಮಗುವಿನ ತಂದೆ 42 ವರ್ಷದ ಮೈಕೆಲ್ ಶುಗರ್ ಮೆನ್ ಮತ್ತು ತಾಯಿ 36 ವರ್ಷದ ಕೆಲ್ಲಿ ಶುಗರ್ ಮೆನ್ ಎಂದು ತಿಳಿದುಬಂದಿದ್ದು, ವೃತ್ತಿಯಲ್ಲಿ ಮೈಕೆಲ್ ಕಟ್ಟಡದ ಕೆಲಸಗಾರನಾಗಿದ್ದಾನೆ. ಪೊಲೀಸ್ ಮಾಹಿತಿಗಳ ಪ್ರಕಾರ ದಂಪತಿಗಳ ನಡುವೆ ಕೌಟುಂಬಿಕ ಮತ್ತು ಆರ್ಥಿಕ ಕಲಹ ನಡೆದಿದ್ದು, ಇದರಿಂದ ಆಕ್ರೋಶಗೊಂಡಿದ್ದ ಪತಿಯೇ ತನ್ನ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೇ ಸಮಯಕ್ಕಾಗಮಿಸಿದ ಪೊಲೀಸರು ಆತನ ಪ್ರಾಣ ಉಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೈಕೆಲ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಮಗುವನ್ನು ರಕ್ಷಿಸಿದ ಭದ್ರತಾ ಅಧಿಕಾರಿ ಥಾಮಸ್ ಮಿಕ್ನಿವಿಕ್ಜ್ ಕೂಡ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ವಿಚಾರಣೆ ಮುಂದುವರೆದಿದೆ. ಆದರೆ ಮೈಕಲ್ ತನ್ನ ಪತ್ನಿಯನ್ನು ಕೊಂದಿರುವುದನ್ನು ಬಾಲಕಿ ನೋಡಿದ್ದಾಳೆಯೇ ಅಥವಾ ಇಲ್ಲವೇ ಎಂಬ ವಿಚಾರದ ಬಗ್ಗೆ ಗೊಂದಲವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೋಷಕರನ್ನು ಕಳೆದುಕೊಂಡ ಪುಟ್ಟ ಮಗುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಬಳಿಕ ಆಕೆಯನ್ನು ಮಕ್ಕಳ ಮತ್ತು ಕುಟುಂಬ ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
Advertisement