ಭಾರತದ ಹೋರಾಟಕ್ಕೆ ಅಮೆರಿಕ, ಯೂರೋಪ್ ಕೈ ಜೋಡಿಸಬೇಕು: ಬಲೂಚಿಸ್ತಾನ ಮುಖಂಡರು

ಬಲೂಚಿಸ್ತಾನ ಪರ ಭಾರತ ನಡೆಸುತ್ತಿರುವ ಹೋರಾಟಕ್ಕೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಕೈ ಜೋಡಿಸಬೇಕು ಎಂದು ಬಲೂಚಿಸ್ತಾನ ಮುಖಂಡರು ಆಗ್ರಹಿಸಿದ್ದಾರೆ.
ಬಲೂಚ್ ನ್ಯಾಷನಲ್ ಮೂವ್ ಮೆಂಟ್ ಸಂಸ್ಥೆಯ ಅಧ್ಯಕ್ಷ ಖಲೀಲ್ ಬಲೂಚ್ (ಸಂಗ್ರಹ ಚಿತ್ರ)
ಬಲೂಚ್ ನ್ಯಾಷನಲ್ ಮೂವ್ ಮೆಂಟ್ ಸಂಸ್ಥೆಯ ಅಧ್ಯಕ್ಷ ಖಲೀಲ್ ಬಲೂಚ್ (ಸಂಗ್ರಹ ಚಿತ್ರ)

ಕ್ವೆಟ್ಟಾ: ಬಲೂಚಿಸ್ತಾನ ಪರ ಭಾರತ ನಡೆಸುತ್ತಿರುವ ಹೋರಾಟಕ್ಕೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಕೈ ಜೋಡಿಸಬೇಕು ಎಂದು ಬಲೂಚಿಸ್ತಾನ ಮುಖಂಡರು ಆಗ್ರಹಿಸಿದ್ದಾರೆ.

70ನೇ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ದೌರ್ಜನ್ಯವನ್ನು  ಪ್ರಸ್ತಾಪಿಸಿರಿವುದನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಬಲೂಚಿಸ್ತಾನ ಮುಖಂಡರು, ಭಾರತದ ಈ ಹೋರಾಟಕ್ಕೆ ಅಮೆರಿಕ ಮತ್ತು ಯೂರೋಪಿಯನ್ ದೇಶಗಳು ಕೈಜೋಡಿಸಬೇಕು. ಆ ಮೂಲಕ  ಇಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಹಿಂಸಾಚಾರಕ್ಕೆ ಪಾಕಿಸ್ತಾನವೇ ಹೊಣೆ ಎಂಬ ವಿಚಾರವನ್ನು ವಿಶ್ವ ಸಮುದಾಯಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಬಲೂಚ್ ನ್ಯಾಷನಲ್ ಮೂವ್ ಮೆಂಟ್ ಸಂಸ್ಥೆಯ ಅಧ್ಯಕ್ಷ ಖಲೀಲ್ ಬಲೂಚ್ ಅವರು, "ಬಲೂಚಿಸ್ತಾನದಲ್ಲಿ ಧಾರ್ಮಿಕ  ಭಯೋತ್ಪಾದನೆಯನ್ನು ಪಾಕಿಸ್ತಾನ ತನ್ನ ನೀತಿಯಾಗಿ ತೆಗೆದುಕೊಂಡಿದ್ದು, ಇದೇ ಇಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿದೆ. ಭಯೋತ್ಪಾದನೆಯನ್ನು ನಿಯಂತ್ರಿಸುವ ಬದಲು ಅದಕ್ಕೆ  ಪರಿಣಾಮಕಾರಿಯಾಗಿ ತಕ್ಕ ಪ್ರತ್ಯುತ್ತರ ನೀಡಿದರೆ ಮಾತ್ರ ಅದರ ನಾಶವಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಅಮೆರಿಕ ಮತ್ತು ಯೂರೋಪಿಯನ್ ದೇಶಗಳು ಭಾರತಕ್ಕೆ ಬೆಂಬಲವಾಗಿ ನಿಲ್ಲುತ್ತವೆ ಎಂದು ಬಲೂಚಿಸ್ತಾನದ ಪ್ರಜೆಗಳು ಆಶಿಸಿದ್ದಾರೆ. ಪಾಕಿಸ್ತಾನ ಬಲೂಚಿಸ್ತಾನವನ್ನು  ಆಕ್ರಮಿಸಿಕೊಂಡಾಗಿನಿಂದ ಈವರೆಗೂ ಇಲ್ಲಿ ನಡೆದಿರುವ ಎಲ್ಲ ಹಿಂಸಾಚಾರ ಮತ್ತು ಮಾನವೀಯತೆಯ ವಿರುದ್ಧದ ಆಪರಾಧಗಳಿಗೆ ಪಾಕಿಸ್ತಾನವೇ ನೇರ ಹೊಣೆಯಾಗಿದ್ದು, ನಮ್ಮ  ಸ್ವಾತಂತ್ರ್ಯಕ್ಕಾಗಿ ನಾವು ಪಾಕಿಸ್ತಾನದೊಂದಿಗೆ ಐದು ಬಾರಿ ಯುದ್ಧ ಮಾಡಿದ್ದೇವೆ. ಆದರೂ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದಾಗಿ  ಬಲೂಚಿಸ್ತಾನದ ಪ್ರಜೆಗಳಲ್ಲಿ ಹೊಸದೊಂದು ಆಶಾಭಾವ ಮೂಡಿದೆ. ಹೀಗಾಗಿ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಖಲೀಲ್ ಬಲೂಚ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com