
ಕಾಬುಲ್: ಅಫ್ಘಾನಿಸ್ಥಾನದ ಕಾಬುಲ್ ನಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯದ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು 12 ಜನರು ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಮೂವರು ಪೊಲೀಸರು, ಇಬ್ಬರು ಭದ್ರತಾ ಸಿಬ್ಬಂಧಿಗಳು ಸಹ ಮೃತಪಟ್ಟಿದ್ದಾರೆ ಎಂದು ಕಾಬುಲ್ ಪೊಲೀಸ್ ಇಲಾಖೆಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಾಳಿಯಲ್ಲಿ ಒಟ್ಟು 35 ವಿದ್ಯಾರ್ಥಿಗಳು, 9 ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು ಒಟ್ಟು 750 ವಿದ್ಯಾರ್ಥಿಗಳನ್ನು ಹಾಗೂ ಬೋಧಕ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.
ಬಂದೂಕು ಹಾಗೂ ಸ್ಫೋಟಕಗಳಿಂದ ಅಮೆರಿಕನ್ ವಿವಿ ಕ್ಯಾಂಪಸ್ ಮೇಲೆ ದಾಳಿ ನಡೆಸಿದವರ ಪೈಕಿ ಇಬ್ಬರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ದಾಳಿಯ ಬಗ್ಗೆ ಈ ವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. ಕಾಬುಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
Advertisement