
ಅಡೆನ್: ಯೆಮೆನ್ ನ ಅಡೆನ್ ನಗರದಲ್ಲಿ ಭೀಕರ ಉಗ್ರ ದಾಳಿ ಸಂಭವಿಸಿದ್ದು, ಉಗ್ರರ ಆತ್ಮಾಹುತಿ ದಾಳಿಯಲ್ಲಿ ಭಾನುವಾರ ಕನಿಷ್ಠ 30 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಅಡೆನ್ ನಗರದಲ್ಲಿ ಇಂದು ಬೆಳಗ್ಗೆ ಈ ಭೀಕರ ದಾಳಿ ನಡೆದಿದ್ದು, ತಮ್ಮ ತಮ್ಮ ವೇತನ ಪಡೆಯಲು ಸೇನಾ ಶಿಬಿರಕ್ಕೆ ಆಗಮಿಸಿದ್ದ ಸೈನಿಕರು ಸಾವಿಗೀಡಾಗಿದ್ದಾರೆ. ದಕ್ಷಿಣ ಅಡೆನ್ ನಲ್ಲಿರುವ ಪ್ರಮುಖ ಸೇನಾ ಶಿಬಿರ ಅಲ್ ಸಾವ್ಲಬಾದಲ್ಲಿ ವೇತನ ಪಡೆಯಲು ಸಾವಿರಾರು ಸೈನಿಕರು ಒಂದೆಡೆ ಸೇರಿದ್ದರು. ಇದನ್ನೇ ತಮ್ಮ ಕೌರ್ಯಕ್ಕೆ ಬಳಸಿಕೊಂಡ ಉಗ್ರಗಾಮಿಗಳು ಆತ್ಮಹತ್ಯಾ ದಾಳಿಕೋರನಿಗೆ ಸೈನಿಕನ ವೇಷ ಹಾಕಿ ಶಿಬಿರಕ್ಕೆ ಕಳುಹಿಸಿ ಸ್ಫೋಟಿಸಲಾಗಿದೆ. ಸ್ಫೋಟದ ರಭಸಕ್ಕೆಶಿಬಿರದಲ್ಲಿದ್ದ ಯುದ್ಧ ಟ್ಯಾಂಕರ್ ಗಳೇ ಮಗುಚಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ 30 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.
ಅಂತೆಯೇ ಸುಮಾರು 25ಕ್ಕೂ ಹೆಚ್ಚು ಮಂದಿ ಸೈನಿಕರು ಹಾಗೂ ನಾಗರಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸೇನಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
8 ದಿನಗಳ ಹಿಂದಷ್ಟೇ ಇದೇ ಯೆಮನ್ ನಲ್ಲಿ ಮೂಲಭೂತ ವಾದಿಗಳು ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು. ಘಟನೆಯಲ್ಲಿ 48 ಮಂದಿ ಸೈನಿಕರು ಮೃತಪಟ್ಟು 29ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
Advertisement