
ವಾಷಿಂಗ್ಟನ್: ಫ್ರಾನ್ಸ್ ಗುಪ್ತಚರ ಇಲಾಖೆಯ ವೈಫಲ್ಯದಿಂದಾಗಿಯೇ ಪ್ಯಾರಿಸ್ ಮೇಲೆ ಇಸಿಸ್ ಉಗ್ರರು ದಾಳಿ ನಡೆಸಿದ್ದು, ಇಂತಹುದೇ ಮಾದರಿಯ ದಾಳಿ ಅಮೆರಿಕದ ಮೇಲೂ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಹೇಳಿದ್ದಾರೆ.
ಸೋಮವಾರ ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಅವರು, ಗುಪ್ತಚರ ಇಲಾಖೆಯ ವೈಫಲ್ಯದಿಂದಾಗಿಯೇ ಕಳೆದ ವರ್ಷ ನವೆಂಬರ್ ನಲ್ಲಿ ಪ್ಯಾರಿಸ್ ಮೇಲೆ ನಡೆದ ಇಸಿಸ್ ಉಗ್ರ ದಾಳಿ ನಡೆದಿತ್ತು ಎಂದು ಹೇಳಿದ್ದಾರೆ.
"ಪ್ಯಾರಿಸ್ ದಾಳಿ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಗುಪ್ತಚರ ಇಲಾಖೆಯ ವೈಫ್ಯಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಕರಣದಲ್ಲಿ ಹತರಾದ 8 ಉಗ್ರರ ಪೈಕಿ 7 ಮಂದಿ ಫ್ರಾನ್ಸ್ ನಾಗರಿಕರೇ ಆಗಿರುವುದು ಪ್ರಮುಖ ವಿಚಾರ. ತಮ್ಮ ದೇಶದ ಯುವಕರು ಉಗ್ರ ಸಂಘಟನೆಗೆ ಸೇರಿ ಸಿರಿಯಾದಲ್ಲಿ ತರಬೇತಿ ಪಡೆದು ಬಳಿಕ ತಮ್ಮದೇ ನೆಲದ ವಿರುದ್ಧ ಯುದ್ಧಕ್ಕೆ ಸಿದ್ಧರಾದ ವಿಚಾರ ಗುಪ್ತಚರ ಇಲಾಖೆಗೆ ತಿಳಿಯದೇ ಹೋಗಿರುವು ದೊಡ್ಡ ವೈಫಲ್ಯ" ಎಂದು ಅವರು ಬಣ್ಣಿಸಿದ್ದಾರೆ.
ಅಲ್ಲದೆ ಇದೇ ವೇಳೆ ಅಮೆರಿಕದ ಮೇಲೂ ಇಸಿಸ್ ಉಗ್ರ ಸಂಘಟನೆ ಇಂತಹುದೇ ದಾಳಿ ನಡೆಸುವ ಕುರಿತು ಯೋಜನೆ ರೂಪಿಸಿರುವ ಸಾಧ್ಯತೆ ತಳ್ಳಿಹಾಕದ ಜಾನ್ ಬ್ರೆನ್ನನ್, ಯಾವುದೇ ಸಂದರ್ಭದಲ್ಲಿ ಇಸಿಸ್ ಉಗ್ರಗಾಮಿಗಳು ಅಮೆರಿಕದ ಮೇಲೆ ದಾಳಿ ನಡೆಸಬುಹುದು ಎಂದು ಎಚ್ಚರಿಕೆ ನೀಡಿದ್ದಾರೆ.
Advertisement