
ಕಠ್ಮಂಡು: ಬುಧವಾರ ಬೆಳಗ್ಗೆ ನೇಪಾಳದಲ್ಲಿ ನಾಪತ್ತೆಯಾಗಿದ್ದ ಸಣ್ಣ ವಿಮಾನದ ಅವಶೇಷ ಪತ್ತೆಯಾಗಿದೆ ಎಂದು ನೇಪಾಳ ನಾಗರಿಕ ವಿಮಾನಯಾನ ಇಲಾಖೆಯ ನಿರ್ದೇಶಕ ಸಂಜೀವ್ ಗೌತಮ್ ಅವರು ಹೇಳಿದ್ದಾರೆ.
ಸುಮಾರು 23 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಟಾರಾ ವಿಮಾನಯಾನ ಸಂಸ್ಥೆಗೆ ಸೇರಿದ್ದ ಲಘು ವಿಮಾನ ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿತ್ತು. ವಿಮಾನ ವಾಯುಗೋಪುರದ ಸಂಪರ್ಕ ಕಡಿದುಕೊಳ್ಳುತ್ತಿದ್ದಂತೆಯೇ ವಿಮಾನಪತ್ತೆಗಾಗಿ ನೇಪಾಳ ಸೇನೆ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ವಿಮಾನ ದುರಂತಕ್ಕೀಡಾಗಿದ್ದು, ನೇಪಾಳದ ಮ್ಯಾಗ್ಡಿ ಜಿಲ್ಲೆಯ ಧಾನಾ ಗ್ರಾಮದ ಬಳಿ ವಿಮಾನದ ಅವಶೇಷ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಅಧಿಕಾರಿಗಳು ತಿಳಿಸಿರುವಂತೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ಇದ್ದು, ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದವರ ಪೈಕಿ ಮೂವರು ಸಿಬ್ಬಂದಿಗಳು ಮತ್ತು 20 ಮಂದಿ ಪ್ರಯಾಣಿಕರು ಎಂದು ತಿಳಿದುಬಂದಿದೆ. ಅಲ್ಲದೆ ಪ್ರಯಾಣಿಕರಲ್ಲಿ ಓರ್ವ ಚೈನೀಸ್ ಮತ್ತು ಮತ್ತೋರ್ವ ಕುವೈತೀಸ್ ಪ್ರಜೆ ಇದ್ದರು ಮತ್ತು ಇಬ್ಬರು ಪುಟ್ಟ ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.
ನೇಪಾಳದ ಪೋಖರಾದಿಂದ ಪ್ರವಾಸಿ ತಾಣ ಜಾಮ್ಸಮ್ ನತ್ತ ಪ್ರಯಾಣ ಬೆಳೆಸಿದ್ದ ವಿಮಾನ ಟೇಕ್ ಆಫ್ ಆದ 10 ನಿಮಿಷದಲ್ಲಿ ವಾಯುಗೋಪುರದ ಸಂಪರ್ಕ ಕಡಿತಗೊಂಡಿತ್ತು. ವಿಮಾನದ ಪತ್ತೆಗಾಗಿ ನೇಪಾಳ ಸೇನೆಯ 3 ಹೆಲಿಕಾಪ್ಟರ್ ಗಳು, ಹತ್ತಾರು ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದರು.
Advertisement