
ಅಬು ಧಾಬಿ: ಸೆಲ್ಫಿ ತೆಗೆಯುವ ಮೊಬೈಲ್ ಬಂದ ಮೇಲೆ ಅನೇಕ ಮಂದಿಗೆ ಎಲ್ಲೆಂದರಲ್ಲಿ ಸೆಲ್ಫಿ ತೆಗೆಯುವ ಖಯಾಲಿ.ಸೆಲ್ಫಿ ತೆಗೆಯುವ ಭರದಲ್ಲಿ ಎಲ್ಲಿ, ಯಾವ ಸಂದರ್ಭ ಎಂದು ಯೋಚಿಸದ ದಂಪತಿ ಫೋಟೋ ತೆಗೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೊನ್ನೆ ಡಿಸೆಂಬರ್ 31ರಂದು ಮಧ್ಯರಾತ್ರಿ ಹೊಸ ವರ್ಷಾಚರಣೆ ಸಡಗರಕ್ಕೆ ಕೆಲವೇ ಹೊತ್ತಿಗೆ ಮೊದಲು ದುಬೈಯ ಅಡ್ರೆಲ್ ಡೌನ್ ಟೌನ್ 63 ಮಹಡಿಯ ಲಕ್ಸುರಿ ಹೊಟೇಲಿನಲ್ಲಿ ಬೆಂಕಿ ಹತ್ತಿ ಉರಿಯಿತು. ಸುಮಾರು 40 ಮಹಡಿಯವರೆಗೆ ಬೆಂಕಿ ಹತ್ತಿಕೊಂಡಿತ್ತು.ಸುಮಾರು 16 ಮಂದಿ ಗಾಯಗೊಂಡಿದ್ದರು.
ಬೆಂಕಿ ಹತ್ತಿಕೊಂಡ ಹೊಟೇಲ್ ನ ಫೋಟೋ ತೆಗೆದು ಅನೇಕರು ಟ್ವಿಟ್ಟರ್ ನಲ್ಲಿ # ದುಬೈಫೈರ್ ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಪೋಸ್ಟ್ ಮಾಡಿದ್ದರು.
ಆದರೆ ಈ ದಂಪತಿ ಮಾತ್ರ ಬೆಂಕಿ ಹತ್ತಿಕೊಂಡ ಹೊಟೇಲ್ ನ ಮುಂದೆ ನಿಂತು ಸೆಲ್ಫಿ ತೆಗೆದು ಅದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದರು. ಇವರ ಸೆಲ್ಫಿಗೆ ಟ್ವಿಟ್ಟರ್ ಬಳಕೆದಾರರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ''ಇದು ಅತ್ಯಂತ ಸೂಕ್ತವಲ್ಲದ ಸೆಲ್ಫಿಯಾಗಿದೆ. ಜನರು ಮೂರ್ಖರು'' ಎಂದು ಬೈದು ಬರೆದಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೊರಗಿನಿಂದ ಬೆಂಕಿ ಹತ್ತಿಕೊಂಡು ಹೊಟೇಲ್ ನ ಕೆಳಗಿನ ಮಹಡಿಯಿಂದ ಬೆಂಕಿ ಉರಿದು ಮೇಲೆ ವ್ಯಾಪಿಸತೊಡಗಿತು. ಹೊಗೆ ವ್ಯಾಪಿಸಿದ್ದರಿಂದ ಒಬ್ಬ ವ್ಯಕ್ತಿ ಉಸಿರಾಟದ ತೊಂದರೆಯಿಂದ ಹೃದಯಾಘಾತಕ್ಕೀಡಾಗಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ಗಂಭೀರವಾಗಿ ಮತ್ತು ಇತರ 16 ಮಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ವಿಶ್ವದ ಅತಿ ಎತ್ತರ ಕಟ್ಟಡವಾದ ಬುರ್ಜ್ ಖಲಿಫಾದಲ್ಲಿ ನಂತರ ಹೊಸ ವರ್ಷಾಚರಣೆಯನ್ನು ಬಣ್ಣ ಬಣ್ಣದ ಪಟಾಕಿ ಪ್ರದರ್ಶನದ ಮೂಲಕ ಆಚರಿಸಲಾಯಿತು. ದುಬೈ ಹೊಸ ವರ್ಷಾಚರಣೆಗೆ ಪ್ರಸಿದ್ಧ. ಕಳೆದ ವರ್ಷ ಹೊಸವರ್ಷದ ಮಧ್ಯರಾತ್ರಿ ಸುಡುಮದ್ದು ಪ್ರದರ್ಶನದಲ್ಲಿ 4 ಲಕ್ಷದ 79 ಸಾವಿರದ 651 ಪಟಾಕಿಗಳನ್ನು ಸಿಡಿಸುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿತ್ತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
Advertisement