ಅಮೆರಿಕದಲ್ಲಿ ಮಗುವನ್ನು ಅನಾಥಾಲಯದಿಂದ ಪಡೆಯಲು ಹೋರಾಟ ನಡೆಸುತ್ತಿರುವ ಭಾರತೀಯ ಪೋಷಕರು
ನ್ಯೂಯಾರ್ಕ್: ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಎರಡು ತಿಂಗಳ ಮಗುವನ್ನು ಅನಾಥಾಲಯದಿಂದ ಪಡೆಯಲು ಭಾರತೀಯ ಪೋಷಕರು ಹೆಣಗಾಡುತ್ತಿರುವ ಪರಿಸ್ಥಿತಿ ಎದುರಾಗಿದೆ.
ಘಟನೆ ವಿವರ: ಭಾರತದ ಜೈಪುರ ಮೂಲದ ಆಶಿಶ್ ಪರೀಕ್ ಮತ್ತು ವಿದಿಶಾ ದಂಪತಿಗೆ ಕಳೆದ ಅಕ್ಟೋಬರ್ ನಲ್ಲಿ ಮಗುವಾಗಿತ್ತು. ಅದಕ್ಕೆ ಎರಡು ತಿಂಗಳು ಮೊದಲು ಅಂದರೆ ಆಗಸ್ಟ್ ನಲ್ಲಿ ಅವರು ಅಮೆರಿಕಾದ ನ್ಯೂಜೆರ್ಸಿಗೆ ಹೋಗಿ ನೆಲೆಸಿದ್ದರು.ಆಶಿಶ್ ಟಾಟಾ ಕಲ್ಸಲ್ಟೆನ್ಸಿ ಕಂಪೆನಿಯ ಭಾರತೀಯ ಹೊರಗುತ್ತಿಗೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಅಂದು ಮಗು ತನ್ನ ಅಮ್ಮ ವಿದಿಶಾ ಕೈಯಲ್ಲಿದ್ದಾಗ ಆಕಸ್ಮಿಕವಾಗಿ ಜಾರಿತು. ಆಗ ಟಿವಿಗೆ ಹೋಗಿ ಅದರ ತಲೆ ಬಡಿಯಿತು. ರಕ್ತ ಸ್ರಾವವಾಗುತ್ತಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಯ ಒಳಗಿನ ಅಂಗಗಳಿಗೆ ಪೆಟ್ಟಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿಗೆ ಶಸ್ತ್ರಚಿಕಿತ್ಸೆ ನೀಡಿದ ನಂತರ ಗುಣಮುಖವಾಯಿತು. ಆದರೆ ಆಸ್ಪತ್ರೆಯ ಅಧಿಕಾರಿಗಳು ಅನಾಥ ಮಗುವೆಂದು ಭಾವಿಸಿ ಅನಾಥಾಲಯಕ್ಕೆ ಕಳುಹಿಸಿದ್ದರು ಎಂದು ಘಟನೆಯನ್ನು ವಿವರಿಸುತ್ತಾರೆ ಆಶಿಶ್ ಪರೀಕ್ ಅವರ ಸಹೋದರ ಅಭಿಷೇಕ್ ಪರಿಕ್.
ಇದೊಂದು ಆಕಸ್ಮಿಕ ಘಟನೆ. ಆದರೂ ಕೂಡ ಅಮೆರಿಕದ ಅಧಿಕಾರಿಗಳು ಮಗುವಿನ ಕುಟುಂಬದವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇದೀಗ ಮಗುವನ್ನು ವಾಪಸ್ ಪಡೆಯಲು ಪೋಷಕರು ಅಲೆದಾಡುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ