ಪಾಕಿಸ್ತಾನದ ಭಜರಂಗಿ ಭಾಯಿಜಾನ್ "ಅಬ್ದುಲ್ ಸತ್ತಾರ್ ಈಧಿ" ನಿಧನ

ಗೀತಾ ಪ್ರಕರಣದಿಂದ ಭಾರತಕ್ಕೆ ಪರಿಚಿತರಾದ ಪಾಕಿಸ್ತಾನದ ಖ್ಯಾತ ಸಮಾಜಿಕ ಕಾರ್ಯಕರ್ತ ಹಾಗೂ ಈಧಿ ಫೌಂಡೇಷನ್ ನ ನಿರ್ಮಾತೃ ಅಬ್ದುಲ್ ಸತ್ತಾರ್ ಈಧಿ ಕರಾಚಿಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ...
ಭಾರತದ ಗೀತಾಳೊಂದಿಗೆ ಖ್ಯಾತ ಸಮಾಜ ಸೇವಕ ಅಬ್ದುಲ್ ಸತ್ತಾರ್ ಈಧಿ (ಸಂಗ್ರಹ ಚಿತ್ರ)
ಭಾರತದ ಗೀತಾಳೊಂದಿಗೆ ಖ್ಯಾತ ಸಮಾಜ ಸೇವಕ ಅಬ್ದುಲ್ ಸತ್ತಾರ್ ಈಧಿ (ಸಂಗ್ರಹ ಚಿತ್ರ)

ಕರಾಚಿ: ಗೀತಾ ಪ್ರಕರಣದಿಂದ ಭಾರತಕ್ಕೆ ಪರಿಚಿತರಾದ ಪಾಕಿಸ್ತಾನದ ಖ್ಯಾತ ಸಮಾಜಿಕ ಕಾರ್ಯಕರ್ತ ಹಾಗೂ ಈಧಿ ಫೌಂಡೇಷನ್ ನ ನಿರ್ಮಾತೃ ಅಬ್ದುಲ್ ಸತ್ತಾರ್ ಈಧಿ ಕರಾಚಿಯಲ್ಲಿ  ಶುಕ್ರವಾರ ನಿಧನರಾಗಿದ್ದಾರೆ.

88 ವರ್ಷದ ಈಧಿ ಶುಕ್ರವಾರ ನಿಧನರಾಗಿದ್ದು, ತಮ್ಮ ಸಂಯಮ ಮತ್ತು ಉದಾರತೆಯಿಂದಲೇ ಪಾಕಿಸ್ತಾನದಲ್ಲಿ ನಡೆದಾಡುವ ಸಂತ ಎಂದೇ ಖ್ಯಾತಿ ಗಳಿಸಿದ್ದ ಅಬ್ದುಲ್ ಸತ್ತಾರ್ ಈಧಿ ವಯೋ  ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಅಬ್ದುಲ್ ಸತ್ತಾರ್ ಈಧಿ ಅವರು, ಕಳೆದ ಹಲವು ವರ್ಷಗಳಿಂದ ಕಿಡ್ನಿ ಸಂಬಂಧಿತ  ಖಾಯಿಲೆ ಹಾಗೂ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈಧಿ ನಿಧನಕ್ಕೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಸೇರಿದಂತೆ ವಿಶ್ವದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇನ್ನು ಈಧಿ ನಿಧನ ವಿಚಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು  ಟ್ವಿಟರ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಅವರ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಈ ಹಿಂದೆ ಈಧಿ ಅವರು ಅನಾರೋಗ್ಯ ಪೀಡಿತರಾಗಿದ್ದಾಗ ಸ್ವತಃ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೇ ಸರ್ಕಾರದ ವತಿಯಿಂದ ಈಧಿ ಅವರಿಗೆ ವಿದೇಶದ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಒಪ್ಪದ ಅಬ್ದುಲ್ ಸತ್ತಾರ್ ಈಧಿ ಅವರು, ಪಾಕಿಸ್ತಾನದ ಸಾಮಾನ್ಯ ಪ್ರಜೆಗಳಂತೆ ತಾವೂ ಕೂಡ ಇಲ್ಲಿನ ಸಾಮಾನ್ಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ  ಪಡೆಯುವುದಾಗಿ ಹೇಳಿ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದು ಅವರ ಪುತ್ರ ಫೈಸಲ್ ಈಧಿ ಹೇಳಿದ್ದಾರೆ.

ತಮ್ಮ ಸಮಾಜ ಸೇವೆಗಳಿಂದಲೇ ವಿಶ್ವದ ಗಮನ ಸೆಳೆದಿರುವ ಈಧಿ ಫೌಂಡೇಷನ್, ಬಡವರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ, ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಉಚಿತ ವೈದ್ಯಕೀಯ  ಸಂಸ್ಥೆಗಳನ್ನು ಹೊಂದಿದೆ. ಕಳೆದ ವರ್ಷ ಕರಾಚಿಯಲ್ಲಿ ಉಷ್ಣಗಾಳಿ ಸಂಭವಿಸಿ ಲಕ್ಷಾಂತರ ಮಂದಿ ತತ್ತರಿಸಿದ್ದಾಗ ಸರ್ಕಾರೀ ಆಸ್ಪತ್ರೆಗಳಿಗಿಂತ ಮಿಗಿಲಾಗಿ ಈಧಿ ಆಸ್ಪತ್ರೆಯ ಸಿಬ್ಬಂದಿಗಳು  ತುರ್ತಾಗಿ ಸ್ಪಂಧಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಇದೇ ಕಾರಣಕ್ಕಾಗಿ ಅಬ್ದುಲ್ ಸತ್ತಾರ್ ಈಧಿ ಮತ್ತು ಅವರ ಸಂಸ್ಥೆಯನ್ನು ಪಾಕಿಸ್ತಾನದ ಮದರ್ ತೆರೆಸಾ ಎಂದು ಕರೆಯಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com