ಭಯೋತ್ಪಾದನೆ ವಿರುದ್ಧದ ಹೋರಾಟ: ಅಮೆರಿಕಾಗೆ ಪಾಕಿಸ್ತಾನ ಮಿತ್ರನೋ ಶತೃವೋ ಎಂಬ ಬಗ್ಗೆ ಚರ್ಚೆ
ವಾಷಿಂಗ್ ಟನ್: ಭಯೋತ್ಪಾದನೆ ವಿರುದ್ಧದ ಹೋರಾಟದ ವಿಷಯದಲ್ಲಿ ಇಸ್ಲಾಮಾಬಾದ್ ದ್ವಂದ್ವ ನಿಲುವು ಹೊಂದಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಮೆರಿಕ, ಪಾಕಿಸ್ತಾನ ತನಗೆ ಮಿತ್ರನೋ ಶತೃವೋ ಎಂಬ ಬಗ್ಗೆ ಚರ್ಚೆ ನಡೆಸಲಿದೆ.
ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಅಮೆರಿಕ ಕಾಂಗ್ರೆಸ್ ನಲ್ಲಿ ಮುಂದಿನ ವಾರ ಚರ್ಚೆ ನಡೆಯಲಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕಾಗೆ ಪಾಕಿಸ್ತಾನ ಮಿತ್ರ ರಾಷ್ಟ್ರವೋ ಶತೃರಾಷ್ಟ್ರವೋ ಎಂಬುದರ ಬಗ್ಗೆ ಸಂಸದರು ಚರ್ಚೆ ನಡೆಸಲಿದ್ದಾರೆ.
ಅಮೆರಿಕ ಕಾಂಗ್ರೆಸ್ ನಲ್ಲಿ ನಡೆಯಲಿರುವ ಚರ್ಚೆ ಭಯೋತ್ಪಾದನೆಯೊಂದಿಗೆ ಪಾಕಿಸ್ತಾನ ಹೊಂದಿರುವ ದೀರ್ಘಾವಧಿ ನಂಟು ಹಾಗೂ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ನೀತಿಗಳನ್ನು ಮತ್ತೆ ಪರಿಶೀಲನೆ ಮಾಡಲು ಸಹಾಯಕವಾಗಲಿದೆ ಎಂದು ಅಮೆರಿಕ ಭಯೋತ್ಪಾದನೆ ನಿಗ್ರಹ ಉಪಸಮಿತಿಯ ಅಧ್ಯಕ್ಷ ಟೆಡ್ ಪೋ ತಿಳಿಸಿದ್ದಾರೆ.
ಪಾಕಿಸ್ತಾನ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಿತ್ರನೋ ಶತೃವೋ? ಎಂಬ ಶೀರ್ಷಿಕೆಯಡಿ ಚರ್ಚೆಯನ್ನು ಆಯೋಜಿಸಲಾಗಿದೆ. 9/11 ರ ನಂತರವೂ ಅಮೆರಿಕ ತನ್ನ ತೆರಿಗೆದಾರರ ಹತ್ತಾರು ಶತಕೋಟಿ ಡಾಲರ್ ಗಳನ್ನು ಪಾಕಿಸ್ತಾನದ ನೆರವಿಗೆ ನೀಡಿದೆ. ಆದರೂ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತನ್ನ ನಿಲುವನ್ನು ಬದಲಿಸಿಕೊಳ್ಳದೆ 15 ವರ್ಷಗಳಾದರೂ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದು ಪಾಕಿಸ್ತಾನ ಭಯೋತ್ಪಾದನೆ ವಿಷಯದಲ್ಲಿ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ ಎಂದು ಅಮೆರಿಕ ಅನುಮಾನ ವ್ಯಕ್ತಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ