
ಪಲ್ಮೈರಾ: ಭಯೋತ್ಪಾದಕ ಪೀಡಿತ ಸಿರಿಯಾದಲ್ಲಿ ಉಗ್ರ ವಿರುದ್ಧ ದಾಳಿ ನಿರತವಾಗಿರುವ ರಷ್ಯಾ ಸೇನೆಗೆ ಶನಿವಾರ ಭಾರಿ ಹಿನ್ನಡೆಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಕ್ಷಿಪಣಿ ಬಳಕೆ ಮಾಡಿ ರಷ್ಯಾದ ದಾಳಿ ನಿರತ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ.
ಪ್ರತ್ಯಕ್ಷ ದರ್ಶಿಗಳು ತಿಳಿಸಿರುವಂತೆ ಹೆಲಿಕಾಪ್ಟರ್ ದಾಳಿಯಲ್ಲಿ ನಿರತವಾಗಿದ್ದ ವೇಳೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಹೆಲಿಕಾಪ್ಟರ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ವೇಳೆ ದಾಳಿ ಕುರಿತು ಅರಿತ ರಷ್ಯಾ ಪೈಲಟ್ ಗಳು ಹೆಲಿಕಾಪ್ಟರ್ ದಾಳಿಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ಶರವೇಗದಲ್ಲಿ ಬಂದ ಕ್ಷಿಪಣಿ ಹೆಲಿಕಾಪ್ಟರ್ ನ ಭಾಗವನ್ನು ಛಿದ್ರ ಮಾಡಿದೆ. ಹೀಗಿದ್ದೂ ಹೆಲಿಕಾಪ್ಟರ್ ಅನ್ನು ಬೇರೆಡೆ ಒಯ್ಯಲು ಪೈಲಟ್ ಗಳು ಯತ್ನಿಸಿದ್ದರಾದರೂ ಕಾಪ್ಟರ್ ಹಾರುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಕ್ಷಣಮಾತ್ರದಲ್ಲಿ ನೆಲಕ್ಕಪ್ಪಳಿಸಿ ಸ್ಫೋಟವಾಗಿದೆ.
ಘಟನೆಯಲ್ಲಿ ರಷ್ಯಾ ಸೇನೆಯ ಇಬ್ಬರೂ ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ರಷ್ಯಾ ಸೇನಾ ಮೂಲಗಳ ಪ್ರಕಾರ ಪೈಲಟ್ ಗಳಿಬ್ಬರೂ ಇಸಿಸ್ ವಿರುದ್ಧ ರಷ್ಯಾ ಮಿತ್ರಪಡೆಗಳು ಕಾರ್ಯಾಚರಣೆ ನಡೆಸುತ್ತಿರುವ ಪಲ್ಮೈರಾದಲ್ಲಿ ದಾಳಿ ನಡೆಸಿ ಸೇನಾ ಶಿಬಿರಕ್ಕೆ ವಾಪಾಸಾಗುತ್ತಿದ್ದ ವೇಳೆ 2 ಬಾಂಬ್ ಗಳನ್ನು ಇಸಿಸ್ ಸೇನಾ ಶಿಬಿರದ ಮೇಲೆ ಉಡಾಯಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಇಸಿಸ್ ಉಗ್ರರು ಕ್ಷಿಪಣಿ ಬಳಸಿ ಕಾಪ್ಟರ್ ಮೇಲೆ ದಾಳಿ ಮಾಡಿದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಅಲ್ಲದೆ ಪರಸ್ಪರ ದಾಳಿ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಇಸಿಸ್ ಉಗ್ರರ ಕೈಯಲ್ಲಿ ಅಮೆರಿಕ ಕ್ಷಿಪಣಿ?
ಇನ್ನು ರಷ್ಯಾ ಸೇನಾ ಮೂಲಗಳ ಪ್ರಕಾರ ಇಸಿಸ್ ಉಗ್ರರು ಹೆಲಿಕಾಪ್ಟರ್ ಪತನಕ್ಕೆ ಬಳಕೆ ಮಾಡಿದ ಕ್ಷಿಪಣಿ ಅಮೆರಿಕದಲ್ಲಿ ತಯಾರಿಗಿದ್ದು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕ ನಿರ್ಮಿತ ಕ್ಷಿಪಣಿಯನ್ನು ಬಳಕೆ ಮಾಡಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ರಷ್ಯಾ ಸೇನಾ ಮೂಲಗಳು ತಿಳಿಸಿವೆ. ಆದರೆ ಈ ವರೆಗೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ರಷ್ಯಾ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕ ಈ ವರೆಗೂ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
ಈ ರೋಚಕ ವಿಡಿಯೋ ಇಲ್ಲಿದೆ..
Advertisement