ದಕ್ಷಿಣ ಚೀನಾ ಸಾಗರದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಚೀನಾ ಸಿದ್ಧತೆ!

ವಿವಾದಿತ ದಕ್ಷಿಣ ಚೀನಾ ಸಮುದ್ರ ಚೀನಾದ ಐತಿಹಾಸಿಕ ಭಾಗವಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಹೊರತಾಗಿಯೂ ಚೀನಾ ಸರ್ಕಾರ ವಿವಾದಿತ ಪ್ರದೇಶದಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ ಎಂದು ಖ್ಯಾತ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ...
ವಿವಾದಿತ ದಕ್ಷಿಣ ಚೀನಾ ಸಮುದ್ರ (ಸಂಗ್ರಹ ಚಿತ್ರ)
ವಿವಾದಿತ ದಕ್ಷಿಣ ಚೀನಾ ಸಮುದ್ರ (ಸಂಗ್ರಹ ಚಿತ್ರ)

ವಾಷಿಂಗ್ಟನ್: ವಿವಾದಿತ ದಕ್ಷಿಣ ಚೀನಾ ಸಮುದ್ರ ಚೀನಾದ ಐತಿಹಾಸಿಕ ಭಾಗವಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಹೊರತಾಗಿಯೂ ಚೀನಾ ಸರ್ಕಾರ ವಿವಾದಿತ  ಪ್ರದೇಶದಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ ಎಂದು ಖ್ಯಾತ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿರುವಂತೆ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ನೌಕಾ ಪಡೆ ಮೊಬೈಲ್ ಅಣುಸ್ಥಾವರ ಘಟಕವನ್ನು  ನಿರ್ಮಿಸಲು ಮುಂದಾಗಿದೆ ಎಂದು ವರದಿ ಮಾಡಿದೆ. ಈ ಮೊಬೈಲ್ ನೌಕಾ ಅಣುಸ್ಥಾವರದ ಮೂಲಕ ಇಡೀ ದಕ್ಷಿಣ ಹಿಂದೂಮಹಾಸಾಗರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ  ಹವಣಿಸುತ್ತಿದ್ದು, ಇದೇ ಕಾರಣಕ್ಕೆ ಇಲ್ಲಿ ತಾನೇ ನಿರ್ಮಿಸಿರುವ ಕೃತ ದ್ವೀಪಗಳಲ್ಲಿ ತನ್ನ ಸೇನಾಪಡೆಯನ್ನು ನಿಯೋಜಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಈ ವಿವಾದಿತ ಪ್ರದೇಶದಲ್ಲಿ ಚೀನಾ ಸರ್ಕಾರ ಸೇನಾಪಡೆಗಳ ರಕ್ಷಣೆಯಲ್ಲಿ ವಿವಿಧ ವಿದ್ಯುತ್ ಯೋಜನೆಗಳನ್ನು  ಹಮ್ಮಿಕೊಂಡಿದ್ದು, ಇದರಿಂದಾಗಿ ಈ ಪ್ರದೇಶದಲ್ಲಿರುವ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಹವಳದ ದಿಬ್ಬಗಳು ನಾಶವಾಗುತ್ತಿವೆ. ಅಲ್ಲದೆ ಅಳಿವಿನಂಚಿನಲ್ಲಿರುವ ಲಕ್ಷಾಂತರ ಜೀವ  ಪ್ರಬೇಧಗಳು ನಾಶವಾಗುತ್ತಿವೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. 2019ರ ವೇಳೆಗೆ ಚೀನಾದ ಈ ವಿವಾದಿತ ಅಣುಸ್ಥಾವರ ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶಕ್ಕೆ ಮಾನ್ಯತೆ ನೀಡದ ಚೀನಾ
ಇನ್ನು ವಿವಾದಿತ ದಕ್ಷಿಣ ಚೀನಾ ಸಮುದ್ರ ಚೀನಾದ ಐತಿಹಾಸಿಕ ಜಾಗವಲ್ಲ ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಕೂಡ ಚೀನಾ ಸರ್ಕಾರ ಧಿಕ್ಕರಿಸಿದ್ದು,  ನ್ಯಾಯಾಸಯದ ಆದೇಶದ ಹೊರತಾಗಿ ವಿವಾದಿತ ಜಾಗದಲ್ಲಿ ತನ್ನ ಕಾರ್ಯವನ್ನು ಮತ್ತು ಯೋಜನೆಗಳನ್ನು ಮುಂದುವರೆಸಿದೆ. ಇದೇ ಕಾರಣಕ್ಕೆ ಚೀನಾ ಇದೀಗ ವಿಶ್ವ ಸಮುದಾಯದ ಕೆಂಗಣ್ಣಿಗೆ  ಗುರಿಯಾಗಿದ್ದು, ನೆರೆಯ ತೈವಾನ್ ಕೂಡ ಚೀನಾ ವಿರುದ್ಧ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ವಿವಾದಿತ ಪ್ರದೇಶದಲ್ಲಿ ತನ್ನ ಅತ್ಯಾಧುನಿಕ ಯುದ್ಧ ನೌಕೆಯನ್ನು ತೈವಾನ್ ಇಳಿಸಿದ್ದು,  ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.

ನಿನ್ನೆಯಷ್ಟೇ ಚೀನಾ ಸರ್ಕಾರ ಅಮೆರಿಕ ಮತ್ತು ಜಪಾನ್ ದೇಶಗಳನ್ನು "ನಪುಂಸಕ ದೇಶಗಳು" ಮತ್ತು ಕೇವಲ "ಕಾಗದದ ಹುಲಿ" ಎಂದು ಜರಿದು, ದಕ್ಷಿಣ ಚೀನಾ ಸಮುದ್ರದಲ್ಲಿ ಆ ದೇಶಗಳ ಯುದ್ಧ ನೌಕೆಗಳು ಕಾಲಿರಿಸಿದರೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಚೀನಾ ಸರ್ಕಾರದ ಮುಖವಾಣಿಯ ಸಂಪಾದಕೀಯಕ್ಕೆ ವಿಶ್ವಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com