ಟರ್ಕಿ ಸೇನಾ ದಂಗೆ: 60 ಮಂದಿ ಸಾವು, ಸರ್ಕಾರ ಘೋಷಣೆ

ಟರ್ಕಿಯಲ್ಲಿ ಸೇನಾ ಪಡೆಗಳು ಕ್ಷಿಪ್ರಕ್ರಾಂತಿ ನಡೆಸಿದ ಪರಿಣಾಮ ಉಂಟಾದ ಘರ್ಷಣೆಯಲ್ಲಿ ಇದುವರೆಗೆ ನಾಗರಿಕರು, ಪೊಲೀಸರು ಸೇರಿ ಸುಮಾರು 60 ಜನರು ಮೃತಪಟ್ಟಿದ್ದಾರೆ ..
ಟರ್ಕಿಯಲ್ಲಿ ನಡೆದ ಸೇನಾ ದಾಳಿ
ಟರ್ಕಿಯಲ್ಲಿ ನಡೆದ ಸೇನಾ ದಾಳಿ

ಅಂಕಾರಾ: ಟರ್ಕಿಯಲ್ಲಿ  ಸೇನಾ ಪಡೆಗಳು ಕ್ಷಿಪ್ರಕ್ರಾಂತಿ ನಡೆಸಿದ ಪರಿಣಾಮ ಉಂಟಾದ ಘರ್ಷಣೆಯಲ್ಲಿ ಇದುವರೆಗೆ ನಾಗರಿಕರು, ಪೊಲೀಸರು ಸೇರಿ ಸುಮಾರು 60 ಜನರು ಮೃತಪಟ್ಟಿದ್ದಾರೆ ಎಂದು ಟರ್ಕಿ ಸರ್ಕಾರ ಘೋಷಿಸಿದೆ.

ಸಂಸತ್‌ ಮೇಲೆ ಬಾಂಬ್ ದಾಳಿಯೂ ನಡೆದಿದ್ದು, ಇದೂವರೆಗೂ 60 ಮಂದಿ ಗುಂಡಿನದಾಳಿಗೆ ಬಲಿಯಾಗಿದ್ದಾರೆ. ಮೃತ ಪಟ್ಟವರಲ್ಲಿ ಹೆಚ್ಚಿನ ಮಂದಿ ನಾಗರಿಕರೇ ಆಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಸೈನಿಕರು ಅಂಕರದಲ್ಲಿರುವ ಸಂಸತ್ ಭವನದ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ, ಜತೆಗೆ ಸಂಸತ್ ಭವನದ ಬಳಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಸಂಸತ್ ಭವನದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಹಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಸ್ತಾಂಬುಲ್​ನ ಬಾಸ್ಪೋರಸ್ ಸೇತುವೆಯನ್ನು ಸೇನೆ ವಶಕ್ಕೆ ಪಡೆದಿದ್ದು, ಈ ಪ್ರದೇಶದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟರ್ಕಿ ಅಧ್ಯಕ್ಷರ ಅರಮನೆಯ ಬಳಿ ಸಹ ಸೇನಾ ಪಡೆಯ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿವೆ.

ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೋಗನ್ ಸೇನೆಯ ಸಣ್ಣ ತುಕಡಿಯೊಂದು ದಂಗೆ ಎದ್ದಿದೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಟರ್ಕಿಯ ಜನರು ಸರ್ಕಾರಕ್ಕೆ ಬೆಂಬಲ ಸೂಚಿಸಬೇಕು, ಜನರು ರಸ್ತೆಗಿಳಿದು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಭಟನೆ ನಡೆಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ಪ್ರಮುಖ ಸ್ಥಳಗಳಲ್ಲಿ ಜಮೆಯಾಗಿ ಸೈನಿಕರನ್ನು ಹಿಮ್ಮೆಟ್ಟಿಸಬೇಕು ಎಂದು ರಿಸೆಪ್ ಜನತೆಗೆ ಕರೆ ನೀಡಿದ್ದಾರೆ.

ಇನ್ನು ಪ್ರಧಾನಿ ಬಿನಾಲಿ ಯಿಲ್ದಿಮೀರ್  ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಂಸತ್ತಿನ ಪಕ್ಕ ಬಾಂಬ್ ದಾಳಿ ನಡೆದಿದ್ದು, ಕೆಲ ಪೊಲೀಸರಿಗೆ ಗಾಯವಾಗಿದೆ. ಎಲ್ಲಾ ಸಂಸದರೂ ಸುಕ್ಷಿತವಾಗಿದ್ದಾರೆ ಎಂದು ಟರ್ಕಿ ಸಂಸತ್ ಸ್ಪೀಕರ್ ಇಸ್ಮಾಲಿ ಕಹ್ರಾಮನ್ ತಿಳಿಸಿದ್ದಾರೆ.

ಪೊಲೀಸರು ಸೇನೆಯ ಸುಮಾರು 136 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಸ್ತಾಂಬುಲ್ ವಿಮಾನ ನಿಲ್ದಾಣವನ್ನು ಸರ್ಕಾರಿ ಪಡೆಗಳು ಮರು ವಶ ಪಡಿಸಿಕೊಂಡಿದ್ದು, ವಿಮಾನ ಹಾರಾಟವನ್ನು ಪುನಾರಂಭಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com