
ಇಸ್ಲಾಮಾಬಾದ್: ಪಾಕಿಸ್ತಾನದ ಖ್ಯಾತ ಮಾಡಲೆ ಕಂದೀಲ್ ಬಲೂಚ್ ಳನ್ನು ಕೊಂದ ಆಕೆಯ ಸಹೋದರ ಆಕೆಯ ಸಾವು ಆಕೆಯಂತೆ ಇರುವ ನಿರ್ಲಜ್ಜ ಯುವತಿಯರಿಗೆ ಪಾಠವಾಗಬೇಕು ಎಂದು ಹೇಳಿದ್ದಾನೆ.
ಟಿ20 ವಿಶ್ವಕಪ್ ಕ್ರಿಕೆಟ್ ಸರಣಿ ವೇಳೆ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿ ಸುದ್ದಿಯಾಗಿದ್ದ ಪಾಕಿಸ್ತಾನಿ ರೂಪದರ್ಶಿ ಕಂದೀಲ್ ಬಲೂಚ್ ಹತ್ಯೆಯನ್ನು ತಾನೇ ಉದ್ದೇಶ ಪೂರ್ವಕವಾಗಿಯೇ ಮಾಡಿರುವುದಾಗಿ ಆಕೆಯ ಸಹೋದರ ಹೇಳಿದ್ದು, ತಾನು ಮಾಡಿದ ಕೃತ್ಯಕ್ಕೆ ಸಂಬಂಧಿಸಿದಂತೆ ತನಗೇ ಯಾವುದೇ ರೀತಿಯ ಪಾಪ ಪ್ರಜ್ಞೆ ಕಾಡುತ್ತಿಲ್ಲ. ಬದಲಿಗೆ ನಾನು ಸರಿಯಾದ ಕೃತ್ಯವನ್ನೇ ಮಾಡಿದ್ದೇನೆ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ.
ಭಾನುವಾರ ನ್ಯಾಯಾಧೀಶರ ಮುಂದೆ ಮರ್ಯಾದಾ ಹತ್ಯೆ ಆರೋಪಿ ಕಂದೀಲ್ ಬಲೂಚ್ ಸಹೋದರ ಮಹಮದ್ ವಾಸಿಂನನ್ನು ಹಾಜರು ಪಡಿಸಲಾಯಿತು. ಬಳಿಕ ಹೊರಗೆ ಬರುವಾಗ ಮಾಧ್ಯಮದವರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ಆತ ತಾನು ಆಕೆಯನ್ನು ಕೊಲೆ ಮಾಡಿರುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಎಂದು ಹೇಳಿದ್ದಾನೆ. "ಹೌದು ನಾನೇ ಆಕೆಯನ್ನು ಕೊಂದು ಹಾಕಿದೆ. ಆಕೆ ಮನೆಯ ಕೆಳ ಅಂತಸ್ತಿನಲ್ಲಿದ್ದಳು. ನನ್ನ ತಂದೆ-ತಾಯಿ ಮೇಲಿನ ಅಂತಸ್ತಿನಲ್ಲಿ ಇದ್ದರು. ಆಗ ಸಮಯ ಸುಮಾರು ರಾತ್ರಿ 10.45 ಎಂದೆನಿಸುತ್ತದೆ. ನಾನು ಆಕೆಗೆ ಒಂದು ಮಾತ್ರೆ ನೀಡಿ ಬಳಿಕ ಆಕೆಯನ್ನು ಕೊಂದು ಹಾಕಿದೆ ಎಂದು ಹೇಳಿದ್ದಾನೆ.
ಅಂತೆಯೇ ಆತನ ಈ ಕೃತ್ಯದಲ್ಲಿ ಬೇರೆಯಾರಾದರೂ ಭಾಗಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಆತ ನನ್ನೊಂದಿಗೆ ಬೇರೆ ಯಾರೂ ಇರಲಿಲ್ಲ. ನಾನೊಬ್ಬನೇ ಆ ಕೊಲೆ ಮಾಡಿದೆ. ಕೊಲೆಯಿಂದಾಗಿ ನನಗೆ ಯಾವುದೇ ರೀತಿಯ ಮುಜುಗರವಿಲ್ಲ. ಬದಲಿಗೆ ನನ್ನ ಕಾರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಸಹೋದರಿಯ ನಡತೆ ನಿಜಕ್ಕೂ ಸಹಿಸಲಸಾಧ್ಯವಾಗಿತ್ತು ಎಂದು ವಾಸಿಂ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಒಟ್ಟಾರೆ ಮಾಡೆಲ್ ಕಂದೀಲ್ ಬಲೋಚ್ ಹತ್ಯೆ ಇದೀಗ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗುವಂತೆ ಮಾಡಿದ್ದು, ಸ್ಥಳೀಯ ಮಹಿಳಾ ಪರ ಸಂಘಟನೆಗಳು ಇದೀಗ ಪ್ರಕರಣವನ್ನು ಮುಂದಿಟ್ಟುಕೊಂಡು ವ್ಯಾಪಕ ಪ್ರತಿಭಟನೆ ನಡೆಸುತ್ತಿವೆ.
Advertisement